×
Ad

ಜಾರ್ಖಂಡ್: ಮುಸ್ಲಿಂ ವ್ಯಾಪಾರಿಯ ಹತ್ಯೆ ಪ್ರಕರಣ;12 ಮಂದಿ ಗೋರಕ್ಷಕರು ದೋಷಿಗಳು

Update: 2018-03-16 21:36 IST

   ರಾಂಚಿ,ಮಾ.16: ಬೀಫ್ ಸಾಗಾಟದ ಶಂಕೆಯಲ್ಲಿ, 55 ವರ್ಷದ ಮುಸ್ಲಿಂ ವ್ಯಾಪಾರಿಯೊಬ್ಬರನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣದಲ್ಲಿ ಸ್ಥಳೀಯ ಬಿಜೆಪಿ ನಾಯಕ ಸೇರಿದಂತೆ 12 ಮಂದಿ ‘ ಗೋರಕ್ಷಕ’ರನ್ನು ದೋಷಿಗಳೆಂದು ಪರಿಗಣಿಸಿ ಜಾರ್ಖಂಡ್‌ನ ತ್ವರಿತಗತಿಯ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.

ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಮಾರ್ಚ್ 21ರಂದು ಘೋಷಿಸಲಾಗುವುದೆಂದು ರಾಯ್‌ಭಾಗ್ ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶ ಓಂ ಪ್ರಕಾಶ್ ತೀರ್ಪು ಪ್ರಕಟಿಸುತ್ತಾ ತಿಳಿಸಿದ್ದಾರೆ. ಸಂತೋಷ್ ಸಿಂಗ್, ಚೋಟು ವರ್ಮಾ, ದೀಪಕ್ ಮಿಶ್ರಾ, ವಿಕಿ, ಸಿಕಂದರ್ ರಾಮ್, ಉತ್ತಮ್ ರಾಮ್, ವಿಕ್ರಮ್ ಪ್ರಸಾದ್, ರಾಜು ಕುಮಾರ್, ರೋಹಿತ್ ಠಾಕೂರ್, ನಿತ್ಯಾನಂದ ಮಹಾತೊ (ಸ್ಥಳೀಯ ಬಿಜೆಪಿ ನಾಯಕ) ಹಾಗೂ ಕಪಿಲ್ ಠಾಕೂರ್ ಅವರನ್ನು ನ್ಯಾಯಾಲಯ ದೋಷಿಗಳೆಂದು ಪರಿಗಣಿಸಿದೆ.

  ಭಾರತೀಯ ದಂಸಂಹಿತೆಯ ಸೆಕ್ಷನ್ 302 (ಕೊಲೆ)ರಡಿ ಎಲ್ಲಾ ಆರೋಪಿಗಳನ್ನು ತಪ್ಪಿತಸ್ಥರೆಂದು ನ್ಯಾಯಾಲಯ ಪರಿಗಣಿಸಿದ್ದು, ಈ ಅಪರಾಧಕ್ಕೆ ಜೀವಾವಧಿ ಕನಿಷ್ಠ ಶಿಕ್ಷೆಯಾಗಿದ್ದು, ಮರಣ ದಂಡನೆ ಗರಿಷ್ಠ ಶಿಕ್ಷೆಯಾಗಿರುತ್ತದೆ.

 ಇನ್ನೋರ್ವ ಅಪ್ರಾಪ್ತ ವಯಸ್ಸಿನ ಬಾಲಕನನ್ನೂ ದೋಷಿಯೆಂದು ನ್ಯಾಯಾಲಯ ಪರಿಗಣಿಸಿದೆ.

  ಕಳೆದ ವರ್ಷದ ಜೂನ್ 29ರಂದು ಜಾರ್ಖಂಡ್‌ನ ರಾಮ್‌ಘರ್‌ನಲ್ಲಿ ಕಾರಿನಲ್ಲಿ ಬೀಫ್ ಸಾಗಿಸುತ್ತಿದ್ದಾರೆಂಬ ಶಂಕೆಯಲ್ಲಿ 45 ವರ್ಷ ವಯಸ್ಸಿನ ಮುಸ್ಲಿಂ ವ್ಯಾಪಾರಿ ಅಲಿಮುದ್ದೀನ್ ಯಾನೆ ಆಸ್ಗರ್ ಅಲಿ ಅವರನ್ನು 100 ಮಂದಿಯಷ್ಟಿದ್ದ ಗುಂಪೊಂದು ಬರ್ಬರವಾಗಿ ಹೊಡೆದು ಸಾಯಿಸಿತ್ತು. ಬಜರಂಗದಳದ ಕೆಲವೂ ಕಾರ್ಯಕರ್ತರನ್ನೊಳಗೊಂಡಿದ್ದ ಈ ಗುಂಪು, ಆಸ್ಗರ್ ಅಲಿ ಅವರನ್ನು ಹತ್ಯೆಗೈದ ಬಳಿಕ ಅವರ ಮಾರುತಿ ವ್ಯಾನ್‌ಗೆ ಬೆಂಕಿ ಹಚ್ಚಿತ್ತು.

ಗೋರಕ್ಷಣೆಯ ಹೆಸರಿನಲ್ಲಿ ನಡೆದ ಹಿಂಸಾಚಾರದಲ್ಲಿ, ಆರೋಪಿಗಳನ್ನು ದೋಷಿ ಗಳೆಂದು ಪರಿಗಣಿಸಲಾದ ಪ್ರಥಮ ಪ್ರಕರಣ ಇದಾಗಿದೆಯೆಂದು ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ್ದ ಹೆಚ್ಚುವರಿ ಸಾರ್ವಜನಿಕ ಅಭಿಯೋಜಕ ಸುಶೀಲ್ ಕುಮಾರ್ ಶುಕ್ಲಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News