×
Ad

ಘೌಟದಿಂದ ಭಾರೀ ಸಂಖ್ಯೆಯಲ್ಲಿ ಪಲಾಯನ

Update: 2018-03-27 22:41 IST

ಡಮಾಸ್ಕಸ್, ಮಾ. 27: ಸಿರಿಯದ ಮುತ್ತಿಗೆಗೊಳಗಾಗಿರುವ ಜಿಲ್ಲೆ ಪೂರ್ವ ಘೌಟದಿಂದ ಮಂಗಳವಾರ ಬೆಳಗ್ಗೆ ಭಾರೀ ಸಂಖ್ಯೆಯಲ್ಲಿ ಶಸ್ತ್ರಧಾರಿ ಬಂಡುಕೋರರು ಮತ್ತು ನಾಗರಿಕರು ಹೊರಹೋಗಿದ್ದಾರೆ.

ಸಿರಿಯ ರಾಜಧಾನಿ ಡಮಾಸ್ಕಸ್‌ನ ಹೊರವಲಯದಲ್ಲಿರುವ ಪೂರ್ವ ಘೌಟ ಒಂದು ಕಾಲದಲ್ಲಿ ಬಂಡುಕೋರರ ಭದ್ರಕೋಟೆಯಾಗಿತ್ತು. ಸಿರಿಯ ಸೇನೆಯು ರಶ್ಯ ಮತ್ತು ಇತರ ಬಾಡಿಗೆ ಸೈನಿಕರ ಬೆಂಬಲದೊಂದಿಗೆ ಒಂದು ತಿಂಗಳ ಹಿಂದೆ ಈ ಪ್ರದೇಶವನ್ನು ಮರುವಶಪಡಿಸಿಕೊಳ್ಳಲು ಭೀಕರ ಸೇನಾ ಕಾರ್ಯಾಚರಣೆ ನಡೆಸಿದ ಬಳಿಕ ಈ ಪ್ರದೇಶದ ಮೇಲೆ ಬಂಡುಕೋರರ ನಿಯಂತ್ರಣ ಶಿಥಿಲಗೊಂಡಿದೆ.

ಸೇನಾ ಕಾರ್ಯಾಚರಣೆಯಲ್ಲಿ ಸಾವಿರಕ್ಕೂ ಅಧಿಕ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.

ಸಿರಿಯ ಸೇನೆಯು ಈವರೆಗೆ 90 ಶೇಕಡದಷ್ಟು ಪ್ರದೇಶಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಉಳಿದ ಭಾಗದಲ್ಲಿರುವ ಬಂಡುಕೋರರ ಜೊತೆ ರಶ್ಯ ನೇತೃತ್ವದಲ್ಲಿ ಮಾತುಕತೆ ನಡೆಯುತ್ತಿದ್ದು, ಅವರಾಗಿಯೇ ಊರು ಬಿಟ್ಟು ಹೋಗುವಂತೆ ಮಾಡಲಾಗುತ್ತಿದೆ.

ಈಗಾಗಲೇ ಬಂಡುಕೋರರೊಂದಿಗೆ ಮಾಡಿಕೊಂಡಿರುವ ಈ ರೀತಿಯ ಒಪ್ಪಂದಗಳ ಪ್ರಕಾರ, ಸಾವಿರಾರು ಬಂಡುಕೋರರು, ಅವರ ಸಂಬಂಧಿಕರು ಮತ್ತು ಇತರ ನಾಗರಿಕರು ಘೌಟ ಜಿಲ್ಲೆಯಿಂದ ಇದ್ಲಿಬ್‌ಗೆ ವಲಸೆ ಹೋಗುತ್ತಿದ್ದಾರೆ.

ಅರ್ಬಿನ್ ಮತ್ತು ಝಮಲ್ಕ ಪಟ್ಟಣಗಳಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ವಲಸೆ ಹೋಗಿದ್ದಾರೆ. ಅಲ್ಲಿ ಪಾಯ್ಲಕ್ ಅಲ್ ರಹಮಾನ್ ಎಂಬ ಗುಂಪೊಂದು ಪ್ರಾಬಲ್ಯ ಹೊಂದಿತ್ತು. ಈ ಗುಂಪು ಶುಕ್ರವಾರ ರಶ್ಯದೊಂದಿಗೆ ಒಪ್ಪಂದ ಮಾಡಿಕೊಂಡಿತು. ಶನಿವಾರ ಬೆಳಗ್ಗಿನಿಂದಲೇ ಅಲ್ಲಿಂದ 1,000ಕ್ಕೂ ಅಧಿಕ ಮಂದಿ ಬಸ್‌ಗಳ ಮೂಲಕ ಹೊರಹೋಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News