ಸಂಘಪರಿವಾರದ ಪ್ರತಿಮೆ-ಧ್ವಂಸದ ರಾಜಕಾರಣವನ್ನು ಗುಹಾ ಸಮರ್ಥಿಸುತ್ತಿದ್ದಾರಾ?

Update: 2018-03-27 18:31 GMT

ಭಾಗ-2

1920ರಲ್ಲಿ ಕಮ್ಯುನಿಸ್ಟ್ ಪಕ್ಷ ಸ್ಥಾಪನೆಯಾದ ಕೂಡಲೇ ನಿಷೇಧಕ್ಕೆ ಒಳಗಾಗಿತ್ತು. ಸಕ್ರಿಯ ಕಮ್ಯುನಿಸ್ಟ್ ಕಾರ್ಯಕರ್ತರನ್ನು ‘ಕಾನ್ಪುರ ಪಿತೂರಿ’, ‘ಪೇಶಾವರ್ ಪಿತೂರಿ’ ಮುಂತಾದ ಕೇಸುಗಳನ್ನು ಹಾಕಿ ಬಂಧಿಸಲಾಗಿತ್ತು. ದೇಶದಾದ್ಯಂತ ಸಕ್ರಿಯವಾಗಿದ್ದ ಕಮ್ಯುನಿಸ್ಟ್ ಮತ್ತು ಕ್ರಾಂತಿಕಾರಿ ಗುಂಪುಗಳನ್ನ್ನು ಸಂಪರ್ಕಿಸುವುದೂ ಸಾಧ್ಯವಿರಲಿಲ್ಲ. ಇಂತಹ ಸಂಪರ್ಕ ಸಾಧ್ಯವಾದಾಗ ಎಚ್.ಎಸ್.ಆರ್.ಎ.ಯ ಹೆಚ್ಚಿನ ಸದಸ್ಯರು ಕಮ್ಯುನಿಸ್ಟ್ ಪಕ್ಷದ ಸದಸ್ಯರಾದರು. ಭಗತ್ ಸಿಂಗ್ ಕಮ್ಯುನಿಸ್ಟ್ ಪಕ್ಷದ ಸ್ಥಾಪಕ ಅಥವಾ ಸದಸ್ಯನಾಗಿರದಿದ್ದರೂ, ಎಚ್.ಎಸ್.ಆರ್.ಎ. 1930ರ ದಶಕದಲ್ಲಿ ಕಮ್ಯುನಿಸ್ಟ್ ಕ್ರಾಂತಿಕಾರಿ ಧಾರೆಯನ್ನು ಸೇರಿತು ಎಂಬುದೆಲ್ಲವನ್ನು ಗುಹಾ ಮುಚ್ಚಿಡುತ್ತಾರೆ.

ಎಚ್.ಎಸ್.ಆರ್.ಎ. ಮಾತ್ರವಲ್ಲ, ಗದ್ದರ್ ಪಾರ್ಟಿ, ಅನುಶೀಲನ್ ಜುಗಾಂತರ್ ಮುಂತಾದ ಬಂಗಾಳಿ ಕ್ರಾಂತಿಕಾರಿ ಗುಂಪುಗಳು, ದೇಶದ ಹಲವು ನಗರಗಳಲ್ಲಿ ಸಕ್ರಿಯವಾಗಿದ್ದ ದೇಶಪ್ರೇಮಿ ಕ್ರಾಂತಿಕಾರಿ ಗುಂಪುಗಳ ಹಾಗೂ ರೈತ-ಕಾರ್ಮಿಕ ಚಳವಳಿಗಳ ಹಲವು ಧಾರೆಗಳು ಸೇರಿದ ದೇಶಪ್ರೇಮಿ ಕ್ರಾಂತಿಕಾರಿ ಪಕ್ಷವಾಗಿ ಕಮ್ಯುನಿಸ್ಟ್ ಪಕ್ಷ 1940ರ ದಶಕದ ಆದಿಯಲ್ಲಿ ಹೊಮ್ಮಿತ್ತು ಎಂಬುದನ್ನೂ ಗುಹಾ ಮುಚ್ಚಿಡಲು ಪ್ರಯತ್ನಿಸುತ್ತಾರೆ. ಇಂತಹ ‘ಚಾರಿತ್ರಿಕ’ ತಪ್ಪುಗಳನ್ನು ನಾನು ಖ್ಯಾತ ಇತಿಹಾಸಕಾರ ಗುಹಾರಿಂದ ನಿರೀಕ್ಷಿಸಿರಲಿಲ್ಲ. ಕಾಕತಾಳೀಯವೋ ಅಲ್ಲವೋ, ಸಂಘ ಪರಿವಾರ ಕಮ್ಯುನಿಸ್ಟರ ಮೇಲೆ ದಾಳಿ ಮಾಡುವಾಗ ಬಳಸುವ ತಂತ್ರಗಳೂ ಇವೇನೇ -ವಿದೇಶೀ ಸರ್ವಾಧಿಕಾರಿ ಸಿದ್ಧಾಂತ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕಮ್ಯುನಿಸ್ಟರ ಪಾತ್ರ ಮುಚ್ಚಿಡುವುದು, ಭಗತ್ ಸಿಂಗ್‌ನ್ನು ಕಮ್ಯುನಿಸ್ಟ್ ಪರಂಪರೆಯಿಂದ ಪ್ರತ್ಯೇಕಿಸಲು ಪ್ರಯತ್ನಿಸುವುದು. ಗುಹಾ ಅವರು ಸಂಘ ಪರಿವಾರದ ಈ ದಾಳಗಳಿಗೆ ಈಗ ಯಾಕೆ ಮೊರೆ ಹೋಗಿದ್ದಾರೆ?

