ಎಸ್ಸಿ/ಎಸ್ಟಿ ಕಾನೂನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್‌ಗೆ ಕಾಂಗ್ರೆಸ್ ಮನವಿ

Update: 2018-03-21 16:29 GMT

ಹೊಸದಿಲ್ಲಿ, ಮಾ.21: ಸದ್ಯ ಬಿಜೆಪಿ ನೇತೃತ್ವದ ಸರಕಾರದಲ್ಲಿ ದಲಿತರ ವಿರುದ್ಧ ದೌರ್ಜನ್ಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿರುವ ಆದೇಶವನ್ನು ಮರುಪರಿಶೀಲಿಸುವಂತೆ ಕಾಂಗ್ರೆಸ್ ಮನವಿ ಮಾಡಿದೆ. 1989ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಆರೋಪಿತರಾಗಿರುವ ಸಾರ್ವಜನಿಕ ಅಧಿಕಾರಿಗಳು ಅಥವಾ ಖಾಸಗಿ ವ್ಯಕ್ತಿಯನ್ನು ನೇಮಿತ ಮಂಡಳಿ ಮತ್ತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿಯ ಅನುಮತಿಯ ಹೊರತಾಗಿ ಬಂಧಿಸುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಮಂಗಳವಾರ ತಿಳಿಸಿತ್ತು.

ಸರ್ವೋಚ್ಚ ನ್ಯಾಯಾಲಯದ ಈ ಆದೇಶದ ನಂತರ ದಲಿತ ಮತ್ತು ಇತರ ತುಳಿತಕ್ಕೊಳಗಾದ ಸಮುದಾಯಗಳು ಅಭದ್ರತೆಯ ಭಾವವನ್ನು ಎದುರಿಸುತ್ತಿವೆ. ಈ ವಿಷಯದಲ್ಲಿ ಕೇಂದ್ರ ಸರಕಾರವು ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್‌ನ ಹಿರಿಯ ವಕ್ತಾರ ಆನಂದ್ ಶರ್ಮಾ ಆಗ್ರಹಿಸಿದ್ದಾರೆ. ಶ್ರೇಷ್ಠ ನ್ಯಾಯಾಲಯ ನೀಡಿರುವ ಆದೇಶದ ಬಗ್ಗೆ ಆತಂಕ ವ್ಯಕ್ತಪಡಿಸಲಾಗುತ್ತಿದೆ. ಅದನ್ನು ಮರುಪರಿಶೀಲಿಸದಿದ್ದರೆ, ಅದು ದುರದೃಷ್ಟಕರ. ಸರಕಾರ ಈ ಕುರಿತು ತನ್ನ ನಿಲುವನ್ನು ಸ್ಪಷಪಡಿಸಬೇಕು. ಅದು ಮೌನವಾಗಿಯೇ ಉಳಿದರೆ ನ್ಯಾಯಾಲಯದ ಈ ತೀರ್ಪನ್ನು ಅದು ಒಪ್ಪಿದಂತೆ ಎಂದು ಅವರು ತಿಳಿಸಿದ್ದಾರೆ.

ಈ ಬೆಳವಣಿಗೆಯು ಮೀಸಲಾತಿಯನ್ನು ಕೊನೆಗೊಳಿಸುವ ಬಿಜೆಪಿ-ಆರೆಸ್ಸೆಸ್ ನೀತಿಯ ಫಲಿತಾಂಶವಾಗಿದೆ ಎಂದು ಕಾಂಗ್ರೆಸ್ ಸಂಸದೆ ಕುಮಾರಿ ಸೆಲ್ಜ ಆರೋಪಿಸಿದ್ದಾರೆ. ದಲಿತರು ಹಾಗೂ ಇತರ ತುಳಿತಕ್ಕೊಳಗಾದ ಸಮುದಾಯದ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ. ಹಾಗಾಗಿ ನ್ಯಾಯಾಲಯವು ತನ್ನ ಆದೇಶವನ್ನು ಮರುಪರಿಶೀಲಿಸಬೇಕು ಅಥವಾ ಈ ಕಾಯ್ದೆಗೆ ತಿದ್ದುಪಡಿ ಮಾಡಬೇಕು ಎಂದು ಕಾಂಗ್ರೆಸ್ ಸಂಪರ್ಕ ಮುಖ್ಯಸ್ಥ ರಣ್‌ದೀಪ್ ಸುರ್ಜೇವಾಲಾ ಮನವಿ ಮಾಡಿದ್ದಾರೆ.

ಎಸ್ಸಿ ಮತ್ತು ಎಸ್ಟಿ ಸಮುದಾಯವನ್ನು ಜಾತಿ ನಿಂದನೆ ಮತ್ತು ಅಸಮಾನತೆಯಿಂದ ರಕ್ಷಿಸಲು ಜಾರಿಗೆ ತರಲಾದ ದೌರ್ಜನ್ಯ ವಿರೋಧಿ ಕಾಯ್ದೆಯು ಮುಗ್ದ ಜನರನ್ನು ಮತ್ತು ಸಾರ್ವಜನಿಕ ಅಧಿಕಾರಿಗಳನ್ನು ಬ್ಲಾಕ್‌ಮೇಲ್ ಮಾಡುವ ಸಾಧನವಾಗಿ ಬದಲಾಗಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News