×
Ad

ಮಜಿಥಾ ಬಳಿಕ ಗಡ್ಕರಿಯ ಕ್ಷಮೆ ಕೋರಿದ ಕೇಜ್ರಿವಾಲ್

Update: 2018-03-19 19:14 IST

ಹೊಸದಿಲ್ಲಿ,ಮಾ.19: ಮಾನನಷ್ಟ ಮೊಕದ್ದಮೆಗಳ ಸುಳಿಯಲ್ಲಿ ಸಿಲುಕಿ ಹೈರಾಣಾಗಿರುವ ಆಪ್ ಮುಖ್ಯಸ್ಥ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹಿಂದೊಮ್ಮೆ ಕೇಂದ್ರ ಸಚಿವ ನಿತಿನ್ ಗಡ್ಕರಿಯವರನ್ನು ‘ದೇಶದ ಅತ್ಯಂತ ಭ್ರಷ್ಟ ರಾಜಕಾರಣಿಗಳಲ್ಲೋರ್ವರು ’ಎಂದು ಬಣ್ಣಿಸಿದ್ದಕ್ಕಾಗಿ ಇದೀಗ ಅವರ ಕ್ಷಮೆ ಯಾಚಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಕೇಜ್ರಿವಾಲ್ ಪಂಜಾಬ್ ರಾಜಕಾರಣಿ ಬಿಕ್ರಂ ಮಜಿಥಾ ಅವರ ಕ್ಷಮೆಯನ್ನು ಕೋರಿದ್ದರು.

ಗಡ್ಕರಿ ಅವರಿಗೆ ಬರೆದಿರುವ ಪತ್ರದಲ್ಲಿ 2014ರಲ್ಲಿ ‘ಖಚಿತವಿಲ್ಲದಿದ್ದ ಆರೋಪಗಳನ್ನು ಮಾಡಿದ್ದನ್ನು ’ ಒಪ್ಪಿಕೊಂಡಿರುವ ಕೇಜ್ರಿವಾಲ್, ‘‘ನನಗೆ ನಿಮ್ಮ ವಿರುದ್ಧ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಮಾಡಿದ್ದ ಆರೋಪಗಳಿಗಾಗಿ ವಿಷಾದಿಸುತ್ತೇನೆ. ಆ ಘಟನೆಯನ್ನು ಮರೆತು ಕಾನೂನು ಕಲಾಪಗಳಿಗೆ ಅಂತ್ಯ ಹಾಡೋಣ ’’ ಎಂದು ಹೇಳಿದ್ದಾರೆ. ಈ ಕ್ಷಮಾಪಣೆಯ ನಂತರ ಗಡ್ಕರಿಯವರು ನ್ಯಾಯಾಲಯದಲ್ಲಿ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯನ್ನು ಹಿಂದೆಗೆದುಕೊಳ್ಳಲು ಅನುಮತಿ ಕೋರಿ ಉಭಯ ನಾಯಕರು ಜಂಟಿ ಅರ್ಜಿಯನ್ನು ಸಲ್ಲಿಸಿದ್ದಾರೆ.

ನ್ಯಾಯಾಲಯದ ಹೊರಗೆ ರಾಜಿ ಸಂಧಾನಗಳನ್ನು ಮಾಡಿಕೊಳ್ಳುವ ಮೂಲಕ ತನ್ನ ವಿರುದ್ಧ ದಾಖಲಾಗಿರುವ ಎಲ್ಲ 33 ಮಾನನಷ್ಟ ಪ್ರಕರಣಗಳಿಂದ ಮುಕ್ತಿ ಪಡೆಯಲು ಕೇಜ್ರಿವಾಲ್ ಉದ್ದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿದವು. ಈ ಪ್ರಕರಣಗಳು ಪಕ್ಷದ ಖಜಾನೆಗೆ ತುಂಬ ದುಬಾರಿಯಾಗಿ ಪರಿಣಮಿಸಿವೆ ಎಂದು ಆಪ್ ನಾಯಕರು ಹೇಳಿದ್ದಾರೆ.