ಭಗತ್ ಸಿಂಗ್ ಎಲ್ಲಾ ಕಮ್ಯುನಿಸ್ಟರ, ದೇಶಪ್ರೇಮಿಗಳ ಹೀರೊ. ಚಾರಿತ್ರಿಕವಾಗಿ ಹಲವು ಧಾರೆಗಳು ಸೇರಿ ಆದ ಭಾರತದ ಕಮ್ಯುನಿಸ್ಟ್ ಪಕ್ಷದ ಸ್ಥಾಪನೆ ಅಥವಾ ಬೆಳವಣಿಗೆಯಲ್ಲಿ (ಚೀನಾದಲ್ಲಿ ಮಾವೋ, ವಿಯೇಟ್ನಾಮಿನಲ್ಲಿ ಹೊ ಚಿ ಮಿನ್ ಇದ್ದಂತೆ) ಭಗತ್ ಸಿಂಗ್ ಅಥವಾ ಯಾವುದೇ ಒಬ್ಬ ವ್ಯಕ್ತಿ ಪಕ್ಷದ ಸಿಂಹಪಾಲು ವಹಿಸಿಲ್ಲ. ಈ ಹಿನ್ನೆಲೆಯಲ್ಲಿಯೇ ಕಮ್ಯುನಿಸ್ಟ್ ಪಕ್ಷದ ಸಮಾವೇಶದಲ್ಲಿ ಪಕ್ಷದ ಸದಸ್ಯನೂ ಆಗಿರದ ಭಗತ್ ಸಿಂಗ್ ಅಥವಾ ಇನ್ಯಾವ ನಾಯಕರ ಭಾವಚಿತ್ರವನ್ನು ಹಾಕುವ ಸಂಪ್ರದಾಯ ಇಲ್ಲ. ಇದು ಇತಿಹಾಸಕಾರ ಗುಹಾಗೆ ತಿಳಿಯದ್ದೇನಲ್ಲ. ಕಮ್ಯುನಿಸ್ಟರನ್ನು ಹೀಗಳೆಯಲು ಮತ್ತು ಪ್ರತಿಮೆ-ಧ್ವಂಸ ರಾಜಕಾರಣ ಸಮರ್ಥಿಸಿಕೊಳ್ಳುವ ವಿತಂಡವಾದಕ್ಕೆ ಇದನ್ನು ಬಳಸಿಕೊಳ್ಳುತ್ತಾರೆ ಅಷ್ಟೇ.

‘‘ಬಿಜೆಪಿಯ ಅನ್ಯದ್ವೇಷವನ್ನು ನಾನು ಒಪ್ಪುವುದಿಲ್ಲ’’ ಎಂದು ಗುಹಾ ಹೇಳುತ್ತಾರೆ. ಆದರೆ ಅವರ ಲೇಖನದ ತುಂಬಾ ಅನ್ಯದ್ವೇಷವೇ ತುಂಬಿದೆ. ಗುಹಾ ದ್ವೇಷಿಸುವ ‘ಅನ್ಯ’ರ ಪಟ್ಟಿಯಲ್ಲಿ ಸಂಘ ಪರಿವಾರದ ಪಟ್ಟಿಯ ಗೋಮಾಂಸ ತಿನ್ನುವ ‘ಮುಸ್ಲಿಮರು, ಕ್ರಿಶ್ಚಿಯನ್ನರು, ದಲಿತರು’ ಇಲ್ಲದಿರಬಹುದು. ಅವರ ಪಟ್ಟಿಯಲ್ಲಿರುವ ‘ಕಮ್ಯುನಿಸ್ಟರು’ ಮಾತ್ರ ಖಂಡಿತ ಇದ್ದಾರೆ. ಲೆನಿನ್ ಜರೆದ ಮೊದಲ ‘ಪ್ರಜಾಪ್ರಭುತ್ವವಾದಿ’

