ಬಾಲಿವುಡ್‌ಗೆ ಬರುತ್ತಿದೆ ಫಾಲ್ಟ್ ಇನ್ ಅವರ್ ಸ್ಟಾರ್ಸ್

Update: 2018-03-24 11:23 GMT

2014ರಲ್ಲಿ ತೆರೆಕಂಡು ಬಾಕ್ಸ್‌ಆಫೀಸ್‌ನಲ್ಲಿ ಭಾರೀ ಯಶಸ್ಸು ಕಂಡ ಹಾಲಿವುಡ್ ಚಿತ್ರ ‘ದಿ ಫಾಲ್ಟ್ ಇನ್ ಅವರ್ ಸ್ಟಾರ್ಸ್‌’ನ ಬಾಲಿವುಡ್ ರಿಮೇಕ್‌ಗೆ ನಾಯಕ-ನಾಯಕಿ ಯಾರಾಗಲಿ ದ್ದಾರೆಂಬ ಊಹಾಪೋಹಗಳು ಬಹಳ ಸಮಯದಿಂದ ಹರಿದಾಡುತ್ತಲೇ ಇದ್ದವು. ಕೊನೆಗೂ ಅದಕ್ಕೆ ತೆರೆ ಬಿದ್ದಿದೆ. ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ನಿರ್ಮಿಸಿ, ಮುಖೇಶ್ ಚಾಬ್ರಾ ಆ್ಯಕ್ಷನ್ ಕಟ್ ಹೇಳಲಿರುವ ಈ ಚಿತ್ರದ ನಾಯಕಿಯಾಗಿ ನವ ನಟಿ ಸಂಜನಾ ಸಿಂಗ್ ಸಾಂಗಿ ಹಾಗೂ ನಾಯಕನಾಗಿ ಸುಶಾಂತ್ ಸಿಂಗ್ ರಾಜ್‌ಪುತ್ ಆಯ್ಕೆಯಾಗಿದ್ದಾರೆ. ಫಾಲ್ಟ್ ಇನ್ ಆವರ್ ಸ್ಟಾರ್ಸ್‌, ಜಾನ್‌ಗ್ರೀನ್ ಅವರ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿತ್ತು.

ಸಂಜನಾ ಸಾಂಗಿ ಈ ಚಿತ್ರದ ಪಾತ್ರಕ್ಕೆ ಸಮರ್ಥ ಆಯ್ಕೆಯೆಂದು ನಿರ್ದೇಶಕ ಮುಖೇಶ್ ಚಾಬ್ರಾ ತೃಪ್ತಿ ವ್ಯಕ್ತಪಡಿಸಿದ್ದಾರೆ. ಈ ಪ್ರತಿಭಾವಂತ ನಟಿಯು ಬೆಳ್ಳಿತೆರೆಯಲ್ಲಿ ಮ್ಯಾಜಿಕ್ ಮಾಡಲಿದ್ದಾಳೆಂಬ ಆತ್ಮವಿಶ್ವಾಸ ಅವರದು. ಈಗಾಗಲೇ ಚಿತ್ರದ ಸ್ಕ್ರಿಪ್ಟ್ ಸಿದ್ಧವಾಗಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ, ಈ ವರ್ಷದ ಮಧ್ಯದ ವೇಳೆಗೆ ಚಿತ್ರ ಸೆಟ್ಟೇರಲಿದೆ. ಪಾತ್ರವರ್ಗವನ್ನು ಆಯ್ಕೆ ಮಾಡುವ ಕಾಸ್ಟಿಂಗ್ ನಿರ್ದೇಶಕರಾಗಿ ಹಲವು ಚಿತ್ರಗಳಿಗೆ ದುಡಿದಿದ್ದ ಮುಖೇಶ್ ಚಾಬ್ರಾ, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.

ಆಸ್ಕರ್ ಪುರಸ್ಕೃತ ಸಂಗೀತ ನಿರ್ದೇಶಕ ಎ.ಆರ್.ರಹ್ಮಾನ್ ಈ ಪ್ರಣಯ ಪ್ರಧಾನ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಸಾವಿನ ಅಂಚಿನಲ್ಲಿರುವ ಯುವಕ, ಯುವತಿ ಪರಸ್ಪರ ಪ್ರೀತಿಸುವ ಭಾವಪೂರ್ಣ ಕಥಾವಸ್ತವನ್ನು ಈ ಚಿತ್ರ ಹೊಂದಿದೆ. ಹಾಲಿವುಡ್ ಚಿತ್ರ ಫಾಲ್ಟ್ ಇನ್ ಆವರ್ ಸ್ಟಾರ್ಸ್‌ನಲ್ಲಿ ನಾಯಕ, ನಾಯಕಿಯರಾಗಿ ಅಭಿನಯಿಸಿದ್ದ ಶೈಲೆನ್ ವೂಡ್ಲಿ ಹಾಗೂಆ್ಯನ್ಸೆಲ್ ಎಲ್ಗೊರ್ಟ್ ಅವರ ಅಭಿನಯ ಅಪಾರ ಮೆಚ್ಚುಗೆ ಗಳಿಸಿತ್ತು. ಇದೀಗ ಸುಶಾಂತ್ ಹಾಗೂ ಸಂಜನಾ ಸಾಂಗಿ ಕೂಡಾ ಬೆಳ್ಳಿತೆರೆಯಲ್ಲಿ ಅದೇ ರೀತಿಯ ಮ್ಯಾಜಿಕ್ ಸೃಷ್ಟಿಸಲಿ ದ್ದಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News