ತಾಂತ್ರಿಕ ದೋಷ: ಫ್ರಾನ್ಸ್‌ಗೆ ವಾಪಸಾದ ಇಂಡಿಗೊ ವಿಮಾನ
ಮುಂಬೈ, ಮಾ.16: ಫ್ರಾನ್ಸ್‌ನ ಟೌಲೋಸ್‌ನಿಂದ ಹೊಸದಿಲ್ಲಿ ಮಧ್ಯೆ ಚೊಚ್ಚಲ ಪ್ರಯಾಣ ಆರಂಭಿಸಿದ್ದ ಇಂಡಿಗೊ ವೈಮಾನಿಕ ಸಂಸ್ಥೆಯ ಹೊಚ್ಚಹೊಸ ಎಟಿಆರ್ ವಿಮಾನವು ಇಂಜಿನ್‌ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದ ಕಾರಣದಿಂದ ಫ್ರಾನ್ಸ್‌ಗೆ ವಾಪಾಸಾದ ಘಟನೆ ಗುರುವಾರ ಸಂಭವಿಸಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ವೈಮಾನಿಕ ಸಂಸ್ಥೆ, ಇಂಡಿಗೊ ವಿಮಾನದಲ್ಲಿ ಯಾರೂ ಕೂಡಾ ಪ್ರಯಾಣಿಕರು ಇರಲಿಲ್ಲ. ವಿಮಾನದಲ್ಲಿ ಕಂಡು ಬಂದ ತಾಂತ್ರಿಕ ದೋಷದಿಂದ ಅದನ್ನು ವಾಪಸ್ ಕರೆಸಿಕೊಳ್ಳಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಮತ್ತು ಹೊಸ ವಿಮಾನಗಳನ್ನು ಹಸ್ತಾಂತರಿಸುವಾಗ ತೆಗೆದುಕೊಳ್ಳಲಾಗುವ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ.
ವಿಮಾನದಲ್ಲಿ ಇದ್ದ ಸಮಸ್ಯೆಯ ಬಗ್ಗೆ ಇಂಡಿಗೊ ಸ್ಪಷ್ಟಪಡಿಸದಿದ್ದರೂ ಮೂಲಗಳ ಪ್ರಕಾರ ಇಂಜಿನ್‌ಗೆ ಸಾಗುವ ತೈಲದ ಒತ್ತಡ ಕಡಿಮೆಯಾಗಿದ್ದುದೇ ಪ್ರಯಾಣವನ್ನು ಮೊಟಕುಗೊಳಿಸಲು ಕಾರಣ ಎಂದು ಮಾಧ್ಯಮಗಳು ವರದಿ ಮಾಡಿವೆ. ಇಂಡಿಗೊ ಎಟಿಆರ್ ವಿಮಾನಗಳಲ್ಲಿ ಪ್ರಾಟ್ ಆ್ಯಂಡ್ ವಿಟ್ನಿ ಇಂಜಿನ್‌ಗಳನ್ನು ಅಳವಡಿಸಲಾಗಿರುತ್ತದೆ. ಈ ಇಂಜಿನ್‌ಗಳಿಂದಾಗಿ ವೈಮಾನಿಕ ಸಂಸ್ಥೆಯು ಈಗಾಗಲೇ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದೆ. ಈ ವಾರದ ಆರಂಭದಲ್ಲಿ ಇಂಡಿಗೊದ 11 ವಿಮಾನಗಳ ಹಾರಾಟವನ್ನು ನಿಯಂತ್ರಣ ಮಂಡಳಿ ತಡೆಹಿಡಿದಿತ್ತು.