ಬಿಜೆಪಿಗೆ 'ಅಧಿಕಾರದ ಅಮಲು' ಹೇಳಿಕೆ: ಬಿಜೆಪಿ ಮಿತ್ರಪಕ್ಷ ಎಸ್‍ಬಿಎಸ್‍ಪಿ ಸರದಿ

Update: 2018-03-19 08:22 GMT

ಹೊಸದಿಲ್ಲಿ, ಮಾ.19: ಕೇಂದ್ರ ಸರಕಾರದ ವಿರುದ್ಧ ಟಿಡಿಪಿ ಆಕ್ರೋಶ ವ್ಯಕ್ತಪಡಿಸಿ ಮೈತ್ರಿ ಮುರಿದುಕೊಂಡ ಬೆನ್ನಿಗೇ ಬಿಜೆಪಿಯ ಮಿತ್ರ ಪಕ್ಷ ಸುಹೇಲ್ ದೇವ್ ಭಾರತೀಯ ಸಮಾಜ ಪಕ್ಷ ಬಿಜೆಪಿಗೆ ಅಧಿಕಾರದ ಅಮಲೇರಿದೆ ಎನ್ನುವ ಹೇಳಿಕೆ ನೀಡಿದೆ. ಅಷ್ಟೇ ಅಲ್ಲದೆ ಕೇಂದ್ರ ಸರಕಾರ ಬಡವರನ್ನು, ಅಲ್ಪಸಂಖ್ಯಾತರನ್ನು ಹಾಗೂ ದಲಿತರನ್ನು ತನ್ನ ಅಭಿವೃದ್ಧಿ ಅಜೆಂಡಾದಲ್ಲಿ ನಿರ್ಲಕ್ಷ್ಯಿಸಿದೆ ಎಂದು ಈ ಪಕ್ಷ ಬಿಜೆಪಿಯ ಇನ್ನೊಂದು ಮೈತ್ರಿ ಪಕ್ಷ ಲೋಕ ಜನಶಕ್ತಿ ಪಾರ್ಟಿಯ ಜತೆ ಸೇರಿ ಆರೋಪಿಸಿದೆ. ಮೋದಿ ಸರಕಾರಕ್ಕೆ ಅಧಿಕಾರದ ಅಮಲೇರಿದೆ ಎಂದು ವಿಪಕ್ಷ ಕಾಂಗ್ರೆಸ್ ಟೀಕಿಸಿದ ಬೆನ್ನಲ್ಲೇ  ಎಸ್‍ಬಿಎಸ್‍ಪಿ ಹೇಳಿಕೆ ನೀಡಿದೆ.

ಸುಹೇಲ್ ದೇವ್ ಭಾರತೀಯ ಸಮಾಜ ಪಕ್ಷದ ಅಧ್ಯಕ್ಷರಿಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೊಡನೆ ಭೇಟಿಗೆ ಅವಕಾಶ ನೀಡದೇ ಇದ್ದಲ್ಲಿ ಉತ್ತರ ಪ್ರದೇಶದ 10 ಸ್ಥಾನಗಳಿಗೆ ನಡೆಯುವ ರಾಜ್ಯಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿಯೂ ಬೆದರಿಕೆಯೊಡ್ಡಿದೆ. ಎಂಟು ಅಭ್ಯರ್ಥಿಗಳನ್ನು ಮೇಲ್ಮನೆಗೆ ಆರಿಸಲು ಬಿಜೆಪಿಗೆ ಅಗತ್ಯ ಸದಸ್ಯರ ಬಲವಿದೆಯಾದರೂ ಒಂಬತ್ತನೇ ಅಭ್ಯರ್ಥಿಯ ಆಯ್ಕೆಗೆ ಎಸ್‍ಬಿಎಸ್‍ಪಿಗೆ ಉತ್ತರ ಪ್ರದೇಶದ 403 ಸದಸ್ಯರ ವಿಧಾನಸಭೆಯಲ್ಲಿ 4 ಶಾಸಕರಿರುವುದರಿಂದ ಅವರ ಮತಗಳು ನಿರ್ಣಾಯಕವಾಗಲಿವೆ.

ಉತ್ತರ ಪ್ರದೇಶ ಸರಕಾರ ಕೇವಲ ದೇವಸ್ಥಾನಗಳ ಬಗ್ಗೆ ಮಾತ್ರ ಯೋಚಿಸುತ್ತಿದೆಯೇ ವಿನಃ ಬಡವರ ಕಲ್ಯಾಣದ ಬಗ್ಗೆ ಅದು ಚಿಂತಿತವಾಗಿಲ್ಲ ಎಂದು  ಉತ್ತರ ಪ್ರದೇಶದ ಸಚಿವರೂ ಆಗಿರುವ ಎಸ್‍ಬಿಎಸ್‍ಪಿ ಅಧ್ಯಕ್ಷ ಒ ಪಿ ರಾಜಭರ್ಮ್ ತಿಳಿಸಿದ್ದಾರೆ.

ಬಿಜೆಪಿ ತನ್ನ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ನಿಜಾರ್ಥದಲ್ಲಿ ಜಾರಿಗೊಳಿಸಬೇಕಿದೆ ಎಂದು ಇತ್ತೀಚೆಗೆ ಎಲ್‍ಜೆಪಿ ಅಧ್ಯಕ್ಷ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದರು. ಈ ಬಗ್ಗೆ ಬಿಜೆಪಿ ಪ್ರತಿಕ್ರಿಯಿಸದೇ ಇದ್ದರೂ ರಾಜಭರ್ಮ್ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದೆ.

"ಅವರು ನಮ್ಮ ಮಿತ್ರ ಪಕ್ಷಕ್ಕೆ ಸೇರಿದವರು ಹಾಗೂ ನಮ್ಮ ಸಚಿವರಾಗಿದ್ದಾರೆ. ಅವರಿಗೇನೇ ತಕರಾರು ಇದ್ದರೂ ಸಚಿವ ಸಂಪುಟದ ಮುಂದೆ ಹೇಳಿಕೊಳ್ಳಬೇಕೇ ವಿನಹ ಸಾರ್ವಜನಿಕರ ಮುಂದಲ್ಲ'' ಎಂದು ಉತ್ತರ ಪ್ರದೇಶ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News