ಹತ್ಯೆಯನ್ನು ಕಣ್ಣಾರೆ ಕಂಡಿದ್ದೇನೆ ಎಂಬ ಹರ್ಜಿತ್ ಹೇಳಿಕೆ ನಿರಾಕರಿಸಿದ್ದ ಕೇಂದ್ರ
ಹೊಸದಿಲ್ಲಿ, ಮಾ. 20: ಮೊಸುಲ್‌ನಿಂದ ತಪ್ಪಿಕೊಂಡು ಬಂದು ಭಾರತೀಯರ ಹತ್ಯೆಯನ್ನು ತಾನು ಕಣ್ಣಾರೆ ನೋಡಿದ್ದೇನೆ ಎಂದು ಹರ್ಜಿತ್ ಮಸಯ್ಯ ನೀಡಿದ್ದ ಹೇಳಿಕೆ ಸುತ್ತ ಈಗ ಪ್ರಶ್ನೆಗಳು ಎದ್ದಿವೆ.
2014 ಜೂನ್ 11ರಂದು ಐಸಿಸ್‌ನಿಂದ ಅಪಹರಣಕ್ಕೊಳಗಾದ ನಿರ್ಮಾಣ ಕಾರ್ಮಿಕರಲ್ಲಿ ಹರ್ಜಿತ್ ಕೂಡ ಇದ್ದರು. 24ರ ಹರೆಯದ ಹರ್ಜಿತ್ ತಪ್ಪಿಸಿಕೊಂಡು ನಾಲ್ಕು ದಿನಗಳಲ್ಲಿ ಮರಳಿ ಭಾರತಕ್ಕೆ ಬಂದು ತನ್ನ ಸಹೋದ್ಯೋಗಿಗಳನ್ನು ಹತ್ಯೆಗೈದಿರುವ ಬಗ್ಗೆ ಆನ್‌ಲೈನ್ ನ್ಯೂಸ್ ಮ್ಯಾಗಜಿನ್ ಫೌಂಟೈನಿಂಕ್ ಡಾಟ್ ಇನ್‌ನ ಲೇಖನವೊಂದರಲ್ಲಿ ಪ್ರತಿಪಾದಿಸಿದ್ದರು. ಆದರೆ, ಆಗ ಹರ್ಜಿತ್ ಅವರ ಪ್ರತಿಪಾದನೆಯನ್ನು ಕೇಂದ್ರ ಸರಕಾರ ನಿರಾಕರಿಸಿತ್ತು. ಇದಕ್ಕೆ ಸ್ಪಷ್ಟನೆ ನೀಡಿರುವ ಸುಷ್ಮಾ ಸ್ವರಾಜ್, ಹರ್ಜಿತ್ ಸುಳ್ಳು ಹೇಳುತ್ತಿದ್ದಾರೆ ಎಂದು ಆಗಲೇ ರುಜುವಾತುಪಡಿಸಲಾಗಿತ್ತು. ಅವರ ಪ್ರತಿಪಾದನೆಯಂತೆ ಅವರು ಹತ್ಯಾಕಾಂಡದಲ್ಲಿ ಬದುಕಿ ಬಂದವರಲ್ಲ. ಆದರೆ, ಬಾಂಗ್ಲಾದೇಶದ ಸಹೋದ್ಯೋಗಿಗಳ ಗುಂಪಿನೊಂದಿಗೆ ಅಲಿ ಎಂಬ ಹೆಸರಿನಿಂದ ತಪ್ಪಿಸಿಕೊಂಡು ಬಂದವರು. ಅವರನ್ನು ಇರ್ಬಾದಿಯಲ್ಲಿ ಭಾರತೀಯ ಅಧಿಕಾರಿಗಳು ಪತ್ತೆ ಮಾಡಿದ್ದರು ಎಂದಿದ್ದಾರೆ. ಇರ್ಬಾದಿಗೆ ನೀವು ಹೇಗೆ ತಲುಪಿದ್ದೀರಿ ಎಂದು ನಾವು ಅವರಲ್ಲಿ ಪ್ರಶ್ನಿಸಿದ್ದೆವು. ಆದರೆ, ಹರ್ಜಿತ್, ‘‘ನನಗೆ ಗೊತ್ತಿಲ್ಲ. ನನ್ನನ್ನು ಒಮ್ಮೆ ಕರೆದುಕೊಂಡು ಹೋಗಿ’’ ಎಂದು ಹೇಳಿದ್ದರು ಎಂದು ಸುಶ್ಮಾ ಸ್ವರಾಜ್ ತಿಳಿಸಿದ್ದಾರೆ. ಘಟನೆ ಕುರಿತಂತೆ ಹರ್ಜಿತ್ ಹೇಳಿರುವುದಕ್ಕೂ ಸುಷ್ಮಾ ಸ್ವರಾಜ್ ಅವರು ಹೇಳುತ್ತಿರುವುದಕ್ಕೂ ವಿರೋಧಾಬಾಸ ಕಂಡು ಬರುತ್ತಿರುವುದು ಹಲವು ಪ್ರಶ್ನೆಗಳು ಹುಟ್ಟಿಕೊಳ್ಳಲು ಕಾರಣವಾಗಿದೆ.