ಲೆನಿನ್ ಅವರ ಬರಹಗಳು, ಸಿದ್ಧಾಂತ ಮತ್ತು ಅವರ ನಾಯಕತ್ವದ ರಶ್ಯನ್ ಕ್ರಾಂತಿ ಭಗತ್ ಸಿಂಗ್ ಅವರನ್ನು ಆಳವಾಗಿ ಪ್ರಭಾವಿಸಿದ್ದವು. ಭಗತ್ ಸಿಂಗ್ ಮಾತ್ರವಲ್ಲ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದ (ಕಾಂಗ್ರೆಸ್ ಸೇರಿದಂತೆ) ಭಾರತದ ಎಲ್ಲಾ ಧಾರೆಗಳಲ್ಲಿ ಸ್ಫೂರ್ತಿ ತುಂಬಿತ್ತು. ಭಾರತ ಮಾತ್ರವಲ್ಲ ಎಲ್ಲಾ ವಸಾಹತುಶಾಹಿ ನೊಗದಲ್ಲಿ ನರಳುತ್ತಿದ್ದ ದೇಶಗಳ ವಿಮೋಚನಾ ಹೋರಾಟಗಳಿಗೂ ಸ್ಫೂರ್ತಿ ತುಂಬಿತ್ತು. ಆಳವಾಗಿ ಪ್ರಭಾವಿಸಿತ್ತು. ವಸಾಹತು ದೇಶಗಳ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕೆ ಹೋರಾಡುತ್ತಿದ್ದ ಎಲ್ಲಾ ರಾಷ್ಟ್ರೀಯವಾದಿ ಪ್ರಜಾಪ್ರಭುತ್ವವಾದಿಗಳಿಗೆ ಲೆನಿನ್ ಹೀರೋ ಆಗಿದ್ದರು. ಲೆನಿನ್ ಹಲವು ವಿಷಯಗಳಿಗಾಗಿ ಚರಿತ್ರಾರ್ಹ ವ್ಯಕ್ತಿಯಾಗಿದ್ದಾರೆ. ಬಂಡವಾಳಶಾಹಿ ವ್ಯವಸ್ಥೆ ಕಿತ್ತೊಗೆದು ಸಮಾಜವಾದಿ ವ್ಯವಸ್ಥೆ ಸ್ಥಾಪಿಸುವ ಸಮಾಜವಾದಿ ಕ್ರಾಂತಿ ಸಾಧ್ಯವೆಂದು ಸೈದ್ಧಾಂತಿಕವಾಗಿ ಮತ್ತು ಪ್ರಾಯೋಗಿಕವಾಗಿ ತೋರಿಸಿದ್ದು, ಇದನ್ನು ಸಾಧಿಸಬೇಕಾದ ಕಮ್ಯುನಿಸ್ಟ್ ಪಕ್ಷದ ಸಂಘಟನಾ ತತ್ವಗಳನ್ನು ನಿರ್ವಚಿಸಿದ್ದು.

