ದಿಲ್ಲಿ ದರ್ಬಾರ್

Update: 2018-03-17 18:48 GMT

ಮಾಯಾ ಬಣದಲ್ಲಿ ಮತ್ತೊಬ್ಬ ಚಾಣಕ್ಯ?
ಉತ್ತರ ಪ್ರದೇಶದಿಂದ ಲೋಕಸಭೆಯ ಎರಡು ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಗೆದ್ದ ಕೆಲವೇ ಗಂಟೆಗಳಲ್ಲಿ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್, ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿಯವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದರು. ಅಖಿಲೇಶ್‌ರನ್ನು ಕರೆತರಲು ಮಾಯಾವತಿ ಸ್ವತಃ ಮರ್ಸಿಡೆಸ್ ಕಳುಹಿಸಿಕೊಟ್ಟಿದ್ದರು. ಬಿಎಸ್ಪಿಯ ಬ್ರಾಹ್ಮಣ ಮುಖಂಡ, ಚಾಣಕ್ಯ ಎನಿಸಿಕೊಂಡ ಸತೀಶ್ ಮಿಶ್ರಾ ಈ ಭೇಟಿಯ ರೂವಾರಿ ಎನ್ನಲಾಗಿದೆ. ಅಖಿಲೇಶ್ ಅವರನ್ನು ಕರೆಸಿಕೊಂಡು ಮನವೊಲಿಸಿ, ಮಾಯಾವತಿಯವರನ್ನು ಭೇಟಿ ಮಾಡುವಂತೆ ತಂತ್ರ ರೂಪಿಸಿದ್ದರು ಎನ್ನುವುದು ಆಪ್ತ ಮೂಲಗಳಿಂದ ತಿಳಿದುಬಂದ ಮಾಹಿತಿ. ಬಿಎಸ್ಪಿಅಧಿನಾಯಕಿ ಜತೆ ಮಾತನಾಡಲು ಒಪ್ಪಿಕೊಂಡ ಅಖಿಲೇಶ್, ಭೇಟಿಗೆ ಅವಕಾಶ ಕೋರಿದರು. ಬಿಎಸ್ಪಿ ಬಾಸ್ ಕೂಡಾ ಒಪ್ಪಿಕೊಂಡರು. ಚುನಾವಣಾ ಫಲಿತಾಂಶ ಪ್ರಕಟವಾದ ರಾತ್ರಿ ಉಭಯ ಮುಖಂಡರು ಒಂದು ಗಂಟೆಗೂ ಹೆಚ್ಚು ಕಾಲ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಿದರು. ಬ್ರಾಹ್ಮಣರು ಬಿಎಸ್ಪಿ ತೆಕ್ಕೆಯಿಂದ ಹೊರಹೋದ ಬಳಿಕ ಮಿಶ್ರಾ ಆ ಪಕ್ಷದಲ್ಲಿ ಮೂಲೆಗುಂಪಾಗಿದ್ದರು ಹಾಗೂ ಕಳೆದ ಎರಡು ಚುನಾವಣೆಗಳಲ್ಲಿ ಬಿಜೆಪಿ ಪರ ವಾಲಿದ್ದರು. ಆದರೆ ಇದೀಗ ಯೋಗಿ ಆದಿತ್ಯನಾಥ್ ನೇತೃತ್ವದ ಠಾಕೂರರ ದರ್ಬಾರ್‌ನಲ್ಲಿ ಬ್ರಾಹ್ಮಣರು ಅಲ್ಲೂ ಮೂಲೆಗುಂಪಾಗಿರುವುದರಿಂದ ಬಿಎಸ್ಪಿಯ ಚಾಣಕ್ಯ ಮತ್ತೊಂದು ಯಶಸ್ವಿ ಮೈತ್ರಿಗೆ ಕಾರ್ಯತಂತ್ರ ಹೆಣೆದಿದ್ದಾರೆ. ಯಾದವರು-ಮುಸ್ಲಿಮರು-ದಲಿತರು- ಬ್ರಾಹ್ಮಣರ ಕೂಟ ರಚನೆಯಾದಲ್ಲಿ ಅದು ಉತ್ತರ ಪ್ರದೇಶದಲ್ಲಿ ಸೋಲಿಸಲಾಗದ ಪ್ರಬಲ ಶಕ್ತಿಯಾಗಲಿದೆ.


