ಹತ್ತು ಮತ್ತರ ಭೂಮಿ

Update: 2018-03-19 18:53 GMT

ಹತ್ತು ಮತ್ತರ ಭೂಮಿ, ಬತ್ತದ ಹಯನು, ನಂದಾದೀವಿಗೆಯ

ನಡೆಸಿಹೆವೆಂಬವರ ಮುಖವ ನೋಡಲಾಗದು.

ಅವರ ನುಡಿಯ ಕೇಳಲಾಗದು.

ಅಂಡಜ, ಸ್ವೇದಜ, ಉದ್ಭಿಜ, ಜರಾಯುಜವೆಂಬ ಪ್ರಾಣಿಗಳಿಗೆ

ಭವಿತವ್ಯವ ಕೊಟ್ಟವರಾರೊ?

ಒಡೆಯರಿಗೆ ಉಂಡಲಿಗೆಯ ಮುರಿದಿಕ್ಕಿದಂತೆ

ಎನ್ನಿಂದಲೇ ಆಯಿತ್ತು, ಎನ್ನಿಂದಲೇ ಹೋಯಿತ್ತು ಎಂಬವನ ಬಾಯಲ್ಲಿ

ಮೆಟ್ಟಿ ಹುಡಿಯ ಹೊಯ್ಯದೆ ಮಾಬನೆ

ಕೂಡಲಸಂಗಮದೇವ?

-ಬಸವಣ್ಣ

ಹತ್ತು ಮತ್ತರ (ನಾಲ್ಕು ಮೊಳ ಎಂದರೆ ಒಂದು ಮಾರು. ನೂರು ಮಾರು ಎಂದರೆ ಒಂದು ಮತ್ತರ) ಭೂಮಿ, ಎಲ್ಲ ಕಾಲದಲ್ಲೂ ಒಂದಿಲ್ಲೊಂದು ಹಸು ಹಾಲು ಹಿಂಡುತ್ತಲೇ ಇರುವ ರೀತಿಯಲ್ಲಿ ಗೋದಾನ, ನಿರಂತರ ಬೆಳಗುವ ದೀವಿಗೆಗೆ ಬೇಕಾದ ಎಣ್ಣೆ ತುಪ್ಪಗಳ ಪೂರೈಕೆ, ಹೀಗೆ ದೇವಕಾರ್ಯಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಂಡಿರುವುದಾಗಿ ಜಂಭ ಕೊಚ್ಚಿಕೊಳ್ಳುವ ಧಣಿಗಳ ಮುಖ ನೋಡಲು ಹೇಸಿಗೆಯಾಗುವುದು. ಅವರ ಮಾತು ಕೇಳಲು ಅಸಹ್ಯವಾಗುವುದು. ಏಕೆಂದರೆ ಈ ಧನವಂತರು ದೇವಕಾರ್ಯಕ್ಕಾಗಿ ಕೊಡುವ ದಾನ ಆ ದೇವರೇ ಕೊಟ್ಟ ದ್ರವ್ಯವಾಗಿದೆ. ಹೀಗೆ ದಾನ ಮಾಡಿ ಶಾಸನ ಕೆತ್ತಿಸುವ ಮೂಲಕ ಅಮರರಾಗುವ ಬಯಕೆ ಅವರದಾಗಿದೆ. ದಾಸೋಹ ಭಾವದ ಬಸವಣ್ಣನವರಿಗೆ ಈ ದಾನದ ಪರಿಕಲ್ಪನೆ ವಾಕರಿಕೆ ಹುಟ್ಟಿಸುವಂಥದ್ದಾಗಿದೆ. ಜಗತ್ತಿನಲ್ಲಿ ಕ್ರಿಮಿಕೀಟಕ, ಪಶು, ಪಕ್ಷಿ ಮತ್ತು ಮಾನವರೆಲ್ಲ ಬದುಕುವುದು ಯಾರಿಂದ ಎಂದು ಅವರು ಪ್ರಶ್ನಿಸುತ್ತಾರೆ.

ನಾಲ್ಕು ರೀತಿಯ ಜೀವಿಗಳು ಈ ಜಗತ್ತಿನಲ್ಲಿವೆ. ಮೊಟ್ಟೆಯಿಂದ ಹುಟ್ಟುವ ಹಾವು, ಮೀನು, ಆಮೆ, ಮೊಸಳೆಯಂಥ ಪ್ರಾಣಿಗಳು ಮತ್ತು ಪಕ್ಷಿಗಳು; ಬೆವರಿನಿಂದ ಹುಟ್ಟುವ ಹೇನು, ಕೂರಿನಂಥ ಜೀವಿಗಳು; ಭೂಮಿಯ ತಂಪಿನಿಂದ ಸೃಷ್ಟಿಯಾಗುವ ಕ್ರಿಮಿಗಳು ಹಾಗೂ ಗರ್ಭದಿಂದ ಜನ್ಮತಾಳುವ ಪ್ರಾಣಿಗಳು ಮತ್ತು ಮಾನವರನ್ನು ಯಾರು ಸಲಹುತ್ತಾರೆ ಎಂದು ಪ್ರಶ್ನಿಸುವುದರ ಮೂಲಕ ದೇವರೇ ಸಲಹುತ್ತಾನೆ ಎಂಬುದನ್ನು ತಿಳಿಹೇಳುತ್ತಾರೆ.

ಇಡೀ ಜಗತ್ತನ್ನೇ ತಮ್ಮ ಮನದಲ್ಲಿ ತುಂಬಿಕೊಂಡು, ಮನೆ ಮಠ ಬಿಟ್ಟು ಪರಿವ್ರಾಜಕರಾಗಿ, ಹಸಿವು ನೀರಡಿಕೆಗಳನ್ನು ಲೆಕ್ಕಿಸದೆ ಊರೂರು ಸುತ್ತುತ್ತಾ ಸರ್ವಸಮತ್ವದ ಶರಣಧರ್ಮವನ್ನು ಪ್ರಸಾರ ಮಾಡುವ ಜಂಗಮೋತ್ತಮರೇ ಬಸವಣ್ಣನವರ ದೃಷ್ಟಿಯಲ್ಲಿ ಒಡೆಯರು. ‘ತಿರುಕರೆನ್ನದಿರಿಂ ಭೋ! ಎನ್ನ ಒಡೆಯರನು’ ಎಂದು ಅವರು ಬೇರೊಂದು ವಚನದಲ್ಲಿ ಇವರ ಬಗ್ಗೆ ಹೇಳಿದ್ದಾರೆ. ಇಂಥ ಒಡೆಯರಿಗೆ ಉಂಡಿ, ಚಕ್ಕುಲಿ ಮುಂತಾದ ತಿಂಡಿತಿನಿಸುಗಳನ್ನು ಕೃತ್ರಿಮ ವಿನಯದಿಂದ ಪೂರೈಸುತ್ತ, ‘‘ಇವರ ಆಗುಹೋಗುಗಳಿಗೆ ನಾನೇ ಕಾರಣ’’ ಎಂದು ಹೇಳಿಕೊಳ್ಳುವ ಗರ್ವಿಷ್ಠನ ಬಾಯನ್ನು ಮೆಟ್ಟಿ ಮಣ್ಣು ಹಾಕದೆ ಬಿಡುವನೇ ನಮ್ಮ ಕೂಡಲಸಂಗಮದೇವ ಎಂದು ಬಸವಣ್ಣನವರು ಎಚ್ಚರಿಸುತ್ತಾರೆ.

Writer - ರಂಜಾನ್ ದರ್ಗಾ

contributor

Editor - ರಂಜಾನ್ ದರ್ಗಾ

contributor

Similar News