ಬಂಡವಾಳಶಾಹಿಯ ಸಾಮ್ರಾಜ್ಯಶಾಹಿ ಘಟ್ಟದ ವಿಶ್ಲೇಷಣೆ ನಡೆಸಿ ಅಂತರ-ಸಾಮ್ರಾಜ್ಯಶಾಹಿ ವೈರುಧ್ಯಗಳು ತೀವ್ರವಾಗಿದ್ದ ಮೊದಲನೆಯ ಮಹಾಯುದ್ಧ ಮತ್ತು ನಂತರದ ಅವಧಿ, ಅಭಿವೃದ್ಧಿ ಬಂಡವಾಳಶಾಹಿ ದೇಶಗಳಲ್ಲಿ ಸಮಾಜವಾದಿ ಕ್ರಾಂತಿಗೆ, ವಸಾಹತುಗಳ ಸ್ವಾತಂತ್ರ್ಯ ಸಾಧಿಸುವ ವಿಮೋಚನಾ ಹೋರಾಟಕ್ಕೆ ಪಕ್ವ ಕಾಲವೆಂದು ತೋರಿಸಿದ್ದು. ಅದನ್ನು ಕಾರ್ಯಗತಗೊಳಿಸಲು ದೇಶದೊಳಗೆ ರೈತ-ಕಾರ್ಮಿಕ ಐಕ್ಯತೆ ಆಧರಿಸಿದ ಹಾಗೂ ಅಂತಾರಾಷ್ಟ್ರೀಯವಾಗಿ ಅಭಿವೃದ್ಧಿ ಬಂಡವಾಳಶಾಹಿ ದೇಶಗಳ ಕಾರ್ಮಿಕ ಚಳವಳಿ ಮತ್ತು ವಸಾಹತುಗಳ ರಾಷ್ಟ್ರೀಯ ವಿಮೋಚನಾ ಹೋರಾಟಗಳ ಸಖ್ಯತೆಯ ಅಗತ್ಯವನ್ನು ಸೈದ್ಧಾಂತಿಕವಾಗಿ ತೋರಿಸಿ, ಅದನ್ನು ಜಾರಿಗೊಳಿಸಲು ಪ್ರಾಯೋಗಿಕ ಕ್ರಮಗಳನ್ನು ಕೈಗೊಂಡದ್ದು. ಇವುಗಳಿಗಾಗಿ ಲೆನಿನ್ ಅನ್ನು ಜಗತ್ತಿನ ದುಡಿಯುವ ಜನ ಅನುದಿನವೂ ನೆನೆಯುತ್ತಾರೆ. ಲೆನಿನ್ ಅವರ ಸಾಮ್ರಾಜ್ಯಶಾಹಿ-ವಿರೋಧಿ ಮತ್ತು ಯುದ್ಧ-ವಿರೋಧಿ ಪಾತ್ರಕ್ಕಾಗಿ ಮೂರನೇ ಜಗತ್ತಿನ ಎಲ್ಲಾ ಪ್ರಜಾಪ್ರಭುತ್ವವಾದಿಗಳು ಮೆಚ್ಚುತ್ತಾರೆ.

ಲೆನಿನ್, ನಿನ್ನ ಹೆಸರದು ಸಿಡಿಲ್ ಸದ್ದು
ದೊರೆಗಿವಿಗೆ! ನಿನ್ನ ಸಮತಾಬೋಧೆ ಸಿಡಿಮದ್ದು
ಅಂದರೆ ಗುಹಾ ಅವರದು ದೊರೆಗಿವಿಯೇ? ದೇಶಿ-ವಿದೇಶಿ ದೊರೆಗಳ ಪರವಾದ ಧೋರಣೆಯೇ?

ನಮ್ಮ ದೇಶದ ಎಲ್ಲಾ ಪ್ರಜಾಪ್ರಭುತ್ವವಾದಿಗಳೂ, ದೇಶಪ್ರೇಮಿಗಳು (ಗುಹಾ ಅವರೂ) ಗೌರವಿಸುವ ಒಪ್ಪುವ ಇಬ್ಬರು -ನೆಹರೂ ಮತ್ತು ರವೀಂದ್ರನಾಥ್ ಟ್ಯಾಗೋರ್ ಲೆನಿನ್ ಮತ್ತು ಅವರು ಸ್ಥಾಪಿಸಿದ ಸೋವಿಯೆಟ್ ಒಕ್ಕೂಟದ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮ್ರಾಜ್ಯಶಾಹಿ ಬಗ್ಗೆ ಲೆನಿನ್ ಪುಸ್ತಕ ತಮ್ಮನ್ನು ಆಳವಾಗಿ ಕಲಕಿದ್ದರ ಬಗ್ಗೆ ನೆಹರೂ ಬರೆದಿದ್ದಾರೆ. ‘‘ಮಹಾನ್ ವ್ಯಕ್ತಿ ಲೆನಿನ್ ನಾಯಕತ್ವದಲ್ಲಿ ನಡೆದ ಅಕ್ಟೋಬರ್ ಕ್ರಾಂತಿಯ ಸಮಯದಲ್ಲೇ ನಮ್ಮ ಸ್ವಾತಂತ್ರ್ಯ ಹೋರಾಟದಲ್ಲೂ ನಾವು ಒಂದು ಹೊಸ ಘಟ್ಟ ಆರಂಭಿಸಿದೆವು. ಲೆನಿನ್ ಅವರ ಉದಾಹರಣೆ ನಮಗೆ ಭಾರೀ ಸ್ಫೂರ್ತಿ ತುಂಬಿತ್ತು’’ ಎಂದು ಇನ್ನೊಂದು ಕಡೆ ನೆಹರೂ ಬರೆಯುತ್ತಾರೆ. ನೆಹರೂ ಬರೆದ ‘ಗ್ಲಿಂಪ್ಸಸ್ ಆಫ್ ವರ್ಲ್ಡ್ ಹಿಸ್ಟರಿ’ ಯಲ್ಲಿ ಅವರು ಲೆನಿನ್ ಮತ್ತು ಸೋವಿಯೆಟ್ ಒಕ್ಕೂಟದ ಬಗ್ಗೆ ಅತೀವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 1955ರಲ್ಲಿ ಅವರ ಸೋವಿಯೆಟ್ ಭೇಟಿಯ ನಂತರವೂ ಮುಖ್ಯಮಂತ್ರಿಗಳಿಗೆ ಪತ್ರದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೋವಿಯೆಟ್ ಒಕ್ಕೂಟಕ್ಕೆ 1930ರಲ್ಲಿ ಭೇಟಿ ನೀಡಿದ ಟ್ಯಾಗೋರ್ ಶಿಕ್ಷಣ ಮತ್ತು ಯುದ್ಧ-ವಿರೋಧದ ಬಗ್ಗೆ ಸೋವಿಯೆಟ್ ನೀತಿಯನ್ನು ಬಹುವಾಗಿ ಮೆಚ್ಚಿಕೊಂಡಿದ್ದರು.