ಶಹನವಾಝ್ ಪ್ರತಿಷ್ಠೆಗೆ ಧಕ್ಕೆ
ಪ್ರಧಾನಿ ನರೇಂದ್ರ ಮೋದಿ, ಇವರನ್ನು ಸಂಪುಟದಿಂದ ಹೊರಗಿಟ್ಟಿರಬಹುದು; ಆದರೆ ಗೋರಖ್‌ಪುರ ಮತ್ತು ಫೂಲ್‌ಪುರ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಮುಖಭಂಗ ಅನುಭವಿಸಿದ ಬಳಿಕ ಮೋದಿ-ಯೋಗಿ ಆದಿತ್ಯನಾಥ್ ಸರಕಾರವನ್ನು ಸೋಲಿಸುವುದು ಶಹನವಾಝ್ ಹುಸೈನ್ ಅವರಿಗೆ ಬಿಟ್ಟದ್ದು. ಬಿಜೆಪಿಗೆ ನಿಕಟ ಎನಿಸಿಕೊಂಡ ಹಲವು ಮಂದಿ ಹಿಂದಿ ನಿರೂಪಕರು, ಬಿಜೆಪಿ ಎಡವಿದ್ದೆಲ್ಲಿ ಎಂಬ ಪ್ರಶ್ನೆಗೆ ಶಹನವಾಝ್ ಅವರಿಂದ ಉತ್ತರ ಬಯಸಿದರು. ಗೋರಖ್‌ಪುರ ಮತ್ತು ಫೂಲ್‌ಪುರ ಕ್ಷೇತ್ರಗಳಲ್ಲಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರಿಗೆ ಸ್ಫೂರ್ತಿ ತುಂಬುವಂತಹ ಪನ್ನಾ ಪ್ರಮುಖರು ಇಲ್ಲವೇ? ಎಂದು ಮನಸ್ಸಿಗೆ ನಾಟುವಂಥ ಪ್ರಶ್ನೆಗಳನ್ನು ಇವರತ್ತ ಎಸೆದರು. ಇದಕ್ಕೆ ಶಹನವಾಝ್ ಕಾರಣಗಳ ಮೇಲೆ ಕಾರಣಗಳನ್ನು ಕೊಟ್ಟರು. ಸಮಾಜವಾದಿ ಪಕ್ಷದ ನರೇಶ್ ಅಗರ್‌ವಾಲ್ ಬಿಜೆಪಿ ಸೇರಿರುವುದು ಬಿಜೆಪಿಗೆ ಹೇಗೆ ನೆರವಾಗಿದೆ ಎಂದು ಒಬ್ಬ ಪತ್ರಕರ್ತ ಪ್ರಶ್ನಿಸಿದರು. ಬಿಜೆಪಿ ಸೇರಿದ ತಕ್ಷಣ ಅಗರ್‌ವಾಲ್, ಜಯಾ ಬಚ್ಚನ್ ಬಗೆಗೆ ಹಿತಕರವಲ್ಲದ ಮಾತು ಆಡಿದ್ದರು. ಹುಸೈನ್ ನಸುನಕ್ಕರು. ಅಂಥ ಕಠಿಣ ದಿನವನ್ನು ಎದುರಿಸಲು ಬಿಜೆಪಿ ಹೇಗೆ ಇವರನ್ನು ಕಣಕ್ಕೆ ಇಳಿಸಿತು ಎಂಬ ಆರೋಪಗಳು ಕೇಳಿಬಂದವು.


