ನಿಮಗೆ ಈ ಹಾರರ್ ಚಿತ್ರಗಳನ್ನು ನೋಡುವ ಧೈರ್ಯವಿದೆಯೇ...?

Update: 2018-03-18 14:06 GMT

ನಿಮಗೆ ಹಾರರ್ ಚಿತ್ರಗಳನ್ನು ನೋಡಲು ಹೆದರಿಕೆಯಿಲ್ಲವೇ? ನೆಟ್‌ಫ್ಲಿಕ್ಸ್ ಇತ್ತೀಚಿಗೆ ಬಿಡುಗಡೆಗೊಳಿಸಿರುವ ಹಾರರ್ ಚಿತ್ರಗಳ ಪಟ್ಟಿಯಲ್ಲಿರುವ ಈ ಐದು ಚಿತ್ರಗಳು ಎಷ್ಟೊಂದು ಭಯಾನಕವೆಂದರೆ ವೀಕ್ಷಕರು ಅರ್ಧಕ್ಕೇ ಎದ್ದು ಹೋಗುತ್ತಾರೆ. ಈ ಚಿತ್ರಗಳನ್ನು ವೀಕ್ಷಿಸುವುದು ನಿಮಗೆ ನಿಜಕ್ಕೂ ಸವಾಲು ಆಗಲಿದೆ.

► ಕಾರ್ನೇಜ್ ಪಾರ್ಕ್

2016ರಲ್ಲಿ ಬಿಡುಗಡೆಗೊಂಡಿದ್ದ ಅಮೆರಿಕನ್ ಹಾರರ್ ಥ್ರಿಲ್ಲರ್‌ನಲ್ಲಿ ಆ್ಯಶ್ಲೆ ಬೆಲ್, ಡಾರ್ಬಿ ಸ್ಟಾಂಚ್‌ಫೀಲ್ಡ್, ಪ್ಯಾಟ್ ಹೀಲಿ ಮತ್ತು ಅಲನ್ ರಕ್ ಅಭಿನಯಿಸಿದ್ದಾರೆ. ಕ್ಯಾಲಿಫೋರ್ನಿಯಾದ ಪಟ್ಟಣವೊಂದರಲ್ಲಿ ದರೋಡೆ ನಡೆಸುವ ದುಷ್ಕರ್ಮಿಗಳು ಒತ್ತೆಯಾಳು ಸಹಿತ ಸ್ಥಳದಿಂದ ಪರಾರಿಯಾಗಿರುತ್ತಾರೆ. ನಂತರ ನಡೆಯುವುದು ಸ್ಥಳೀಯ ಪೊಲೀಸರಿಂದ ದುಷ್ಕರ್ಮಿಗಳ ಅಪಾಯಕಾರಿ ಬೆನ್ನಟ್ಟುವಿಕೆ. ಈ ಘಟನಾವಳಿಗಳು ನೋಡುಗರ ಬೆನ್ನುಮೂಳೆಯಲ್ಲಿ ಚಳಿಯನ್ನು ಹುಟ್ಟಿಸುತ್ತವೆ.

► ರಾ-ವಿಥ್ ರಾಟನ್ ಟೊಮೆಟೋಸ್

2017ರ ಈ ಚಿತ್ರವು ನೀವು ಎಣಿಸಿರುವುದಕ್ಕಿಂತ ಹೆಚ್ಚು ಭಯಾನಕವಾಗಿದೆ. ಹದಿನಾರರ ಹರೆಯದ ಶುದ್ಧ ಸಸ್ಯಾಹಾರಿ ಬಾಲಕಿಯೋರ್ವಳು ಮೊದಲ ಬಾರಿಗೆ ಮಾಂಸವನ್ನು ತಿಂದ ಬಳಿಕ ಮಾಂಸವನ್ನು ತುಂಬ ಇಷ್ಟಪಡಲು ಆರಂಭಿಸುತ್ತಾಳೆ. ಕಥೆಯು ಭಯಾನಕತೆ ಮತ್ತು ಹಾಸ್ಯದ ಮಿಶ್ರಣವಾಗಿದ್ದು, ನರಮಾಂಸವನ್ನು ಸೇವಿಸುವ ಆಕೆಯ ದಿಢೀರ್ ಬಯಕೆ ನಿಮ್ಮನ್ನು ದುಸ್ವಪ್ನವಾಗಿ ಕಾಡುತ್ತದೆ.

► ಕ್ಯಾಬಿನ್ ಫೀವರ್

2016ರಲ್ಲಿ ಬಿಡುಗಡೆಗೊಂಡ ಈ ಅಮೆರಿಕನ್ ಹಾರರ್ ಚಿತ್ರವನ್ನು ಟ್ರೇವಿಸ್ ಝರಿವ್ನಿ ನಿರ್ದೇಶಿಸಿದ್ದು, ಗೇಜ್ ಗೋಲೈಟ್ಲಿ ಮತ್ತು ಮ್ಯಾಥ್ಯೂ ಡಡಾರಿಯೊ ಅಭಿನಯಿಸಿದ್ದಾರೆ. ಅರಣ್ಯಕ್ಕೆ ವಾರಾಂತ್ಯದ ಪ್ರವಾಸಕ್ಕೆ ತೆರಳುವ ಐವರು ಕಾಲೇಜು ವಿದ್ಯಾರ್ಥಿಗಳು ಅಲ್ಲಿ ಕ್ಯಾಬಿನ್ನೊಂದನ್ನು ಬಾಡಿಗೆಗೆ ಪಡೆದುಕೊಂಡಿರುತ್ತಾರೆ. ಭಯಾನಕವಾದ, ಮಾಂಸವನ್ನು ತಿನ್ನುವ ವೈರಸ್‌ನೊಂಂದಿಗೆ ಅವರ ಗುದ್ದಾಟ ಎಂಥವರಲ್ಲೂ ಭೀತಿಯನ್ನು ಸೃಷ್ಟಿಸುತ್ತದೆ.

► ಜೆರು ಝಲೇಂ

ಇದು ಇಸ್ರೇಲ್ ನಿರ್ಮಿತ, ಅತೀಂದ್ರಿಯ ಶಕ್ತಿಗಳನ್ನೊಳಗೊಂಡಿರುವ ಹಾರರ್ ಚಿತ್ರ ವಾಗಿದೆ. ಜೋಡಿಯೊಂಂದು ಪವಿತ್ರ ನಗರಿ ಜೆರುಸಲೇಂಗೆ ಪ್ರವಾಸಕ್ಕೆ ತೆರಳಿದ್ದಾಗ ನಡೆದ ಭಯಾನಕ ಘಟನೆಗಳನ್ನು ಈ ಚಿತ್ರವು ಒಳಗೊಂಡಿದೆ.

► ದಿ ಹ್ಯೂಮನ್ ಸೆಂಟಿಪಿಡಿ 2

ಇದು 2009ರಲ್ಲಿ ತೆರೆ ಕಂಡಿದ್ದ ಹಾರರ್ ಚಿತ್ರ ದಿ ಹ್ಯೂಮನ್ ಸೆಂಟಿಪಿಡಿಯ ಮುಂದುವರಿದ ಭಾಗವಾಗಿದೆ. ಲಾರೆನ್ಸ್ ಆರ್. ಹಾರ್ವೆ ಪ್ರಧಾನ ಪಾತ್ರದಲ್ಲಿರುವ ಈ ಚಿತ್ರ ನಿಮ್ಮನ್ನು ಖಂಡಿತವಾಗಿಯೂ ದುಸ್ವಪ್ನವಾಗಿ ಕಾಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News