‘‘ಆತ ಮೊದಲಿಗೆ ದೇಶವನ್ನು ತನ್ನ ಪಕ್ಷಕ್ಕೆ ಶರಣಾಗಿಸಿದ; ಬಳಿಕ ಪಕ್ಷವನ್ನು ತನಗೆ ಶರಣಾಗಿಸಿದ. ಶತ್ರುಗಳು ಮತ್ತು ಪ್ರತಿಸ್ಪರ್ಧಿಗಳನ್ನು ಆತ ಕೊಂದ, ಬೌದ್ಧಿಕ ಮತ್ತು ಕಲಾತ್ಮಕ ಅಭಿವ್ಯಕ್ತಿಯ ಮೇಲೆ ನಿಬರ್ಂಧ ಹೇರಿದ ಮತ್ತು ಇನ್ನೂ ಹೆಚ್ಚು ಕ್ರೂರವಾದ ಸ್ಟಾಲಿನ್‌ನ ನಿರಂಕುಶ ಆಡಳಿತಕ್ಕೆ ದಾರಿ ಮಾಡಿಕೊಟ್ಟ.’’ ಎಂದು ಗುಹಾ ಲೆನಿನ್ ಬಗ್ಗೆ ಹೇಳುತ್ತಾರೆ. ಜಗತ್ತಿನ ಯಾವುದೇ ಪ್ರಜಾಪ್ರಭುತ್ವವಾದಿ ಬುದ್ಧಿಜೀವಿ ಲೆನಿನ್‌ನ್ನು ಇಷ್ಟು ಅಚಾರಿತ್ರಿಕವಾಗಿ ಯಾವುದೇ ವಸ್ತುನಿಷ್ಠತೆ ಇಲ್ಲದ ರೀತಿಯಲ್ಲಿ ಜರೆದದ್ದು ನನಗಂತೂ ಗೊತ್ತಿಲ್ಲ. ಸಾಮ್ರಾಜ್ಯಶಾಹಿಯ ಕಟು ಸಮರ್ಥಕರು, ಪ್ರಜಾಪ್ರಭುತ್ವ-ವಿರೋಧಿ ಬಲಪಂಥೀಯರು ಇವರುಗಳು ಮಾತ್ರ ಲೆನಿನ್ ಅನ್ನು ಈ ರೀತಿ ಜರೆಯುತ್ತಾರೆ. ಫ್ಯಾಶಿಸಂ ಸೋಲಿಸಿ ಜಗತ್ತನ್ನು ರಕ್ಷಿಸಿದ ವಿಶ್ವ ದುಡಿಯುವ ಜನತೆಯ ಹೋರಾಟದ ನಾಯಕತ್ವ ವಹಿಸಿದ ಮತ್ತು ಅಮೆರಿಕನ್ ಸಾಮ್ರಾಜ್ಯಶಾಹಿಗೆ ಸಡ್ಡು ಹೊಡೆಯುವಂತೆ ಸೋವಿಯೆಟ್ ಒಕ್ಕೂಟವನ್ನು ಬೆಳೆಸಿದ ಸ್ಟಾಲಿನ್‌ನ್ನು ಸಹ ಗುಹಾ ಅದೇ ರೀತಿಯ ಅಚಾರಿತ್ರಿಕ ವಸ್ತುನಿಷ್ಠತೆ ಇಲ್ಲದ ರೀತಿಯಲ್ಲಿ ಜರೆಯುತ್ತಾರೆ.