ಹಿಂದಿನ ನಾಯ್ಡು...ಇಂದಿನ ನಾಯ್ಡು
ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಇತ್ತೀಚಿನ ದಿನಗಳಲ್ಲಿ ವ್ಯಗ್ರರಾಗುತ್ತಿದ್ದಾರೆ. ರಾಜ್ಯಸಭೆಯ ಸಭಾಧ್ಯಕ್ಷರಾಗಿ ಪ್ರತೀ ಬಾರಿ ಅವರು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಪ್ರಾಜ್ಞರ ಮೇಲ್ಮನೆ ಸದಾ ಸುವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬೇಕು ಎನ್ನುವುದು ಅವರ ಅಪೇಕ್ಷೆ. ಆದರೆ ಯಾವುದೇ ಪಕ್ಷಕ್ಕೆ ಬಹುಮತ ಇಲ್ಲದ ಹಿನ್ನೆಲೆಯಲ್ಲಿ, ಪದೇ ಪದೇ ಗದ್ದಲ, ಕೋಲಾಹಲ, ಪ್ರತಿಭಟನೆಗಳು ಇಲ್ಲಿ ಸಹಜ. ಸಚಿವರೊಬ್ಬರು ನಾಯ್ಡು ಅವರ ನೋವು ಶಮನಗೊಳಿಸುವ ಪ್ರಯತ್ನಕ್ಕೆ ಮುಂದಾದಾಗ, ‘‘ಇಂಥ ನಡವಳಿಕೆ ಭಾರತಕ್ಕೆ ಒಳಗೂ, ಹೊರಗೂ ಅವಮಾನಕರ’’ ಎಂದು ಸಿಡುಕಿದರು ಎಂದು ಹೇಳಲಾಗಿದೆ. ನಾಯ್ಡು ಅವರು ಕೂಡಾ ವಿರೋಧ ಪಕ್ಷದಲ್ಲಿದ್ದಾಗ, ಕಲಾಪಕ್ಕೆ ತಡೆ ಒಡ್ಡುವಲ್ಲಿ, ಅಡ್ಡಿ ಉಂಟುಮಾಡುವಲ್ಲಿ ಆವೇಶಭರಿತರಾಗಿ ಮುನ್ನುಗ್ಗುತ್ತಿದ್ದರು ಎನ್ನುವುದನ್ನು ನೆನಪಿಸುವುದು ಬಿಟ್ಟರೆ ಸಚಿವರಿಗೆ ಏನೂ ಮಾಡಲಾಗಲಿಲ್ಲ.


ರಾಹುಲ್ ಯೋಜನೆ ಮತ್ತು ಸವಾಲು
ಇಟಲಿಯಲ್ಲಿ ಅಜ್ಜಿಯನ್ನು ಭೇಟಿ ಮಾಡಿದ ನಂತರ ಸಿಂಗಾಪುರ ಹಾಗೂ ಮಲೇಶ್ಯಾ ಪ್ರವಾಸ ಮುಗಿಸಿಕೊಂಡು ರಾಹುಲ್ ವಾಪಸಾಗಿದ್ದಾರೆ. ಆದರೆ ಅವರಿಗೆ ಒಂದು ಕ್ಷಣವೂ ಬಿಡುವಿಲ್ಲ. ಪಕ್ಷದ ಭವಿಷ್ಯವನ್ನು ಉಜ್ವಲಗೊಳಿಸುವ ಹಲವು ಕಲ್ಪನೆಗಳು ಅವರ ಮನಸ್ಸಿನಲ್ಲಿ ಸುತ್ತುತ್ತಿವೆ. ಅವರ ಕಲ್ಪನೆಯಲ್ಲಿ ಮುಂಚೂಣಿಯಲ್ಲಿರುವ ಒಂದು ವಿಚಾರವೆಂದರೆ, ಒಬ್ಬ ಎಐಸಿಸಿ ಪ್ರಧಾನ ಕಾರ್ಯದರ್ಶಿಯನ್ನು ದೇಶದ ಪ್ರತಿ ರಾಜ್ಯಕ್ಕೆ ನಿಯೋಜಿಸುವುದು. ಆದರೆ ಭಾರತದ 29 ರಾಜ್ಯಗಳಿಗೆ ನೇಮಕ ಮಾಡುವುದು ಕಷ್ಟಕರವಾಗಿ ಪರಿಣಮಿಸಿದೆ. ಇದಕ್ಕೆ ಅವರಿಗೆ ಇರುವ ಒಂದು ಸಂಭಾವ್ಯ ಪರಿಹಾರವೆಂದರೆ, 24 ಮಂದಿ ಕಾಂಗ್ರೆಸ್ ಕಾರ್ಯಕಾರಿ ಸದಸ್ಯರನ್ನು ಮತ್ತು