ಯಾವುದೇ ಕಲಾಪ ನಡೆಯದೇ ರಾಜ್ಯಸಭೆ ಮುಂದೂಡಿಕೆ
ಹೊಸದಿಲ್ಲಿ,ಮಾ.21: ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಕಾಂಗ್ರೆಸ್ ಹಾಗೂ ತಮಿಳುನಾಡು ಮತ್ತು ಆಂಧ್ರಪ್ರದೇಶಗಳ ಪಕ್ಷಗಳು ಕೋಲಾಹಲ ಸೃಷ್ಟಿಸಿದ್ದರಿಂದ ಬುಧವಾರ ರಾಜ್ಯಭೆಯು ಯಾವುದೇ ಕಲಾಪ ನಡೆಸದೆ ದಿನದ ಮಟ್ಟಿಗೆ ಮುಂದೂಡಲ್ಪಟ್ಟಿತು.
ಬೆಳಗ್ಗೆ ಸದನವು ಆರಂಭಗೊಂಡ ಬೆನ್ನಿಗೇ ಪ್ರತಿಪಕ್ಷಗಳು ಸದನದ ಅಂಗಳದಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದರಿಂದ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಕೇವಲ ನಾಲ್ಕು ನಿಮಿಷಗಳಾಗುವಷ್ಟರಲ್ಲಿ ಸದನವನ್ನು ಮುಂದೂಡಿದರು.
ಪಟ್ಟಿ ಮಾಡಲಾಗಿದ್ದ ವಿಷಯಗಳನ್ನು ಸಭಾಪತಿಗಳ ಮುಂದೆ ಮಂಡಿಸಿದ ಬೆನ್ನಿಗೇ ಟಿಡಿಪಿ ಮತ್ತು ಕಾಂಗ್ರೆಸ್‌ನ ಕೆವಿಪಿ ರಾಮಚಂದ್ರ ರಾವ್ ಸೇರಿದಂತೆ ಆಂಧ್ರ ಪ್ರದೇಶದ ಪಕ್ಷಗಳ ಸದಸ್ಯರು ರಾಜ್ಯಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಘೋಷಣೆಗಳನ್ನು ಕೂಗುತ್ತ ಸದನದ ಅಂಗಳಕ್ಕೆ ನುಗ್ಗಿದರು. ತಮಿಳುನಾಡು ಮತ್ತು ಕರ್ನಾಟಕಗಳ ನಡುವೆ ನೀರಿನ ಹಂಚಿಕೆಗಾಗಿ ಕಾವೇರಿ ನದಿ ನಿರ್ವಹಣೆ ಮಂಡಳಿಯನ್ನು ತಕ್ಷಣ ರಚಿಸುವಂತೆ ಆಗ್ರಹಿಸಿ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ಸದಸ್ಯರೂ ಪ್ರತಿಭಟನಾನಿರತರನ್ನು ಸೇರಿಕೊಂಡರು. ಕಾಂಗ್ರೆಸ್ ಸದಸ್ಯರೂ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಸದನದ ಅಂಗಳಕ್ಕೆ ಲಗ್ಗೆಯಿಟ್ಟರು.
ಪ್ರತಿಪಕ್ಷ ನಾಯಕ ಗುಲಾಂ ನಬಿ ಆಝಾದ್ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲೆ ದೌರ್ಜನ್ಯಗಳು ಹಾಗೂ ಇರಾಕ್‌ನಲ್ಲಿ 39 ಅಪಹೃತ ಭಾರತೀಯರ ಹತ್ಯೆಗಳ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರ ಹೇಳಿಕೆಯ ಕುರಿತು ಚರ್ಚೆಗೆ ಆಗ್ರಹಿಸಿದರು.