‘‘ಬರ್ನ್‌ಸ್ಟೈನ್‌ನಂತಹವರು ಭಾರತದ ಕಮ್ಯುನಿಸ್ಟರಿಗೆ ಹೆಚ್ಚು ಉತ್ತಮವಾದ ಆದರ್ಶ ಆಗಬೇಕಿತ್ತು. ಪಶ್ಚಿಮ ಯುರೋಪಿನ ಪ್ರಜಾಪ್ರಭುತ್ವ ದೇಶಗಳಲ್ಲಿ ಸುಧಾರಣಾಪರ ಸಮಾಜವಾದಿಗಳು ಜನರ ಅಭಿವೃದ್ಧಿಯ ಮಾದರಿಗಳನ್ನು ಕಟ್ಟಿ ನಿಲ್ಲಿಸಿದರು’’ ಎಂದು ಗುಹಾ ಹೇಳುತ್ತಾರೆ. ಎರಡು ಮಹಾಯುದ್ಧಗಳಿಗೆ ಮತ್ತು ಪಶ್ಚಿಮ ಯುರೋಪಿನ ಕಾರ್ಮಿಕ ಕ್ರಾಂತಿಗಳ ಸೋಲಿಗೆ ಕಾರಣವಾಗಿದ್ದು ‘ಬರ್ನ್‌ಸ್ಟೈನ್‌ನಂತಹವರ’ ಸಾಮ್ರಾಜ್ಯಶಾಹಿ ಜತೆ ವರ್ಗಶಾಮೀಲು ಮತ್ತು ಶರಣಾಗತಿಯ ನೀತಿ. ಅದನ್ನು ಲೆನಿನ್ ಬಲವಾಗಿ ಟೀಕಿಸಿದ್ದರು. ಪಶ್ಚಿಮ ಯುರೋಪಿನ ಪ್ರಜಾಪ್ರಭುತ್ವ ದೇಶಗಳಲ್ಲಿ ಕಾರ್ಮಿಕರ ಜನಸಾಮಾನ್ಯರ ಜೀವನ ಮಟ್ಟ ಏರಿದ್ದು, ಕಲ್ಯಾಣ-ಪ್ರಭುತ್ವ ಜಾರಿಗೆ ಬಂದಿದ್ದು ಸೋವಿಯೆಟ್ ಒಕ್ಕೂಟದ ಮತ್ತು ಪೂರ್ವ ಯುರೋಪಿನ ಸಮಾಜವಾದಿ ವ್ಯವಸ್ಥೆಯ ‘ಬೆದರಿಕೆ’ಯಿಂದ. ಸೋವಿಯೆಟ್ ಒಕ್ಕೂಟದ ಮತ್ತು ಪೂರ್ವ ಯುರೋಪಿನ ಸಮಾಜವಾದಿ ವ್ಯವಸ್ಥೆ ಕಳಚಿ ಬಿದ್ದ ಕೂಡಲೇ ಕಲ್ಯಾಣ-ಪ್ರಭುತ್ವ ಸಹ ಕಳಚಿ ಬೀಳುತ್ತಿದೆ - ಎಂಬುದು ‘ಅಚಾರಿತ್ರಿಕ’ ಗುಹಾಗೆ ಬೇಕಿಲ್ಲ. ಸಾಮ್ರಾಜ್ಯಶಾಹಿಯ ಸಮರ್ಥಕರಿಗೆ ಅದು ಅಪಥ್ಯ ಸಹ. ಗುಹಾ ಯಾಕೆ ಹೀಗಾಡುತ್ತಿದ್ದಾರೆ?

