ಪರೀಕ್ಷೆ ಮುನ್ನವೇ ಫ್ಯಾಕ್ಸ್ ಮೂಲಕ ದೂರು, ವ್ಯಾಟ್ಸ್ ಆ್ಯಫ್‌ನಲ್ಲಿ ಹರಿದಾಡಿದ ಸುಳಿವು
ಹೊಸದಿಲ್ಲಿ, ಮಾ. 29: ಹನ್ನೆರೆಡನೆ ತರಗತಿಯ ಅರ್ಥಶಾಸ್ತ್ರದ ಕೈ ಬರಹದ ಉತ್ತರ ಪತ್ರಿಕೆಯ ನಾಲ್ಕು ಹಾಳೆ ಒಳಗೊಂಡ ವಿಳಾಸವಿಲ್ಲದ ಲಕೋಟೆ ಯೊಂದನ್ನು ಮಾರ್ಚ್ 26ರಂದು ಪ್ರೌಢ ಶಿಕ್ಷಣಕ್ಕಿರುವ ಕೇಂದ್ರ ಮಂಡಳಿ (ಸಿಬಿಎಸ್‌ಇ) ಕಚೇರಿ ಸ್ವೀಕರಿಸಿದೆ.
12ನೆ ತರಗತಿಯ ಅರ್ಥಶಾಸ್ತ್ರ ಪ್ರಶ್ನೆ ಪತ್ರಿಕೆ ಹಾಗೂ 10ನೇ ತರಗತಿಯ ಗಣಿತ ಪತ್ರಿಕೆ ಸೋರಿಕೆ ಕುರಿತಂತೆ ಎರಡು ಪತ್ಯೇಕ ಪ್ರಕರಣಗಳು ದಾಖಲಾದ ಬಳಿಕ ದಿಲ್ಲಿ ಪೊಲೀಸ್‌ನ ಕ್ರೈಮ್ ಬ್ರಾಂಚ್ ತನಿಖೆ ಆರಂಭಿಸಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯ ವರದಿ ಹಿನ್ನೆಲೆಯಲ್ಲಿ ಸಿಬಿಎಸ್‌ಇ ಎರಡು ಪರೀಕ್ಷೆಗಳನ್ನು ಮರು ಆಯೋಜಿಸಲಾಗುವುದು ಎಂದು ಬುಧವಾರ ಹೇಳಿದೆ. ರಾಜಿಂದರ್ ನಗರದಲ್ಲಿ ತರಬೇತಿ ಸಂಸ್ಥೆ ನಡೆಸುತ್ತಿರುವ ವ್ಯಕ್ತಿಯೋರ್ವ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದಲ್ಲಿ ಭಾಗಿಯಾಗಿದ್ದಾನೆ ಎಂದು ‘ಅನಾಮಿಕ ಮೂಲ’ ವೊಂದು ಮಾರ್ಚ್ 23ರಂದು ಫ್ಯಾಕ್ಸ್ ಮೂಲಕ ನೀಡಿದ ದೂರನ್ನು ತಾನು ಸ್ವೀಕರಿಸಿದ್ದೇನೆ ಎಂದು ಮಂಡಳಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ಭಾಗಿಯಾಗಿರುವ ರಾಜೀಂದರ್ ನಗರದ ಎರಡು ಶಾಲೆಗಳನ್ನು ಕೂಡ ದೂರಿನಲ್ಲಿ ಹೆಸರಿಸಲಾಗಿದೆ. ಮಾರ್ಚ್ 26ರಂದು ಸಂಜೆ ರೌಸ್ ಅವೆನ್ಯೂನಲ್ಲಿರುವ ಸಿಬಿಎಸ್‌ಇ ಶೈಕ್ಷಣಿಕ ಘಟಕ ವಿಳಾಸ ರಹಿತ ಲಕೋಟೆಯೊಂದನ್ನು ಸಂಜೆ ಸ್ವೀಕರಿಸಿತ್ತು. ಇದರಲ್ಲಿ ಅರ್ಥಶಾಸ್ತ್ರ ಪರೀಕ್ಷೆಯ ಉತ್ತರಪತ್ರಿಕೆಯ ನಾಲ್ಕು ಹಾಳೆಗಳು ಇದ್ದವು. ಹಾಗೂ ಪ್ರಶ್ನೆ ಪತ್ರಿಕೆ ವ್ಯಾಟ್ಸ್ ಆ್ಯಪ್‌ನಲ್ಲಿ ಹರಿದಾಡಿದ ಸುಳಿವು ನೀಡಲಾಗಿತ್ತು. ಅರ್ಥಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಸಾಮಾಜಿಕ ಮಾಧ್ಯಮದ ಪ್ರತಿಪಾದನೆ 12ನೇ ತರಗತಿ ವಿದ್ಯಾರ್ಥಿಗಳನ್ನು ಆತಂಕದಲ್ಲಿ ಮುಳುಗಿಸಿತ್ತು. ಅದಾಗ್ಯೂ, ಸಿಬಿಐಸ್‌ಇ ಇದನ್ನು ನಿರಾಕರಿಸಿತ್ತು.