ಕೇಂದ್ರ ಸಚಿವ ಗಡ್ಕರಿಗೆ ಪತ್ರ ಬರೆದ ಸಚಿನ್ ತೆಂಡೂಲ್ಕರ್

Update: 2018-03-20 16:06 GMT

ಹೊಸದಿಲ್ಲಿ,ಮಾ.20: ಸುರಕ್ಷಿತ ದ್ವಿಚಕ್ರ ವಾಹನ ಚಾಲನೆಗಾಗಿ ತನ್ನ ಅಭಿಯಾನವನ್ನು ಮುಂದುವರಿಸಿರುವ ಕ್ರಿಕೆಟ್ ದಂತಕಥೆ ಹಾಗೂ ರಾಜ್ಯಸಭಾ ಸದಸ್ಯ ಸಚಿನ್ ತೆಂಡೂಲ್ಕರ್ ಅವರು ಕಳಪೆ ಗುಣಮಟ್ಟದ ಹೆಲ್ಮೆಟ್ ತಯಾರಕರ ವಿರುದ್ಧ ಕ್ರಮವನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ದ್ವಿಚಕ್ರ ವಾಹನಗಳ ಸವಾರರನ್ನೊಳಗೊಂಡ ಅಪಘಾತಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸುತ್ತಿದ್ದು, ಅವರಿಗೆ ಅತ್ಯುನ್ನತ ಗುಣಮಟ್ಟದ ಸುರಕ್ಷತಾ ಉಪಕರಣಗಳು ಮುಖ್ಯವಾಗಿವೆ ಎಂದು ಕೇಂದ್ರಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಬರೆದಿರುವ ಪತ್ರದಲ್ಲಿ ತೆಂಡೂಲ್ಕರ್ ಹೇಳಿದ್ದಾರೆ.

ಕಳಪೆಗುಣಮಟ್ಟದ ಹೆಲ್ಮೆಟ್‌ಗಳನ್ನು ತಯಾರಿಸಿ ನಕಲಿ ಐಎಸ್‌ಐ ಗುರುತಿನೊಂದಿಗೆ ಮಾರಾಟ ಮಾಡುತ್ತಿರುವ ತಯಾರಕರ ವಿರುದ್ಧ ನಿಮ್ಮ ಸಚಿವಾಲಯವು ಕ್ರಮವನ್ನು ಕೈಗೊಳ್ಳಬೇಕು ಎಂದು ಕೋರಿ ತಾನು ಈ ಪತ್ರವನ್ನು ಬರೆಯುತ್ತಿದ್ದೇನೆ. ಓರ್ವ ಕ್ರೀಡಾಪಟುವಾಗಿ ಮೈದಾನದಲ್ಲಿ ಆಟಕ್ಕೆ ತೆರಳುವಾಗ ಅತ್ಯುನ್ನತ ಗುಣಮಟ್ಟದ ಅಸಲಿ ಸುರಕ್ಷತಾ ಉಪಕರಣಗಳ ಬಳಕೆಯ ಮಹತ್ವ ತನಗೆ ತಿಳಿದಿದೆ. ಇದೇ ಗುಣಮಟ್ಟವನ್ನು ದೇಶದಲ್ಲಿಯ ದ್ವಿಚಕ್ರ ವಾಹನ ಸವಾರರು ಬಳಸುತ್ತಿರುವ ಹೆಲ್ಮೆಟ್‌ಗಳಲ್ಲಿಯೂ ಕಾಯ್ದುಕೊಳ್ಳಬೇಕು ಎಂದು ತೆಂಡೂಲ್ಕರ್ ಒತ್ತಿ ಹೇಳಿದ್ದಾರೆ.

