ಆರೆಸ್ಸೆಸ್ ಚಿತ್ರದಲ್ಲಿ ಅಕ್ಷಯ್?

Update: 2018-03-18 12:43 GMT

ಆರೆಸ್ಸೆಸ್‌ನ ಸಂಸ್ಥಾಪಕರ ಕುರಿತಾದ ಬಯೋಪಿಕ್ ಚಿತ್ರವೊಂದು ತಯಾರಾಗಲಿದೆಯೇ?. ಹಾಗಂತ ಬಾಲಿವುಡ್ ಅಂಗಳದಲ್ಲಿ ಬಲವಾದ ವದಂತಿಗಳು ಹರಿದಾಡುತ್ತಿವೆ. ಆರೆಸ್ಸೆಸ್‌ನ ಸ್ಥಾಪಕರಾದ ಡಾ.ಕೆ.ಬಿ. ಹೆಡ್ಗೇವಾರ್ ಹಾಗೂ ಗೋಳ್ವಾಲ್ಕರ್‌ರವರ ಜೀವನ ಕಥೆಯನ್ನು ಆಧರಿಸಿದ ಈ ಚಿತ್ರಕ್ಕೆ ‘ಬಾಹುಬಲಿ’ ಖ್ಯಾತಿಯ ಚಿತ್ರ ಸಾಹಿತಿ ವಿಜಯಪ್ರಸಾದ್ ಕಥೆಯೊಂದನ್ನು ಬರೆಯುತ್ತಿದ್ದಾರೆ. ಬರೋಬ್ಬರಿ 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಚಿತ್ರದಲ್ಲಿ ಬಾಲಿವುಡ್‌ನ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಈ ಚಿತ್ರದಲ್ಲಿ ನಟಿಸುವ ಸಾಧ್ಯತೆಯೂ ಇದೆಯಂತೆ. ಒಂದು ವೇಳೆ ಅಕ್ಷಯ್ ಚಿತ್ರದಲ್ಲಿ ನಟಿಸುವುದಿದ್ದರೆ, ಆತ ಹೆಗಡೇವಾರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹಿಂದಿಯ ಜೊತೆ ಕನ್ನಡ, ತೆಲುಗು, ಮರಾಠಿ ಹಾಗೂ ಇತರ ಪ್ರಾದೇಶಿಕ ಭಾಷೆಗಳಿಗೂ ಚಿತ್ರ ಡಬ್ ಆಗಲಿದೆಯೆಂದು ಹೇಳಲಾಗುತ್ತಿದೆ. ಈ ಚಿತ್ರಕ್ಕಾಗಿ ವಿಜಯ್ ಪ್ರಸಾದ್ ಮತ್ತವರ ಬಳಗವು ಸಂಘಪರಿವಾರದ ಹಿರಿಯ ನಾಯಕರ ಬಗ್ಗೆ ವ್ಯಾಪಕ ಅಧ್ಯಯನವನ್ನೇ ನಡೆಸಿದೆ. ನಾಗಪುರದಲ್ಲಿ ಆರೆಸ್ಸೆಸ್ ವರಿಷ್ಠ ಮೋಹನ್ ಭಾಗವತ್ ಮತ್ತಿತರ ಆರೆಸ್ಸೆಸ್ ಮುಖಂಡರ ಜತೆಗೂ ವಿಜಯೇಂದ್ರ ಪ್ರಸಾದ್ ಸಮಾಲೋಚನೆ ಕೂಡಾ ನಡೆಸಿದ್ದಾರೆ.

ಮುಂದಿನ ವರ್ಷ ಲೋಕಸಭಾ ಚುನಾವಣೆ ಹತ್ತಿರವಾಗುವ ಸಂದರ್ಭದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಪ್ಲಾನ್ ಇದೆಯಂತೆ. ಆದಾಗ್ಯೂ ಈ ಬೃಹತ್ ಪ್ರಾಜೆಕ್ಟ್‌ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ಶಾ ಅವರ ಅಶೀರ್ವಾದ ಕೂಡಾ ಇದೆಯಂತೆ.

ಇನ್ನೊಂದೆಡೆ ಶಿವಸೇನೆ ತನ್ನ ಅಧಿನಾಯಕ ಬಾಳಾಠಾಕ್ರೆ ಕುರಿತ ಬಯೋಪಿಕ್ ನಿರ್ಮಿಸುತ್ತಿರುವಾಗ, ಅದಕ್ಕೆ ಸಡ್ಡು ಹೊಡೆಯಲು ಬಿಜೆಪಿ ನಾಯಕರು ಆರೆಸ್ಸೆಸ್ ಕುರಿತ ಪ್ರಾಜೆಕ್ಟ್ ನಿರ್ಮಿಸಲು ಮುಂದಾಗಿದ್ದರೆನ್ನಲಾಗಿದೆ.

ಇಷ್ಟಕ್ಕೂ ಈ ಬಿಗ್‌ಬಜೆಟ್ ಚಿತ್ರಕ್ಕೆ ಯಾರು ಹಣ ಹಾಕುತ್ತಿರುವವರು ಯಾರು ಗೊತ್ತೇ?. ಕರ್ನಾಟಕದ ಬಿಜೆಪಿ ನಾಯಕ ಹಾಗೂ ಲಹರಿ ರೆಕಾರ್ಡಿಂಗ್ ಸಂಸ್ಥೆಯ ಮಾಲಕ ಜಿ.ತುಲಸಿರಾಮ್ ನಾಯ್ಡು ಹಾಗೂ ಅವರ ಸಹೋದರ ಜಿ. ಮನೋಹರ್ ನಾಯ್ಡು ಜೊತೆಯಾಗಿ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಒಂದೆರಡು ತಿಂಗಳುಗಳಲ್ಲಿ ಚಿತ್ರೀಕರಣ ಆರಂಭಗೊಳ್ಳಲಿರುವ ಈ ಚಿತ್ರಕ್ಕೆ ಬಾಲಿವುಡ್‌ನ ಜನಪ್ರಿಯ ನಿರ್ದೇಶಕರೊಬ್ಬರು ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News