 ತಮ್ಮ ಲೇಖನದಲ್ಲಿ ಸಂಘಪರಿವಾರದ ಪ್ರತಿಮೆ-ಧ್ವಂಸದ ರಾಜಕಾರಣವನ್ನು ಸಮರ್ಥಿಸುವ, ಸಾಮ್ರಾಜ್ಯಶಾಹಿ-ಸಮರ್ಥಕರು ಹಾಗೂ ಪ್ರಜಾಪ್ರಭುತ್ವ-ವಿರೋಧಿ ಬಲಪಂಥೀಯರ ಪರಿಭಾಷೆಯಲ್ಲಿ ಲೆನಿನ್ ಮತ್ತು ಭಾರತೀಯ ಕಮ್ಯುನಿಸ್ಟ್ ಚಳವಳಿಯನ್ನು ಜರೆಯುವ, ಗುಹಾ ಅವರಿಂದ ಸಿಪಿಐ(ಎಂ)ಗೆ ಬಿಟ್ಟಿ ಉಪದೇಶ ಬೇಕಿಲ್ಲ ಎಂದು ಪಕ್ಷದ ಪರವಾಗಿ ನಾನು ಹೇಳಬಯಸುತ್ತೇನೆ. ಭಾರತದ ವಿವಿಧ ಪಕ್ಷಗಳ ಸ್ವರೂಪದ ಬಗ್ಗೆ, ಅವುಗಳ ಜತೆ ಮೈತ್ರಿಕೂಟ ಮತ್ತು ಸಮ್ಮಿಶ್ರ ಸರಕಾರದಲ್ಲಿ ಭಾಗವಹಿಸುವಿಕೆಯ ಬಗ್ಗೆ, ಭಾರತದಲ್ಲಿ ನಿಜವಾದ ಜನತಾ ಪ್ರಜಾಪ್ರಭುತ್ವ ಸ್ಥಾಪಿಸುವ ವ್ಯೆಹ-ತಂತ್ರಗಳ ಬಗ್ಗೆ, ಸಿಪಿಐ(ಎಂ) ಧೋರಣೆಗಳ ಬಗ್ಗೆ ಗುಹಾ ಅವರ ತಕರಾರುಗಳಿಗೆ ಉತ್ತರಿಸಲು ಇನ್ನೊಂದು ಲೇಖನವೇ ಬೇಕು. ಆದ್ದರಿಂದ ಅದನ್ನು ಇಲ್ಲಿ ಚರ್ಚಿಸ ಹೋಗುವುದಿಲ್ಲ.

