ಭ್ರಷ್ಟ ಅಧಿಕಾರಿಗಳಿಗೆ ಪಾಸ್‌ಪೋರ್ಟ್ ನೀಡುವುದಿಲ್ಲ: ಸರಕಾರ

Update: 2018-03-29 17:06 GMT

ಹೊಸದಿಲ್ಲಿ, ಮಾ.29: ಪಾಸ್‌ಪೋರ್ಟ್ ಪಡೆಯಲು ಅಗತ್ಯವಿರುವ ‘ವಿಜಿಲೆನ್ಸ್ ಕ್ಲಿಯರೆನ್ಸ್’ ಪ್ರಮಾಣಪತ್ರವನ್ನು ಕ್ರಿಮಿನಲ್ ಅಥವಾ ಭ್ರಷ್ಟಾಚಾರದ ಪ್ರಕರಣ ಎದುರಿಸುತ್ತಿರುವ ಸರಕಾರಿ ಅಧಿಕಾರಿಗಳಿಗೆ ನಿರಾಕರಿಸಲಾಗುವುದು ಎಂದು ಸಿಬ್ಬಂದಿ ಸಚಿವಾಲಯ ಅಂತಿಮಗೊಳಿಸಿದ ನೂತನ ಮಾರ್ಗದರ್ಶಿ ಸೂತ್ರದಲ್ಲಿ ತಿಳಿಸಲಾಗಿದೆ.

ಆದರೆ ವೈದ್ಯಕೀಯ ಚಿಕಿತ್ಸೆಯಂತಹ ತುರ್ತು ಸಂದರ್ಭಗಳಲ್ಲಿ ಅಧಿಕಾರಿ ವಿದೇಶಕ್ಕೆ ಹೋಗುವ ಅನಿವಾರ್ಯತೆ ಎದುರಾದಾಗ ಸಂಬಂಧಿತ ಪ್ರಾಧಿಕಾರ ನಿರ್ಧಾರ ಕೈಗೊಳ್ಳಬಹುದು ಎಂದು ಮಾರ್ಗದರ್ಶಿ ಸೂತ್ರ ತಿಳಿಸಿದೆ.

   ಭ್ರಷ್ಟಾಚಾರ ಆರೋಪದಲ್ಲಿ ಅಧಿಕಾರಿಯ ಕಚೇರಿ, ನಿವಾಸದ ಮೇಲೆ ದಾಳಿ ನಡೆಸಿದ ಬಳಿಕ ಈತನ ವಿರುದ್ಧದ ತನಿಖೆ ಬಾಕಿಯಾಗಿದ್ದರೆ, ಎಫ್‌ಐಆರ್ ದಾಖಲಾಗಿದ್ದರೆ, ಯಾವುದೇ ಸರಕಾರಿ ಸಂಸ್ಥೆಗಳಲ್ಲಿ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಾಗಿದ್ದರೆ ವಿಜಿಲೆನ್ಸ್ ಕ್ಲಿಯರೆನ್ಸ್ ಪತ್ರವನ್ನು ತಡೆಹಿಡಿಯಬಹುದಾಗಿದೆ. ಅಲ್ಲದೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಸಂಬಂಧಿತ ಪ್ರಾಧಿಕಾರ ಅನುಮತಿ ನೀಡಿದ್ದರೆ, ಅಲ್ಲದೆ ಕ್ರಿಮಿನಲ್ ಪ್ರಕರಣದಲ್ಲಿ ಆರೋಪಪಟ್ಟಿ ದಾಖಲಾಗಿದ್ದರೆ, ಅಧಿಕಾರಿಯ ವಿರುದ್ಧ ಶಿಸ್ತುಕ್ರಮ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಆರೋಪಪಟ್ಟಿ ದಾಖಲಾಗಿದ್ದರೆ ವಿಜಿಲೆನ್ಸ್ ಕ್ಲಿಯರೆನ್ಸ್ ತಡೆಹಿಡಿಯಬಹುದಾಗಿದೆ. ಆದರೆ ಖಾಸಗಿ ದೂರಿನಡಿ ಎಫ್‌ಐಆರ್ ದಾಖಲಿಸಲಾಗಿದ್ದರೆ ಅಂತಹ ಅಧಿಕಾರಿಗೆ ವಿಜಿಲೆನ್ಸ್ ಕ್ಲಿಯರೆನ್ಸ್ ನಿರಾಕರಿಸುವಂತಿಲ್ಲ. ಆದರೆ ಎಫ್‌ಐಆರ್‌ನ ಕುರಿತು ಮಾಹಿತಿಯನ್ನು ಪಾಸ್‌ಪೋರ್ಟ್ ಕಚೇರಿಗೆ ನೀಡಬೇಕು. ಇಂತಹ ಪ್ರಕರಣಗಳಲ್ಲಿ ಪಾಸ್‌ಪೋರ್ಟ್ ನೀಡುವ ಪ್ರಾಧಿಕಾರವು ಅಂತಿಮ ನಿರ್ಧಾರ ಕೈಗೊಳ್ಳುತ್ತದೆ ಎಂದು ತಿಳಿಸಲಾಗಿದೆ. ಭಾರತದ ಪಾಸ್‌ಪೋರ್ಟ್ ಪಡೆಯಬೇಕಿದ್ದರೆ ನಾಗರಿಕ ಸೇವಾ ಅಧಿಕಾರಿಗಳು ವಿಜಿಲೆನ್ಸ್ ಕ್ಲಿಯರೆನ್ಸ್ ಪಡೆಯುವ ಅಗತ್ಯವಿದೆ.

  ಸರಕಾರಿ ಅಧಿಕಾರಿಗಳ ಕುಟುಂಬದವರು ಅಥವಾ ಬಂಧುಗಳು ಶಿಕ್ಷಣ ಅಥವಾ ಇತರ ಉದ್ದೇಶಕ್ಕಾಗಿ ವಿದೇಶದಲ್ಲಿ ನೆಲೆಸಿದ್ದು ಅವರು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರೆ ಅಥವಾ ವಿದೇಶದಲ್ಲಿ ನಡೆಯುವ ಕುಟುಂಬದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅನುಮತಿ ಕೋರಿದಾಗ, ಸಾಮಾನ್ಯವಾಗಿ ಶಿಸ್ತುಕ್ರಮ ಎದುರಿಸುತ್ತಿರುವ ಅಧಿಕಾರಿಗೆ ಪಾಸ್‌ಪೋರ್ಟ್ ನೀಡಲಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಪ್ರಕರಣದ ಗಂಭೀರತೆಯನ್ನು ಗಮನಿಸಿ ಪ್ರಾಧಿಕಾರ ಪಾಸ್‌ಪೋರ್ಟ್ ನೀಡಬಹುದು ಎಂದು ಸರಕಾರದ ಎಲ್ಲಾ ಇಲಾಖೆಗಳಿಗೆ ಕಳುಹಿಸಿರುವ ಆದೇಶದಲ್ಲಿ ಸಚಿವಾಲಯ ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News