ಬಿಸಿಲಿನ ದಿನಗಳಿಗೆ ಈಗಲೇ ಸಿದ್ಧತೆ ಬೇಕಾಗಿದೆ

Update: 2018-03-20 18:45 GMT

ಮಾನ್ಯರೇ,

ರಾಜ್ಯದಲ್ಲಿ ಕಳೆದ ಮೂರು ನಾಲ್ಕು ವರ್ಷಗಳಿಂದ ಅವಧಿಗೂ ಮುನ್ನವೇ ಸೂರ್ಯನ ತಾಪ ಗಣನೀಯವಾಗಿ ಹೆಚ್ಚುತ್ತಿದೆ. ಬೇಸಿಗೆಯ ಮುಂಚಿನ ದಿನಗಳಾದ ಈಗಲೇ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ದಾಟುತ್ತಿದೆ. ಕರಾವಳಿ ಪ್ರದೇಶ ಮತ್ತು ಗ್ರೀನ್ ಸಿಟಿ ಎನಿಸಿಕೊಂಡಿರುವ ಬೆಂಗಳೂರು ಕೂಡಾ ಬಿಸಿಲಿನ ತಾಪದಿಂದ ಹೊರತಾಗಿಲ್ಲ. ಭೀಕರ ಸುಡುವ ಬಿಸಿಲಿನ ಝಳಕ್ಕೆ ಜನರು ನಿತ್ಯ ಹೈರಾಣಾಗುತ್ತಿದ್ದಾರೆ.

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಬಿಸಿಲಿನಿಂದಾಗಿ ಕೆರೆ, ಕಟ್ಟೆ, ಹಳ್ಳ, ಕೊಳವೆ ಬಾವಿ ಬೋರ್‌ವೆಲ್ಗಳಲ್ಲಿ ಇದ್ದ ಅಲ್ಪ ಸ್ವಲ ನೀರು ಕೂಡಾ ಬತ್ತಿಹೋಗುತ್ತಿವೆ. ಜನರು ಕುಡಿಯುವ ನಿತ್ಯ ನೀರಿಗಾಗಿ ಪರದಾಡುವಂತಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯಲು ನೀರು ಸಿಗದೆ ಇರುವುದರಿಂದ ಸೈಕಲ್, ಬೈಕ್ ಮತ್ತು ತಳ್ಳುವ ಗಾಡಿಗಳಲ್ಲಿ ಕೆಲವು ಕಿಲೋಮೀಟರ್ ಕ್ರಮಿಸಿ ನೀರು ಹೊತ್ತು ತರುವ ಪರಿಸ್ಥಿತಿ ಬೇಸಿಗೆ ಆರಂಭವಾಗುವ ಮುಂಚಿತವಾಗಿಯೇ ನಿರ್ಮಾಣವಾಗಿದೆ. ಇನ್ನು ಕೆಲೆವಡೆ ಜಾನುವಾರುಗಳಿಗೆ ಕುಡಿಯಲು ನೀರು, ತಿನ್ನಲು ಮೇವು ಸಿಗದೆ ಇರುವುದರಿಂದ ರೈತರು ತಮ್ಮ ದನಕರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಸುಡುವ ಬಿಸಿಲಿನ ಝಳದಿಂದಾಗಿ ಜನರಿಗೂ ಮತ್ತು ಜಾನುವಾರುಗಳಿಗೂ ಮಾರಣಾಂತಿಕ ರೋಗಗಳು ಬರುತ್ತಿವೆ.

ಆದ್ದರಿಂದ ಸರಕಾರ ಮತ್ತು ಸಂಬಂಧ ಪಟ್ಟ ಇಲಾಖೆಗಳು ಮುಂಬರುವ ಬಿಸಿ ದಿನಗಳಿಂದ ಜನಜಾನುವಾರುಗಳನ್ನು ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮಗಳನ್ನು ಈಗಲೇ ಕೈಗೊಳ್ಳಬೇಕಾಗಿದೆ.

-ಮೌಲಾಲಿ ಕೆ. ಬೋರಗಿ, ಸಿಂದಗಿ

Writer - -ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Editor - -ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Similar News