 ಆದರೆ ನಾವೆಲ್ಲ ಅಂದುಕೊಂಡಂತೆ ಸೆಕ್ಯುಲರ್ ಪ್ರಜಾಪ್ರಭುತ್ವವಾದಿಯಾಗಿದ್ದ, ಆಧುನಿಕ ಭಾರತದ ಪ್ರಾಜ್ಞ ಇತಿಹಾಸಕಾರನಾಗಿದ್ದ ಗುಹಾ ‘ಪ್ರತಿಮೆ-ವಿಧ್ವಂಸಕ’ ರಾಜಕಾರಣವನ್ನು ವಿತಂಡವಾದ ಮಾಡಿ ಏಕೆ ಸಮರ್ಥಿಸುತ್ತಾರೆ? ಈ ಲೇಖನದಲ್ಲಿ ಗುಹಾ ಅವರು ಮಾಡಿರುವ ‘ಚಾರಿತ್ರಿಕ’ ತಪ್ಪುಗಳು ಅಜ್ಞಾನದಿಂದ ಮಾಡಿದ್ದೇ ಅಥವಾ ಪ್ರಜ್ಞಾಪೂರ್ವಕವಾಗಿ ಮಾಡಿದ ತಪ್ಪುಗಳೇ? ಲೆನಿನ್ ಮತ್ತು ಭಾರತದ ಕಮ್ಯುನಿಸ್ಟರನ್ನು ಸಾಮ್ರಾಜ್ಯಶಾಹಿಯ ಕಟು ಸಮರ್ಥಕರು, ಪ್ರಜಾಪ್ರಭುತ್ವ-ವಿರೋಧಿ ಬಲಪಂಥೀಯರ ಮಾದರಿಯಲ್ಲಿ ಏಕೆ ಜರೆಯುತ್ತಾರೆ? ಈ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಲು ಭಾರತದ ಇಂದಿನ ಸ್ಥಿತಿಯನ್ನು ಸ್ಥೂಲವಾಗಿ ಅವಲೋಕಿಸಬೇಕು. ಇಂದು ಆಳುವ ವರ್ಗಗಳು ಕೋಮುವಾದಿ-ಫ್ಯಾಶಿಸ್ಟ್ ಮಾದರಿಯ ಉಗ್ರ ಬಲಪಂಥೀಯ ಶಕ್ತಿಗಳನ್ನು ಬಳಸಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೆಡವಲು ಹೊರಟಿವೆ. ಇದನ್ನು ಎದುರಿಸುವುದು ಹಿಮ್ಮೆಟ್ಟಿಸುವುದು ಎಡ ಮತ್ತು ಪ್ರಜಾಪ್ರಭುತ್ವ ಶಕ್ತಿಗಳ ವಿಶಾಲ ರಂಗದ ಸತತ ರಾಜಿಯಿಲ್ಲದ ಹೋರಾಟದಿಂದ ಮಾತ್ರ ಸಾಧ್ಯ. ಅಂತಹ ವಿಶಾಲ ರಂಗ ಕಟ್ಟುವ ಸೈದ್ಧಾಂತಿಕ ಬದ್ಧತೆ ಮತ್ತು ಸಂಘಟನಾ ಸಾಮರ್ಥ್ಯ ಇರುವುದು ಕಮ್ಯುನಿಸ್ಟರಿಗೆ ಮಾತ್ರ. ಕಮ್ಯುನಿಸ್ಟರು ಇಂತಹ ವಿಶಾಲ ರಂಗದ ನಾಯಕತ್ವವನ್ನು ಸ್ವಾಭಾವಿಕವಾಗಿ ವಹಿಸುತ್ತಾರೆ. ಇದು ಆಳುವ ವರ್ಗದಲ್ಲಿ ಮಾತ್ರವಲ್ಲ ನವ-ಉದಾರವಾದದ ಫಲಾನುಭವಿ ಕುರುಡು ಕಮ್ಯುನಿಸ್ಟ್-ವಿರೋಧಿ ‘ನಡುಪಂಥೀಯ’ ‘ಉದಾರವಾದಿ’ ಬುದ್ಧಿಜೀವಿಗಳಲ್ಲೂ ನಡುಕ ಹುಟ್ಟಿಸಿದೆ. ಇತಿಹಾಸ ಬಲ್ಲ ಗುಹಾರಂಥವರಿಗೆ ಇದು ಹೆಚ್ಚು ಬೇಗ ಅರ್ಥವಾಗುತ್ತದೆ. ಆದ್ದರಿಂದ ಎಡಪಂಥೀಯರು ಕಮ್ಯುನಿಸ್ಟರು ಅದರಲ್ಲೂ ಅದರ ದೊಡ್ಡ ವಿಭಾಗವಾದ ಸಿಪಿಐ(ಎಂ) ಮೇಲೆ ಮಾಡಲಾಗುತ್ತಿರುವ ಎಲ್ಲಾ ರೀತಿಯ ದಾಳಿಗಳಲ್ಲಿ ಗುಹಾ ಸೇರಿಕೊಂಡಿದ್ದಾರೆ. ಸಿಪಿಐ(ಎಂ) ಮತ್ತು ಎಡಪಂಥೀಯರ ಬಗ್ಗೆ ಜನಸಾಮಾನ್ಯರಲ್ಲಿ ದ್ವೇಷ ಹುಟ್ಟಿಸಲು, ಬೂರ್ಜ್ವಾ ಪಕ್ಷಗಳ ಯಜಮಾನಿಕೆಯಲ್ಲಿರಲು ಸಿಪಿಐ(ಎಂ) ಮತ್ತು ಎಡಪಕ್ಷಗಳ ಸದಸ್ಯರು ನಾಯಕತ್ವಗಳ ಮೇಲೆ ಒತ್ತಡ ಹಾಕಲು ಅವರಿಗೆ ಸಿಗುವ ಸಿದ್ಧೌಷಧ, ಸಂಘಪರಿವಾರ ಕಮ್ಯುನಿಸ್ಟರ ವಿರುದ್ಧ ಬಳಸಿದ ಬಳಸುತ್ತಿರುವ ಪ್ರಚಾರ ತಂತ್ರ. ಎಲ್ಲಾ ಪ್ರಜಾಪ್ರಭುತ್ವವಾದಿಗಳಿಗೆ ಆತಂಕಕಾರಿಯಾದ ಗುಹಾ ಅವರ ಈ ಲೇಖನವನ್ನು ಇನ್ಯಾವ ರೀತಿಯಲ್ಲೂ ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ.

Writer - ಜಿ. ವಿ. ಶ್ರೀರಾಮರೆಡ್ಡಿ

contributor

Editor - ಜಿ. ವಿ. ಶ್ರೀರಾಮರೆಡ್ಡಿ

contributor

Similar News