ಚೆಂಡು ವಿರೂಪ ವಿವಾದ: ಸ್ಟೀವ್ ಸ್ಮಿತ್, ವಾರ್ನರ್‌ಗೆ ಒಂದು ವರ್ಷ ನಿಷೇಧ

Update: 2018-03-28 09:15 GMT

ಮೆಲ್ಬೋರ್ನ್, ಮಾ.28: ಕೇಪ್‌ಟೌನ್ ಟೆಸ್ಟ್‌ನಲ್ಲಿ ಚೆಂಡು ವಿರೂಪ ಗೊಳಿಸಿದ ವಿವಾದದಲ್ಲಿ ಭಾಗಿಯಾದ ಆರೋಪದಲ್ಲಿ ಆಸ್ಟ್ರೇಲಿಯದ ನಾಯಕ ಸ್ಟೀವನ್ ಸ್ಮಿತ್, ಉಪ ನಾಯಕ ಡೇವಿಡ್ ವಾರ್ನರ್‌ಗೆ ಕ್ರಿಕೆಟ್ ಆಸ್ಟ್ರೇಲಿಯ(ಸಿಎ) ಒಂದು ವರ್ಷ ನಿಷೇಧ ವಿಧಿಸಿದೆ.

ದಕ್ಷಿಣ ಆಫ್ರಿಕ ವಿರುದ್ಧ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಆರಂಭಿಕ ಆಟಗಾರ ಕ್ಯಾಮರೂನ್ ಬ್ಯಾಂಕ್ರಾಫ್ಟ್‌ಗೆ 9 ತಿಂಗಳ ಕಾಲ ನಿಷೇಧ ಹೇರಲಾಗಿದೆ.

ಸ್ಮಿತ್, ವಾರ್ನರ್ ಹಾಗೂ ಬ್ಯಾಂಕ್ರಾಫ್ಟ್‌ರನ್ನು ದಕ್ಷಿಣ ಆಫ್ರಿಕ ವಿರುದ್ಧದ ಅಂತಿಮ ಟೆಸ್ಟ್‌ನಿಂದ ಅಮಾನತುಗೊಳಿಸಲಾಗಿದೆ ಎಂದು ಮಂಗಳವಾರ ಜೋಹಾನ್ಸ್‌ಬರ್ಗ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದ ಕ್ರಿಕೆಟ್ ಆಸ್ಟ್ರೇಲಿಯದ ಸಿಇಒ ಜೇಮ್ಸ್ ಸದರ್ಲೆಂಡ್ ಶಿಕ್ಷೆಯ ಪ್ರಮಾಣವನ್ನು 24 ಗಂಟೆಯೊಳಗೆ ಘೋಷಿಸಲಾಗುವುದು ಎಂದಿದ್ದರು. ಬುಧವಾರ ಸದರ್ಲೆಂಡ್ ಹಾಗೂ ಸಿಎ ಅಧಿಕಾರಿಗಳು ಜೋಹಾನ್ಸ್‌ಬರ್ಗ್‌ನ ಟೀಮ್ ಹೊಟೇಲ್‌ನಲ್ಲಿ ಸ್ಮಿತ್, ವಾರ್ನರ್ ಹಾಗೂ ಬ್ಯಾಂಕ್ರಾಫ್ಟ್‌ರನ್ನು ಭೇಟಿಯಾಗಿ ಶಿಕ್ಷೆಯ ಪ್ರಮಾಣವನ್ನು ತಿಳಿಸಿದ್ದಾರೆ.

ಸದರ್ಲೆೆಂಡ್ ಮಂಗಳವಾರ ನೀಡಿದ ಭರವಸೆಯಂತೆ ಕ್ರಿಕೆಟ್ ಆಸ್ಟ್ರೇಲಿಯ ತಕ್ಷಣವೇ ಕ್ರಮ ಕೈಗೊಂಡಿದೆ. ಮೂವರು ಕ್ರಿಕೆಟಿಗರು ತೀರ್ಪು ಹಾಗೂ ಶಿಕ್ಷೆಯ ಅವಧಿ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು. ಸ್ವತಂತ್ರ ಆಯುಕ್ತರ ನೇತೃತ್ವದ ಸಿಎ ನೀತಿ ಸಂಹಿತೆ ವಿಚಾರಣೆ ಸಮಿತಿಯು ಆಟಗಾರರ ಮನವಿ ವಿಚಾರಣೆ ನಡೆಸಲಿದೆ.

ಸ್ಮಿತ್ ಹಾಗೂ ವಾರ್ನರ್ ಮುಂಬರುವ 11ನೇ ಆವೃತ್ತಿಯ ಐಪಿಎಲ್‌ನಲ್ಲಿ ಕ್ರಮವಾಗಿ ರಾಜಸ್ಥಾನ ಹಾಗೂ ಹೈದರಾಬಾದ್ ತಂಡದ ನಾಯಕತ್ವದಿಂದ ಉಚ್ಚಾಟಿಸಲ್ಪಟ್ಟಿದ್ದಾರೆ. ಬಿಸಿಸಿಐ ಈ ಇಬ್ಬರು ಆಟಗಾರರನ್ನು ಈ ವರ್ಷದ ಐಪಿಎಲ್‌ನಿಂದ ಉಚ್ಚಾಟಿಸುವ ಸಾಧ್ಯತೆಯಿದೆ.

2003ರಲ್ಲಿ ನಿಷೇಧಿತ ಮದ್ದು ಸೇವಿಸಿದ ಆರೋಪದಲ್ಲಿ ಶೇನ್ ವಾರ್ನ್‌ಗೆ ಒಂದು ವರ್ಷ ನಿಷೇಧ ಹೇರಿದ ಬಳಿಕ ಇದೀಗ ಎರಡನೇ ಬಾರಿ ಆಸ್ಟ್ರೇಲಿಯ ಕ್ರಿಕೆಟಿಗರ ಮೇಲೆ ಕಠಿಣ ಕ್ರಮಕೈಗೊಳ್ಳಲಾಗಿದೆ.

ಕ್ರಿಕೆಟ್ ದಿಗ್ಗಜರು ಹಾಗೂ ಆಸ್ಟ್ರೇಲಿಯ ಮಾಧ್ಯಮಗಳ ತೀವ್ರ ಒತ್ತಡಕ್ಕೆ ಮಣಿದ ಕ್ರಿಕೆಟ್ ಆಸ್ಟ್ರೇಲಿಯ ಈ ಕ್ರಮ ಕೈಗೊಂಡಿದೆ. ದಕ್ಷಿಣ ಆಫ್ರಿಕ ವಿರುದ್ಧ ಮೂರನೇ ಟೆಸ್ಟ್‌ನಲ್ಲಿ ಚೆಂಡು ವಿರೂಪ ವಿವಾದದ ಹಿಂದೆ ಆಸ್ಟ್ರೇಲಿಯ ನಾಯಕರ ಗುಂಪು ಕೆಲಸ ಮಾಡಿದೆ ಎಂದು ಶನಿವಾರ ಘಟನೆಯ ಬೆನ್ನಿಗೇ ಸ್ಮಿತ್ ಒಪ್ಪಿಕೊಂಡಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ ನಾಯಕ ತಂಡದ ಅಕ್ರಮ ಚಟುವಟಿಕೆಯನ್ನು ಒಪ್ಪಿಕೊಂಡಿರುವುದು ಇದೇ ಮೊದಲು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News