ರಸ್ತೆ ಸುರಕ್ಷತೆ ಅಭಿಯಾನದಲ್ಲಿ ಮುಂಚೂಣಿಯಲ್ಲಿರುವ ತೆಂಡೂಲ್ಕರ್ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಟ್ರಾಫಿಕ್ ಸಿಗ್ನಲ್‌ಗಳಲ್ಲಿ ನಿಂತಾಗ ಹೆಲ್ಮೆಟ್‌ಗಳನ್ನು ಧರಿಸಿಕೊಳ್ಳುವಂತೆ ಜನರನ್ನು ಆಗ್ರಹಿಸುತ್ತಲೇ ಇರುತ್ತಾರೆ.

ಭಾರತದಲ್ಲಿ ಶೇ.70ರಷ್ಟು ದ್ವಿಚಕ್ರ ವಾಹನ ಸವಾರರು ನಕಲಿ ಹೆಲ್ಮೆಟ್‌ಗಳನ್ನು ಖರೀದಿಸುತ್ತಿದ್ದಾರೆ ಎಂದು ಮಾಧ್ಯಮವರದಿಗಳನ್ನು ಉಲ್ಲೇಖಿಸಿ ಹೇಳಿರುವ ಅವರು, 2016ರಲ್ಲಿ ಅತ್ಯಂತಹೆಚ್ಚಿನ ಅಂದರೆ ಶೇ.30ಕ್ಕೂ ಅಧಿಕ ಅಪಘಾತಗಳಿಗೆ ದ್ವಿಚಕ್ರವಾಹನಗಳು ಕಾರಣವಾಗಿರುವುದನ್ನು ಪರಿಗಣಿಸಿದರೆ ಇದು ಅತ್ಯಂತ ಅಪಾಯದ ಸ್ಥಿತಿಯಾಗಿದೆ. ಸೂಕ್ತ ಹೆಲ್ಮೆಟ್ ಧಾರಣೆಯಿಂದ ಸವಾರರ ಬದುಕುಳಿಯುವ ಸಾಧ್ಯತೆ ಶೇ.42ರಷ್ಟು ಹೆಚ್ಚುವುದರಿಂದ ನಕಲಿ ಹೆಲ್ಮೆಟ್‌ಗಳ ಲಭ್ಯತೆ ದ್ವಿಚಕ್ರ ವಾಹನ ಸವಾರರ ಪಾಲಿಗೆ ಅಪಾಯಕಾರಿಯಾಗಿದೆ ಎಂದಿದ್ದಾರೆ.

ಐಎಸ್‌ಐ ಗುರುತು ಇಲ್ಲದ ಅಥವಾ ನಕಲಿ ಐಎಸ್‌ಐ ಗುರುತಿನಹೆಲ್ಮೆಟ್‌ಗಳ ತಯಾರಕರಿಗೆ ದಂಡನೆಯ ಬಗ್ಗೆ ಸರಕಾರವು ಚಿಂತನೆ ನಡೆಸಿದೆ ಎಂಬ ವರದಿಗಳಿವೆಯಾದರೂ ಆ ನಿಟ್ಟಿನಲ್ಲಿ ಈವರೆಗೆ ಯಾವುದೇ ದೃಢವಾದ ಕ್ರಮವನ್ನು ಕೈಗೊಳ್ಳಲಾಗಿಲ್ಲ.

 ಈ ಹಿನ್ನೆಲೆಯಲ್ಲಿ ನಕಲಿ ಹೆಲ್ಮೆಟ್ ತಯಾರಕರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಆಗ್ರಹಿಸಿರುವ ತೆಂಡೂಲ್ಕರ್, ದ್ವಿಚಕ್ರ ವಾಹನ ಸವಾರರು ಅಗ್ಗದ ಹೆಲ್ಮೆಟ್‌ಗಳನ್ನು ಖರೀದಿಸುವುದನ್ನು ತಡೆಯಲು ಉತ್ತಮಗುಣಮಟ್ಟದ ಹೆಲ್ಮೆಟ್‌ಗಳು ಕಡಿಮೆ ಬೆಲೆಗಳಲ್ಲಿ ಲಭ್ಯವಾಗಬೇಕು ಎಂದೂ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News