ಮೇ 9ರಂದು ಸಾವಿತ್ರಿ ಬೆಳ್ಳಿತೆರೆಗೆ

Update: 2018-03-24 11:24 GMT

ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ದಂತಕತೆ ಎನಿಸಿದ್ದ ಗತಕಾಲದ ನಟಿ ಸಾವಿತ್ರಿ ಬದುಕಿನ ಕಥೆಯನ್ನು ಹೇಳುವ ಮಹಾನಟಿ ತೆಲುಗು ಚಿತ್ರ, ಬೆಳ್ಳಿತೆರೆಯನ್ನು ಅಲಂಕರಿಸಲು ದಿನಗಣನೆ ಆರಂಭ ಗೊಂಡಿದೆ. ಮಲಯಾಳಂ ಚಿತ್ರರಂಗದ ಸೂಪರ್‌ಸ್ಟಾರ್ ದುಲ್ಕರ್ ಸಲ್ಮಾನ್ ಹಾಗೂ ಕೀರ್ತಿ ಸುರೇಶ್ ಪ್ರಧಾನ ಪಾತ್ರಗಳಲ್ಲಿ ನಟಿಸಿರುವ ಮಹಾನಟಿ, ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಮಾರ್ಚ್ 30ರಂದು ರಿಲೀಸ್ ಆಗಬೇಕಿತ್ತು. ಆದರೆ ಚಿತ್ರದ ವಿಎಫ್‌ಎಕ್ಸ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕೆಲಸಗಳು ಇನ್ನೂ ಪೂರ್ತಿಯಾಗದ ಕಾರಣ, ಬಿಡುಗಡೆ ದಿನಾಂಕವನ್ನು ಮೇ 9ಕ್ಕೆ ಮುಂದೂಡಲ್ಪಟ್ಟಿದೆ.

ನಾಗ್ ಅಶ್ವಿನ್ ನಿರ್ದೇಶಿಸಿರುವ ಸಾವಿತ್ರಿ ಚಿತ್ರದಲ್ಲಿ, ಟಾಲಿವುಡ್‌ನ ನಂ.1 ಹೀರೋ ಯಿನ್ ಆನುಷ್ಕಾ ಶೆಟ್ಟಿ ಕೂಡಾ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಗತಕಾಲದ ತೆಲುಗು ನಟಿ, ನಿರ್ದೇಶಕಿ, ಲೇಖಕಿ ಹಾಗೂ ನಿರ್ಮಾಪಕಿಯಾಗಿ ಹೆಸರು ಮಾಡಿದ್ದ ಭಾನುಮತಿ ಯ ಪಾತ್ರದಲ್ಲಿ ಅನುಷ್ಕಾ ಕಾಣಿಸಿಕೊಂಡಿದ್ದಾರೆ.

ತಮಿಳಿನಲ್ಲಿ ನಟನಾಗಿ ಭಾರೀ ಹೆಸರು ಮಾಡಿದ್ದ ಜೆಮಿನಿ ಗಣೇಶನ್ ಪಾತ್ರವನ್ನು ದುಲ್ಕರ್ ಸಲ್ಮಾನ್ ನಿರ್ವಹಿಸಿದ್ದಾರೆ. ಜೆಮಿನ್ ಗಣೇಶನ್ ಪತ್ನಿ, ನಟಿ ಸಾವಿತ್ರಿಯಾಗಿ ಕೀರ್ತಿ ಸುರೇಶ್ ಅಭಿನಯಿಸಿದ್ದಾರೆ. ತೆಲುಗಿನ ಜನಪ್ರಿಯ ನಟಿ ಸಮಂತಾ, ವಿಜಯ್ ದೇವರ ಕೊಂಡ, ಶಾಲಿನಿ ಪಾಂಡೆ, ರಾಜೇಂದ್ರ ಪ್ರಸಾದ್, ಪ್ರಕಾಶ್ ರಾಜ್ ಮತ್ತಿತರ ಘಟಾನುಘಟಿ ತಾರೆಯರ ದಂಡೇ ಈ ಚಿತ್ರದಲ್ಲಿದೆ. ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ತಯಾರಾಗಿರುವ ಸಾವಿತ್ರಿ ಚಿತ್ರ ವೈಜಯಂತಿ ಮೂವೀಸ್ ಬ್ಯಾನರ್‌ನಡಿಯಲ್ಲಿ ನಿರ್ಮಾಣಗೊಂಡಿದೆ. ಸಾವಿತ್ರಿ ತೆಲುಗಿನ ಜೊತೆಗೆ ತಮಿಳು ಹಾಗೂ ಮಲಯಾಳಂಗಳಲ್ಲೂ ಏಕಕಾಲದಲ್ಲಿ ಬಿಡುಗಡೆಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News