ಎಪ್ರಿಲ್‌ನಲ್ಲಿ ಬರಲಿದೆ ಅಕ್ಟೋಬರ್

Update: 2018-03-17 05:02 GMT

ಬಾಲಿವುಡ್‌ನಲ್ಲಿ ಈಗ ಎಲ್ಲಿ ಹೋದರೂ, ‘ಪೀಕು’ ಖ್ಯಾತಿಯ ಶೂಜಿತ್ ಸರ್ಕಾರ್ ನಿರ್ದೇಶನದ ‘ಅಕ್ಟೋಬರ್’ ಚಿತ್ರದ ಬಗ್ಗೆಯೇ ಹೆಚ್ಚು ಮಾತುಗಳು ಕೇಳಿಬರುತ್ತಿವೆ. ಅಪ್ಪಟ ಪ್ರೇಮಕಥಾನಕವನ್ನು ಹೊಂದಿರುವ ‘ಅಕ್ಟೋಬರ್’ನಲ್ಲಿ ನಾಯಕ ನಟ ವರುಣ್ ಧವನ್, ಅತ್ಯಂತ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ತನ್ನ ಮಾಮೂಲಿ ಲವರ್‌ಬಾಯ್ ಅಥವಾ ಕಾಮಿಡಿ ಇಮೇಜ್‌ನಿಂದ ಸಂಪೂರ್ಣವಾಗಿ ವರುಣ್ ಹೊರಬಂದಿದ್ದಾರಂತೆ. ಈ ಬಗ್ಗೆ ಜಾಲತಾಣಗಳಲ್ಲಿ ತಾನಾಗಿಯೇ ಹೇಳಿಕೊಂಡಿರುವ ಈ ನಟ, ತನ್ನ ಹಿಂದಿನ ಚಿತ್ರಗಳಲ್ಲಿ ನೀವು ಕಾಣುತ್ತಿದ್ದಂತಹ ವರುಣ್‌ನನ್ನು ಇಲ್ಲಿ ಕಾಣಲಾರಿರಿ ಎಂದಿದ್ದಾರೆ. ಕಳೆದ ವರ್ಷ ‘ಜುಡ್ವಾ 2’ ನಂತಹ ಹಿಟ್ ಚಿತ್ರವನ್ನು ನೀಡಿರುವ ವರುಣ್ ಸಿನೆಮಾ ಬದುಕಿನಲ್ಲಿ ‘ಅಕ್ಟೋಬರ್’ ಇನ್ನೊಂದು ಮೈಲುಗಲ್ಲಾಗಲಿದೆಯೆಂದು ಚಿತ್ರತಂಡ ಈಗಾಗಲೇ ಆತ್ಮವಿಶ್ವಾಸ ವ್ಯಕ್ತಪಡಿಸಿದೆ. ವರುಣ್‌ರನ್ನು ಚಿತ್ರದ ಪಾತ್ರಕ್ಕೆ ಸಂಪೂರ್ಣವಾಗಿ ತಲ್ಲೀನಗೊಳಿಸುವುದಕ್ಕಾಗಿ, ಅವರಿಗೆ ಶೂಟಿಂಗ್ ಸಮಯದಲ್ಲಿ ಮೊಬೈಲ್ ಫೋನ್ ಬಳಸುವುದಕ್ಕೂ ನಿರ್ದೇಶಕ ಶೂಜಿತ್ ಅನುಮತಿ ನೀಡುತ್ತಿರಲಿಲ್ಲವಂತೆ. ವರುಣ್ ಸಹ ಅಷ್ಟೇ ತನ್ನ ಪಾತ್ರಕ್ಕೆ ಜೀವ ತುಂಬಲು ಶಕ್ತಿ ಮೀರಿ ಶ್ರಮಿಸಿದ್ದಾರೆಂದು ಚಿತ್ರತಂಡ ಮೆಚ್ಚುಗೆಯ ಮಾತುಗಳನ್ನಾಡಿದೆ.

‘ಅಕ್ಟೋಬರ್’ನಲ್ಲಿ ನಾಯಕಿಯಾಗಿ ಜುಹಿ ಚತುರ್ವೇದಿ ನಟಿಸಿದರೆ, ಇನ್ನೋರ್ವ ಪ್ರತಿಭಾವಂತ ಕಲಾವಿದೆ ಬನಿತಾ ಸಂಧು ಮುಖ್ಯಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗೆ ಹತ್ತು ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿರುವ ‘ಅಕ್ಟೋಬರ್’ ಚಿತ್ರವು ಎಪ್ರಿಲ್‌ನಲ್ಲಿ ರಿಲೀಸ್ ಆಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News