ಸುಮಾರು 16 ಮಂದಿ ಪಕ್ಷದ ಕಾರ್ಯದರ್ಶಿಗಳನ್ನು ತೊಡಗಿಸಿಕೊಳ್ಳುವುದು. ತ್ರಿಪುರಾ, ಮೇಘಾಲಯ ಮತ್ತು ಮಣಿಪುರದಲ್ಲಿ ಪಕ್ಷ ಧೂಳೀಪಟವಾಗಿರುವ ಹಿನ್ನೆಲೆಯಲ್ಲಿ ಹಲವು ರಾಜ್ಯಗಳ ಉಸ್ತುವಾರಿ ಹೊಣೆ ಹೊತ್ತಿರುವ ಪ್ರಧಾನ ಕಾರ್ಯದರ್ಶಿಗಳ ಜವಾಬ್ದಾರಿಗಳ ಬಗ್ಗೆ ವಿಶೇಷ ಗಮನ ಹರಿದಿದೆ. ಈ ರಾಜ್ಯಗಳ ಉಸ್ತುವಾರಿ ವಹಿಸಿಕೊಂಡಿರುವ ಸಿ.ಪಿ.ಜೋಶಿ, ಇತರ ಎಂಟು ರಾಜ್ಯಗಳ ಜವಾಬ್ದಾರಿಯನ್ನೂ ಹೊಂದಿದ್ದಾರೆ. ಇವರನ್ನು ಪ್ರಸ್ತುತ ಸೋಲಿಗೆ ಹೊಣೆ ಮಾಡಲಾಗಿದ್ದು, ಈ ಏಳು ರಾಜ್ಯಗಳಲ್ಲಿ ಹತ್ತು ದಿನಗಳನ್ನೂ ಅವರು ಕಳೆದಿಲ್ಲ ಎಂದು ಹೇಳಲಾಗಿದೆ.


ಬಿಜೆಪಿ ನಾಯಕತ್ವ ಕಾರ್ಯತಂತ್ರ
ವಿರೋಧ ಪಕ್ಷಗಳು ಮತ್ತು ಸರಕಾರದ ಮಿತ್ರ ಪಕ್ಷಗಳೇ ಸಂಸತ್ ಕಲಾಪಕ್ಕೆ ಅಡ್ಡಿ ಉಂಟುಮಾಡುತ್ತಿರುವ ಹಿನ್ನೆಲೆಯಲ್ಲಿ ಸರಕಾರ, ಎಪ್ರಿಲ್ 6ರಂದು ಕೊನೆಗೊಳ್ಳಬೇಕಾದ ಬಜೆಟ್ ಅಧಿವೇಶನವನ್ನು ಮೊಟಕುಗೊಳಿಸುತ್ತದೆ ಎಂಬ ವದಂತಿ ದಟ್ಟವಾಗಿ ಹಬ್ಬಿದೆ. ಆದರೆ ಇದೀಗ ವೈಎಸ್‌ಆರ್ ಕಾಂಗ್ರೆಸ್, ಸರಕಾರದ ವಿರುದ್ಧ ಅವಿಶ್ವಾಸ ಮಂಡಿಸುವ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಹಿರಿಯ ಬಿಜೆಪಿ ಮುಖಂಡರು ಕೂಡಾ ನಿಗದಿತ ಅವಧಿಗೆ ಮುನ್ನ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ಬಗ್ಗೆ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಪ್ರಧಾನಿ ಮತ್ತು ಅಮಿತ್ ಶಾ ವಿಧಿಯಿಲ್ಲದೆ ಗಂಭೀರವಾಗಿ ಈ ಸಾಧ್ಯತೆಯನ್ನು ಪರಿಗಣಿಸುತ್ತಿದ್ದಾರೆ. ಇದಕ್ಕೆ ಇವರು ಮುಂದಿಡುವ ತರ್ಕ, ವಿರೋಧ ಪಕ್ಷಗಳು ಸಹಕರಿಸುತ್ತಿಲ್ಲವಾದ ಕಾರಣ, ತೆರಿಗೆದಾರರ ಹಣವನ್ನು ವ್ಯರ್ಥ ಮಾಡಲು ನಾವು ಬಯಸುವುದಿಲ್ಲ ಎನ್ನುವುದು. ಎಲ್ಲವನ್ನೂ ತಮಗೆ ಬೇಕಾದಂತೆ ಮಾರ್ಪಡಿಸಿಕೊಳ್ಳುವ ಹೆಗ್ಗಳಿಕೆ ನಾಯಕತ್ವಕ್ಕೆ ಸಲ್ಲಲೇಬೇಕು!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News