ಲಿವಿಂಗ್ ವಿಲ್ ಮಾಡುವುದು ಹೇಗೆ....?

Update: 2018-03-20 12:05 GMT

ಸರ್ವೋಚ್ಚ ನ್ಯಾಯಾಲಯವು ನಿಷ್ಕ್ರಿಯ ಇಚ್ಛಾಮರಣವನ್ನು ಸಿಂಧುಗೊಳಿಸಿ ಇತ್ತೀಚಿಗೆ ನೀಡಿರುವ ತೀರ್ಪು ಪುನಃಶ್ಚೇತನದ ಸಾಧ್ಯತೆಯಿಲ್ಲದ ಕಾಯಿಲೆಯಿಂದ ನರಳುತ್ತಿರುವ ಅಥವಾ ಅನಾರೋಗ್ಯ ದಿಂದ ಮರಣಾಸನ್ನ ಸ್ಥಿತಿಯಲ್ಲಿರುವ ವ್ಯಕ್ತಿಗಳು ಲಿವಿಂಗ್ ವಿಲ್ ಅಥವಾ ಜೀವಿತ ಉಯಿಲನ್ನು ಜಾರಿಗೊಳಿಸುವುದನ್ನು ಸಾಧ್ಯವಾಗಿಸಿದೆ. ಲಿವಿಂಗ್ ವಿಲ್ ವ್ಯಕ್ತಿಯು ತಾನು ಅನಾರೋಗ್ಯದಿಂದ ಮರಣಾಸನ್ನ ಸ್ಥಿತಿಯಲ್ಲಿದ್ದರೆ ತನಗೆ ಯಾವ ರೀತಿಯಲ್ಲಿ ಚಿಕಿತ್ಸೆ ನೀಡಬೇಕು ಎಂಬ ಇಚ್ಛೆಯನ್ನು ಸ್ಪಷ್ಟವಾಗಿ ತಿಳಿಸುವ ದಾಖಲೆಯಾಗಿದೆ. ಲಿವಿಂಗ್ ವಿಲ್‌ನ್ನು ಹೇಗೆ ರಚಿಸಬೇಕು ಎನ್ನುವುದಕ್ಕೆ ಸರ್ವೋಚ್ಚ ನ್ಯಾಯಾಲಯವು ಮಾರ್ಗಸೂಚಿ ಯನ್ನು ನಿಗದಿಗೊಳಿಸಿದೆ.

ಲಿವಿಂಗ್ ವಿಲ್ ಅನ್ನು ಮಾಡುವ ವ್ಯಕ್ತಿಯು ಉತ್ತಮ ಮಾನಸಿಕ ಆರೋಗ್ಯವನ್ನು ಹೊಂದಿರಬೇಕು ಹಾಗೂ ಆ ವ್ಯಕ್ತಿಗೆ ತನ್ನ ಉದ್ದೇಶ ಮತ್ತು ನಿರ್ಧಾರವನ್ನು ಸ್ಪಷ್ಟವಾಗಿ ತಿಳಿಸುವ ಸಾಮರ್ಥ್ಯವಿರಬೇಕು. ಲಿವಿಂಗ್ ವಿಲ್‌ನ್ನು ಮಾಡುವಾಗ ವ್ಯಕ್ತಿಯು ಯಾವುದೇ ಅಥವಾ ಇತರರ ಒತ್ತಡದಲ್ಲಿರಬಾರದು. ಲಿವಿಂಗ್ ವಿಲ್ ಸಂಪೂರ್ಣವಾಗಿ ವ್ಯಕ್ತಿಯ ಸ್ವಯಂ ಇಚ್ಛೆಯಿಂದಲೇ ಆಗಿರಬೇಕು ಮತ್ತು ಯಾವುದೇ ಒತ್ತಡ ಅದಕ್ಕೆ ಕಾರಣವಾಗಿರಬಾರದು. ರೋಗಿಯ ಪ್ರಾಣವನ್ನು ಉಳಿಸಲು ಅಳವಡಿ ಸಿರುವ ಕೃತಕ ಜೀವರಕ್ಷಕ ವೈದ್ಯಕೀಯ ಸೌಲಭ್ಯಗಳನ್ನು ಹಿಂದೆಗೆದು ಕೊಂಡು ಆತನ ಇಚ್ಛೆಯಂತೆ ಘನತೆಯಿಂದ ಕೊನೆಯುಸಿರೆಳೆಯಲು ಅವಕಾಶ ಕಲ್ಪಿಸುವುದಕ್ಕೆ ಮಾತ್ರ ಲಿವಿಂಗ್ ವಿಲ್ ಸೀಮಿತವಾಗಿದೆ.

