×
Ad

​ಜುನೈದ್ ಖಾನ್ ಪ್ರಕರಣ : ಸಿಬಿಐ ತನಿಖೆ ಕೋರಿ ತಂದೆ ಸಲ್ಲಿಸಿದ್ದ ಅರ್ಜಿ ಪರಿಗಣಿಸಲು ನಿರ್ಧರಿಸಿದ ಸುಪ್ರೀಂ ಕೋರ್ಟ್

Update: 2018-03-19 17:30 IST

ಹೊಸದಿಲ್ಲಿ,ಮಾ.19:ಮಥುರಾಗೆ ಹೊರಟಿದ್ದ ರೈಲೊಂದರಲ್ಲಿ ಕೊಲೆಗೀಡಾಗಿದ್ದ 17 ವರ್ಷದ ಜುನೈದ್ ಖಾನ್ ತಂದೆ ತನ್ನ ಪುತ್ರನ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಕೋರಿರುವ ಅರ್ಜಿಯನ್ನು ಪರಿಗಣಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

ಸಿಬಿಐ ತನಿಖೆಗೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಮಾ.6ರ ತನ್ನ ತೀರ್ಪಿನಲ್ಲಿ ನಿರಾಕರಿಸಿದ ನಂತರ ಜುನೈದ್ ತಂದೆ ಜಲಾಲುದ್ದೀನ್ ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಲು ಜಸ್ಟಿಸ್ ಕುರಿಯನ್ ಜೋಸೆಫ್ ಹಾಗೂ ಜಸ್ಟಿಸ್ ಮೋಹನ ಶಾಂತನಗೌಡರ್ ಅವರ ಪೀಠ ಒಪ್ಪಿದೆ.

ಪ್ರಕರಣದ ಎಲ್ಲಾ ಸಾಕ್ಷಿಗಳ ಹೇಳಿಕೆಯನ್ನು ಹರ್ಯಾಣ ಪೊಲೀಸರು ತಿರುಚಿದ್ದಾರೆಂದು ಆರೋಪಿಸಿ ಜಲಾಲುದ್ದೀನ್ ಅವರು 2017ರಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ತನಿಖೆಯಲ್ಲಿರುವ ಯಾವುದೇ ದೋಷವನ್ನು ಪತ್ತೆ ಹಚ್ಚಲು ದೂರುದಾರ ವಿಫಲರಾಗಿದ್ದರೆಂದು ನ್ಯಾಯಾಲಯ ತಿಳಿಸಿತ್ತು.
ಫರೀದಾಬಾದ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯನ್ನು ಕೂಡ  ಸುಪ್ರೀಂ ಕೋರ್ಟ್ ಸೋಮವಾರ ಸ್ಥಗಿತಗೊಳಿಸಲು ಆದೇಶಿಸಿತಲ್ಲದೆ ಜಲಾಲುದ್ದೀನ್ ಅಪೀಲನ್ನು ಪರಿಗಣಿಸುವಂತೆ ಹರ್ಯಾಣ ಸರಕಾರ ಮತ್ತು ಸಿಬಿಐಗೆ ತಿಳಿಸಿದೆ.

ಕಳೆದ ವರ್ಷದ ಜೂನ್ 22ರಂದು ನಡೆದ ಈ ಘಟನೆಯಲ್ಲಿ ಜುನೈದ್ ಮತ್ತಾತನ ಸೋದರ ಹಾಗೂ ಇಬ್ಬರು ಸೋದರ ಸಂಬಂಧಿಗಳ ಮೇಲೆ ರೈಲಿನಲ್ಲಿ ತಂಡವೊಂದು ಮತೀಯ ನಿಂದೆಗೈದು ಜುನೈದ್ ನನ್ನು ಇರಿದು ಸಾಯಿಸಿತ್ತು. ಆರು ಆರೋಪಿಗಳು ಈ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News