ಈಡೇರದ ಲ್ಯಾಪ್ ಟಾಪ್, 1ಜಿಬಿ ಇಂಟರ್ ನೆಟ್ ಭರವಸೆ: ವಿದ್ಯಾರ್ಥಿಗಳ ಆಕ್ರೋಶ
ಲಕ್ನೋ, ಮಾ.19: ಉತ್ತರ ಪ್ರದೇಶದ ಬಿಜೆಪಿ ಸರಕಾರ ತನ್ನ ಮೊದಲನೇ ಬಜೆಟ್ ನಂತೆಯೇ ಎರಡನೇ ಬಜೆಟ್ ನಲ್ಲಿಯೂ ರಾಜ್ಯಾದ್ಯಂತ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಒದಗಿಸಲು ಹಣ ಮೀಸಲಿರಿಸದೆ ಇರುವುದು ರಾಜ್ಯಾದ್ಯಂತ ಇರುವ ವಿದ್ಯಾರ್ಥಿಗಳನ್ನು ಮತ್ತೊಮ್ಮೆ ನಿರಾಶೆಗೊಳಿಸಿದೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲು ಈ ನಿಟ್ಟಿನಲ್ಲಿ ಭರವಸೆ ನೀಡಿದ ಹೊರತಾಗಿಯೂ ಅದನ್ನು ಈಡೇರಿಸಲು ಸರಕಾರ ವಿಫಲವಾಗಿದೆ. ಉಚಿತ ಲ್ಯಾಪ್ ಟಾಪ್ ಅಲ್ಲದೆ ಒಂದು ಜಿಬಿ ಇಂಟರ್ನೆಟ್ ಒದಗಿಸುವುದಾಗಿಯೂ ಬಿಜೆಪಿ ಭರವಸೆ ನೀಡಿತ್ತು.
ಹಿಂದಿನ ಸಮಾಜವಾದಿ ಪಕ್ಷದ ಸರಕಾರ 12ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದ ವಿದ್ಯಾರ್ಥಿಗಳಿಗೆ ಸುಮಾರು 18 ಲಕ್ಷ ಲ್ಯಾಪ್ ಟಾಪ್ ಗಳನ್ನು 2012 ಹಾಗೂ 2017ರ ನಡುವೆ ವಿತರಿಸಿತ್ತು. ಆದರೆ ಉಚಿತ ಲ್ಯಾಪ್ ಟಾಪ್ ಬದಲು ಸರಕಾರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಒತ್ತು ನೀಡುವುದಾಗಿ ಮುಖ್ಯಮಂತ್ರಿ ಆದಿತ್ಯನಾಥ್ ಇತ್ತೀಚೆಗೆ ಹೇಳಿದ್ದರು.
ಇದೇ ಕಾರಣದಿಂದ ಈ ವರ್ಷ ಮತ್ತೆ ಬಜೆಟ್ ನಲ್ಲಿ ಲ್ಯಾಪ್ ಟಾಪ್ ಯೋಜನೆಗೆ ಹಣ ಮೀಸಲಿರಿಸಲಾಗಿಲ್ಲ. ಆದರೆ ಕಳೆದ ವರ್ಷ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಉಚಿತ ವೈಫೈ ಒದಗಿಸಲು ರೂ 50 ಕೋಟಿ ಮೀಸಲಿರಿಸಲಾಗಿತ್ತು.
"ಬಿಜೆಪಿಯು ಜುಮ್ಲಾಗಳಿಗಷ್ಟೇ ಸೀಮಿತ. ಸ್ವಿಸ್ ಬ್ಯಾಂಕ್ ನಿಂದ ಕಪ್ಪು ಹಣ ತರುವುದಾಗಿ ಹೇಳಿದ ನಂತರ ಲ್ಯಾಪ್ ಟಾಪ್ ವಿತರಣೆ ಇದಕ್ಕೆ ಮತ್ತೊಂದು ಉದಾಹರಣೆಯಾಗಿದೆ" ಎಂದು ಲಕ್ನೋ ವಿವಿಯ ವಿದ್ಯಾರ್ಥಿ ರಾಕೇಶ್ ಶುಕ್ಲಾ ಹೇಳುತ್ತಾರೆ.
"1 ಜಿಬಿ ಡಾಟಾದೊಂದಿಗೆ ಲ್ಯಾಪ್ ಟಾಪ್ ವಿತರಿಸುವುದು ಬಿಜೆಪಿಯ ಚುನಾವಣಾ ಭರವಸೆಯಾಗಿತ್ತು. ಆದರೆ ಮೊದಲ ಬಜೆಟ್ ನಲ್ಲಿ ಈ ಬಗ್ಗೆ ಪ್ರಸ್ತಾಪವೇ ಇಲ್ಲ" ಎಂದು ವಿದ್ಯಾರ್ಥಿ ರೋಹನ್ ಗುಪ್ತಾ ಹೇಳಿದರೆ, "ಇದೂ ಕೂಡ ಇನ್ನೊಂದು ಜುಮ್ಲಾವೇ?" ಎಂದು ಮತ್ತೊಬ್ಬ ವಿದ್ಯಾರ್ಥಿ ಅಮಿತ್ ರೈ ಪ್ರಶ್ನಿಸುತ್ತಾರೆ.