ರೂ. 4000 ಕೋಟಿ ಬ್ಯಾಂಕ್ ವಂಚನೆ ಪ್ರಕರಣ : ಖಾಸಗಿ ಸಂಸ್ಥೆಯ ಮೂವರು ನಿರ್ದೇಶಕರ ಬಂಧನ

Update: 2018-03-19 10:11 GMT

ಮುಂಬೈ,ಮಾ.19:ರೂ. 4000 ಕೋಟಿ ಬ್ಯಾಂಕ್ ಸಾಲವನ್ನು ಬಾಕಿಯಿರಿಸಿದೆಯೆನ್ನಲಾದ ಪರೇಖ್ ಅಲ್ಲುಮಿನೆಕ್ಸ್ ಲಿಮಿಟೆಡ್ ಎಂಬ ಸಂಸ್ಥೆಯ ವಿರುದ್ಧ ನಡೆಯುತ್ತಿರುವ ತನಿಖೆಯ ಭಾಗವಾಗಿ ಪೊಲೀಸರು ಅದರ ಮೂವರು ನಿರ್ದೇಶಕರನ್ನು ಬಂಧಿಸಿದ್ದಾರೆ.

ವಂಚನೆ, ಫೋರ್ಜರಿ, ವಿಶ್ವಾಸದ್ರೋಹ ಹಾಗೂ ಕ್ರಿಮಿನಲ್ ಸಂಚು ಆರೋಪಗಳನ್ವಯ ಭವರಲಾಲ್ ಭಂಡಾರಿ, ಪ್ರೇಮಲ್ ಗೊರಗಂಧಿ ಹಾಗೂ ಕಮಲೇಶ್ ಕನುಂಗೊ ಎಂಬವರನ್ನು ಬಂಧಿಸಲಾಗಿದೆ. ಸಂಸ್ಥೆಯಿಂದ ತನಗೆ ರೂ. 250 ಕೋಟಿ ವಂಚನೆ ನಡೆದಿದೆ ಎಂದು ಆಕ್ಸಿಸ್ ಬ್ಯಾಂಕ್ ದೂರು ನೀಡಿದ ಹಿನ್ನೆಲೆಯಲ್ಲಿ ಈ ಬಂಧನವನ್ನು ಆರ್ಥಿಕ ಅಪರಾಧಗಳ ವಿಭಾಗದ ಪೊಲೀಸರು ನಡೆಸಿದ್ದಾರೆ.

ಕಂಪೆನಿಗೆ ಸಾಲ ನೀಡಿದ 20 ಬ್ಯಾಂಕುಗಳಲ್ಲಿ ಆಕ್ಸಿಸ್ ಬ್ಯಾಂಕ್ ಒಂದಾಗಿದೆ. ನಕಲಿ ಇನ್ ವಾಯಿಸ್ ಸೃಷ್ಟಿಸಿ ಬೋಗಸ್ ಕಂಪೆನಿಗಳ ಮುಖಾಂತರದ ಬಿಲ್ಲುಗಳನ್ನು ತಿರುಚಿ ಬ್ಯಾಂಕಿನ್ ಫೋರ್ಟ್ ಶಾಖೆಯಲ್ಲಿ ಲೆಟರ್ಸ್ ಆಫ್ ಕ್ರೆಡಿಟ್ ಮುಖಾಂತರ ವಂಚನೆ ನಡೆದಿದೆಯೆನ್ನಲಾಗಿದೆ.

ಆಕ್ಸಿಸ್ ಬ್ಯಾಂಕಿನ ದೂರಿನಲ್ಲಿ 2013ರಲ್ಲಿ ನಿಧನರಾದ ನಿರ್ದೇಶಕ ಅಮಿತಾಬ್ ಪಾರೇಖ್ ಸಹಿತ ರಾಜೇಂದ್ರ ಗೋಥಿ, ದೇವಾಂಶು ದೇಸಾಯಿ, ಕಿರಣ್ ಪಾರಿಖ್ ಹಾಗೂ ವಿಕ್ರಮ್ ಮೊರ್ದಾನಿ ಅವರ ಹೆಸರುಗಳನ್ನೂ ನಮೂದಿಸಲಾಗಿದೆ.

ಈಗಾಗಲೇ ಸಾರ್ವಜನಿಕ ರಂಗದ ಬ್ಯಾಂಕುಗಳಾದ ಎಸ್ ಬಿ ಐ ಹಾಗೂ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನೀಡಿದ್ದ ದೂರುಗಳ ಹಿನ್ನೆಲೆಯಲ್ಲಿ ಸಂಸ್ಥೆಯ ವಿರುದ್ಧ ಸಿಬಿಐ ತನಿಖೆ ನಡೆಯುತ್ತಿದೆ.

ಕಂಪೆನಿಯು ಹಣವನ್ನು ರಿಯಲ್ ಎಸ್ಟೇಟ್ ಡೆವಲೆಪರುಗಳಿಗೆ ಸಂದಾಯ ಮಾಡಿದೆ ಹಾಗೂ ಈಗ ದಿವಾಳಿತನದ ಪ್ರಕರಣವು ನ್ಯಾಷನಲ್ ಕಂಪೆನಿ ಲಾ ಟ್ರಿಬ್ಯುನಲ್ ಮುಂದೆ ನಡೆಯುತ್ತಿದೆ.

ಆರಂಭದಲ್ಲಿ ಒಟ್ಟು ರೂ.125 ಕೋಟಿ ಮೌಲ್ಯದ ಮೂರು ಅಲ್ಪಾವಧಿ ಸಾಲ ಪಡೆದಿದ್ದ ಸಂಸ್ಥೆ ಅವುಗಳನ್ನು ವಾಪಸ್ ನೀಡಿ ಬ್ಯಾಂಕಿನ ವಿಶ್ವಾಸ ಸಂಪಾದಿಸಿತ್ತಾದರೂ ನಂತರ ವಿವಿಧ ಕಾರಣಗಳನ್ನು ನೀಡಿ ಪಡೆದ ಸಾಲಗಳನ್ನು ಹಿಂದಿರುಗಿಸಿರಲಿಲ್ಲ ಎಂಬ ಆರೋಪವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News