ಲಿವಿಂಗ್ ವಿಲ್ ಯಾವಾಗಲೂ ಲಿಖಿತ ದಾಖಲೆಯಾಗಿರಬೇಕು

ತನ್ನ ನಿರ್ಧಾರದ ಪರಿಣಾಮಗಳು ತನಗೆ ತಿಳಿದಿವೆ ಎಂದು ರೋಗಿ ಯು ಲಿವಿಂಗ್ ವಿಲ್‌ನಲ್ಲಿ ಘೋಷಿಸಬೇಕಾಗುತ್ತದೆ. ಯಾವ ಕಾಲಘಟ್ಟ ದಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಹಿಂದೆಗೆದುಕೊಳ್ಳಬೇಕು ಅಥವಾ ನೀಡಬಾರದು ಎನ್ನುವುದು ಅದರಲ್ಲಿ ಸ್ಪಷ್ಟವಾಗಿ ಉಲ್ಲೇಖಿತವಾಗಿರಬೇಕು. ರೋಗಿಯ ನಿರ್ಧಾರವನ್ನು ಜಾರಿಗೊಳಿಸಲು ಸೂಕ್ತವಾದ ಸ್ಥಿತಿಯ ಬಗ್ಗೆ ಅದರಲ್ಲಿ ತಿಳಿಸಿರಬೇಕು. ರೋಗಿಯ ಪರವಾಗಿ ನಿರ್ಧಾರವನ್ನು ಕೈಗೊಳ್ಳುವ ಸಂಬಂಧಿಯ ಹೆಸರನ್ನು ಲಿವಿಂಗ್ ವಿಲ್‌ನಲ್ಲಿ ತಿಳಿಸಿರಬೇಕು.

ಲಿವಿಂಗ್ ವಿಲ್ ಅನ್ನು ಮಾಡುವ ವ್ಯಕ್ತಿಯು ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ಅದಕ್ಕೆ ಸಹಿಯನ್ನು ಮಾಡಬೇಕಾಗುತ್ತದೆ. ಲಿವಿಂಗ್ ವಿಲ್ ಅನ್ನು ರೋಗಿಯು ಸ್ವಯಂಇಚ್ಛೆಯಿಂದ ಬರೆದಿದ್ದಾನೆ/ಬರೆದಿದ್ದಾಳೆ ಎನ್ನುವುದನ್ನು ದೃಢಪಡಿಸಿ ಜೆಎಂಎಫ್‌ಸಿ ನ್ಯಾಯಾಧೀಶರು ಅದರ ಮೇಲೆ ಪ್ರತಿಸಹಿಯನ್ನು ಹಾಕಬೇಕಾಗುತ್ತದೆ.

ನ್ಯಾಯಾಧೀಶರು ಲಿವಿಂಗ್ ವಿಲ್‌ನ ಒಂದು ಪ್ರತಿಯನ್ನು ತನ್ನ ಬಳಿಯೇ ಇರಿಸಿಕೊಳ್ಳುತ್ತಾರೆ ಮತ್ತು ಇನ್ನೊಂದು ಪ್ರತಿಯನ್ನು ಅಧಿಕಾರ ವ್ಯಾಪ್ತಿಯ ಜಿಲ್ಲಾ ನ್ಯಾಯಾಲಯದ ರಿಜಿಸ್ಟ್ರಿಗೆ ಸಲ್ಲಿಸುತ್ತಾರೆ.

ಗಮನಿಸಬೇಕಾದ ಅಂಶಗಳು

ಲಿವಿಂಗ್ ವಿಲ್‌ನಲ್ಲಿ ತಿಳಿಸಲಾದ ಪರಿಸ್ಥಿತಿ ಸೃಷ್ಟಿಯಾದಾಗ ಚಿಕಿತ್ಸೆ ನೀಡುತ್ತಿರುವ ವೈದ್ಯರು ಲಿವಿಂಗ್ ವಿಲ್‌ನ ಅಧಿಕೃತತೆಯನ್ನು ಜೆಎಂಎಫ್‌ಸಿ ನ್ಯಾಯಾಧೀಶರಿಂದ ದೃಢಪಡಿಸಿಕೊಳ್ಳುವುದು ಅಗತ್ಯವಾ ಗಿದೆ.

ಲಿವಿಂಗ್ ವಿಲ್ ಅನ್ನು ಕಾರ್ಯಗತಗೊಳಿಸಲು ನಿಗದಿಗೊಳಿಸಿರುವ ಸೂಕ್ತ ಕಾನೂನು ಮತ್ತು ಕಾರ್ಯಾಚರಣೆ ಪ್ರಕ್ರಿಯೆಗಳನ್ನು ತಪ್ಪದೇ ಪಾಲಿಸುವುದು ಮುಖ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News