ಮೊಕದ್ದಮೆಗಳ ಸುಳಿಯಲ್ಲಿ ಸಿಲುಕಿರುವ ಕೇಜ್ರಿವಾಲ್ ಅಕಾಲಿದಳ ನಾಯಕ ಮಜಿಥಾರ ಕ್ಷಮೆ ಕೋರಿದ್ದಕ್ಕಾಗಿ ಈಗಾಗಲೇ ಪಕ್ಷದ ಒಂದು ವರ್ಗದಿಂದ ತೊಂದರೆಯನ್ನು ಎದುರಿಸುತ್ತಿದ್ದಾರೆ. ಪಂಜಾಬ್‌ನಲ್ಲಿಯ ಮಾದಕ ದ್ರವ್ಯಗಳ ಸಮಸ್ಯೆಗೆ ತನ್ನನ್ನು ಗುರಿಯಾಗಿಸಿಕೊಂಡು ಟೀಕಿಸಿದ್ದಕ್ಕಾಗಿ ಮಾಜಿ ಸಚಿವ ಮಜಿಥಾ 2016ರಲ್ಲಿ ಕೇಜ್ರಿವಾಲ್ ಮತ್ತು ಇತರ ಇಬ್ಬರು ಆಪ್ ನಾಯಕರ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದರು. ಕೇಜ್ರಿವಾಲ್ ಸೋಲನ್ನೊಪ್ಪಿಕೊಂಡಿದ್ದರಿಂದ ಅಸಮಾಧಾನಗೊಂಡಿ ರುವ ಆಪ್‌ನ ಪಂಜಾಬ್ ಘಟಕದ ಅಧ್ಯಕ್ಷ ಭಗವಂತ ಮಾನ್ ಮತ್ತು ಉಪಾಧ್ಯಕ್ಷ ಅಮನ್ ಅರೋರಾ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆಗಳನ್ನು ಸಲ್ಲಿಸಿದ್ದಾರೆ.

ಕೇಜ್ರಿವಾಲ್‌ರ ‘ಕ್ಷಮೆ ಯಾಚನೆ ’ ಪಟ್ಟಿಯಲ್ಲಿ ಕೇಂದ್ರ ವಿತ್ತಸಚಿವ ಅರುಣ್ ಜೇಟ್ಲಿ ಅವರೂ ಇದ್ದಾರೆ. ದಿಲ್ಲಿ ಜಿಲ್ಲಾ ಕ್ರಿಕೆಟ್ ಸಂಘ(ಡಿಡಿಸಿಎ)ದ ಅಧ್ಯಕ್ಷನಾಗಿ ತನ್ನ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರ ವನ್ನು ನಡೆಸಿದ್ದೇನೆ ಎಂದು ಆರೋಪಿಸಿದ್ದಕ್ಕಾಗಿ ಜೇಟ್ಲಿ ಅವರು ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಾರೆ, ಜೊತೆಗೆ 10 ಕೋ.ರೂ.ಗಳ ಪರಿಹಾರವನ್ನೂ ಕೋರಿದ್ದಾರೆ.

‘‘ನಿಮ್ಮ ವಿರುದ್ಧದ ನನ್ನ ಎಲ್ಲ ಹೇಳಿಕೆಗಳು ಮತ್ತು ಆರೋಪಗಳನ್ನು ಹಿಂದೆಗೆದುಕೊಳ್ಳುತ್ತಿದ್ದೇನೆ ಮತ್ತು ಅದಕ್ಕಾಗಿ ಕ್ಷಮೆ ಕೋರುತ್ತಿದ್ದೇನೆ ’’ ಎಂದು ಕೇಜ್ರಿವಾಲ್ ಅವರು ಕಳೆದ ವಾರ ಜೇಟ್ಲಿಯವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಕಪಿಲ್ ಸಿಬಲ್, ಶೀಲಾ ದೀಕ್ಷಿತ್ ಮತ್ತು ರಮೇಶ ಬಿಧುರಿ ಅವರೂ ಕೇಜ್ರಿವಾಲ್‌ರ ‘ಕ್ಷಮೆ ಯಾಚನೆ ’ಪಟ್ಟಿಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News