ಸರಣಿ ಪಾರ್ಸೆಲ್ ಬಾಂಬ್ ಸ್ಫೋಟದ ಶಂಕಿತ ಸ್ಫೋಟಿಸಿಕೊಂಡು ಆತ್ಮಹತ್ಯೆ

Update: 2018-03-21 17:32 GMT

ವಾಶಿಂಗ್ಟನ್, ಮಾ. 21: ಅಮೆರಿಕದ ಟೆಕ್ಸಾಸ್ ರಾಜ್ಯದ ರಾಜಧಾನಿ ಆಸ್ಟಿನ್‌ನಲ್ಲಿ ನಡೆದ ಸರಣಿ ಪಾರ್ಸೆಲ್ ಬಾಂಬ್‌ಸ್ಫೋಟಗಳಿಗೆ ಸಂಬಂಧಿಸಿ ಪೊಲೀಸರು ಹುಡುಕುತ್ತಿದ್ದ ವ್ಯಕ್ತಿಯೊಬ್ಬ ಬುಧವಾರ ಮುಂಜಾನೆ ತನ್ನ ಕಾರಿನಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ.

‘‘ಶಂಕಿತನು ಮೃತಪಟ್ಟಿದ್ದಾನೆ’’ ಎಂದು ಆಸ್ಟಿನ್ ಪೊಲೀಸ್ ಮುಖ್ಯಸ್ಥ ಬ್ರಯಾನ್ ಮ್ಯಾನ್ಲಿ ಸುದ್ದಿಗೋಷ್ಠಿಯೊಂದರಲ್ಲಿ ತಿಳಿಸಿದರು.

ಮಾರ್ಚ್ 2ರಿಂದ ಟೆಕ್ಸಾಸ್ ರಾಜಧಾನಿಯಲ್ಲಿ ನಡೆದ ಎಲ್ಲ 5 ಬಾಂಬ್ ಸ್ಫೋಟಗಳಿಗೆ ಈತನೇ ಜವಾಬ್ದಾರಿ ಎಂಬುದಾಗಿ ಶಂಕಿಸಲಾಗಿದೆ ಎಂದು ಮ್ಯಾನ್ಲಿ ಹೇಳಿದರು.

ಸರಣಿ ಬಾಂಬ್ ಸ್ಫೋಟಗಳಿಗೆ ಇಬ್ಬರು ಬಲಿಯಾಗಿದ್ದಾರೆ ಹಾಗೂ ಹಲವಾರು ಮಂದಿ ಗಾಯಗೊಂಡಿದ್ದಾರೆ. ಸ್ಫೋಟಗಳ ಹಿನ್ನೆಲೆಯಲ್ಲಿ ಜನರು ಆತಂಕದಿಂದ ದಿನಗಳನ್ನು ಕಳೆಯುತ್ತಿದ್ದರು.

ಶಂಕಿತನ ಕಾರು ಆಸ್ಟಿನ್‌ನಲ್ಲಿನ ಹೊಟೇಲೊಂದರ ಹೊರಗೆ ನಿಂತಿರುವುದನ್ನು ಪೊಲೀಸರು ಪತ್ತೆಹಚ್ಚಿದರು. ಪರಿಣತ ತಂಡಗಳು ಸ್ಥಳಕ್ಕೆ ಬರುವುದನ್ನು ಪೊಲೀಸರು ಕಾಯುತ್ತಿದ್ದಾಗ, ಆರೋಪಿಯು ಅಲ್ಲಿಂದ ಪರಾರಿಯಾಗಲು ಯತ್ನಿಸಿದನು.

ಪೊಲೀಸರು ಆತನ ಕಾರನ್ನು ನಿಲ್ಲಿಸಿ ಬಂಧಿಸಲು ಮುಂದಾದಾಗ, ಆತ ಕಾರಿನ ಒಳಗಿನಿಂದಲೇ ತನ್ನನ್ನು ತಾನು ಸ್ಫೋಟಿಸಿಕೊಂಡನು ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News