ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ವಜಾಕ್ಕೆ ಕಾಂಗ್ರೆಸ್ ಆಗ್ರಹ
ಹೊಸದಿಲ್ಲಿ,ಮಾ.29: ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿರುವ 10ನೇ ತರಗತಿಯ ಗಣಿತ ಮತ್ತು 12ನೇ ತರಗತಿಯ ಅರ್ಥಶಾಸ್ತ್ರ ವಿಷಯಗಳಲ್ಲಿ ಮರುಪರೀಕ್ಷೆಗಳನ್ನು ನಡೆಸುವ ಸಿಬಿಎಸ್‌ಇ ನಿರ್ಧಾರವನ್ನು ವಿರೋಧಿಸಿ ಗುರುವಾರ ಇಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆಗಳನ್ನು ನಡೆಸಿದರು. ಇದೇ ವೇಳೆ ಕಾಂಗ್ರೆಸ್ ಪಕ್ಷವು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಮತ್ತು ಸಿಬಿಎಸ್‌ಇ ಅಧ್ಯಕ್ಷೆ ಅನಿತಾ ಕರ್ವಾಲ್ ಅವರನ್ನು ಹುದ್ದೆಗಳಿಂದ ವಜಾಗೊಳಿಸುವಂತೆ ಆಗ್ರಹಿಸಿದೆ.
ಪ್ರಶ್ನೆಪತ್ರಿಕೆಗಳ ಸೋರಿಕೆಗೆ ಸಂಬಂಧಿಸಿದಂತೆ ಭಾರೀ ಪ್ರತಿಭಟನೆಗಳ ನಡುವೆಯೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ‘‘ಪ್ರತಿಯೊಂದೂ ‘ಲೀಕ್’ ಆಗುತ್ತಿದೆ, ಕಾವಲುಗಾರ ‘ವೀಕ್’ ಆಗಿದ್ದಾರೆ’’ ಎಂದು ಪ್ರಾಸಬದ್ಧವಾಗಿ ಛೇಡಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿದರು.
ಆದರೆ ಸೋರಿಕೆ ಪ್ರಕರಣದಿಂದ ವಿಚಲಿತಗೊಳ್ಳದ ಜಾವಡೇಕರ್, ತಪ್ಪಿತಸ್ಥರು ಪಾರಾಗಲು ಸಾಧ್ಯವಿಲ್ಲ ಎಂದು ಸಮಜಾಯಿಷಿ ನೀಡಿದರು. ಪ್ರಶ್ನೆಪತ್ರಿಕೆ ಸೋರಿಕೆಯನ್ನು ದುರದೃಷ್ಟಕರ ಎಂದು ಅವರು ಬಣ್ಣಿಸಿದರು.
ಸಿಬಿಎಸ್‌ಇ ಬಹುಶಃ ಸೋಮವಾರ ಅಥವಾ ಮಂಗಳವಾರ ಮರುಪರೀಕ್ಷೆಗಳ ದಿನಾಂಕಗಳನ್ನುಪ್ರಕಟಿಸಲಿದೆ ಎಂದರು.
ಗುರುವಾರ ಇಲ್ಲಿ ಸುದ್ದಿಗಾರರಿಗೆ ಸಂಪುಟ ಸಭೆಯ ವಿವರಗಳನ್ನು ನೀಡುತ್ತಿದ್ದ ಕೇಂದ್ರ ಸಚಿವ ರವಿಶಂಕರ ಪ್ರಸಾದ್ ಅವರು ರಾಹುಲ್ ಆರೋಪವನ್ನು ತಿರಸ್ಕರಿಸಿದರಲ್ಲದೆ, ಅವರು ಯುಪಿಎ ಆಡಳಿತದ ಬಗ್ಗೆ ಹೇಳುತ್ತಿದ್ದಾರೆ ಎಂದರು.
ಜಾವಡೇಕರ್ ಮತ್ತು ಕರ್ವಾಲ್ ಅವರನ್ನು ವಜಾಗೊಳಿಸಬೇಕು ಮತ್ತು ಸೋರಿಕೆಯ ಕುರಿತು ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತದೆ ಎಂದು ಪಕ್ಷದ ವಕ್ತಾರ ರಣದೀಪ್ ಸುರ್ಜೆವಾಲಾ ಅವರು ಹೇಳಿದರು.
ತನ್ಮಧ್ಯೆ ಪ್ರಶ್ನೆಪತ್ರಿಕೆಗಳ ಸೋರಿಕೆಗೆ ಸಂಬಂಧಿಸಿದಂತೆ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿರುವ ದಿಲ್ಲಿ ಪೊಲೀಸರು ರಾಜೇಂದರ್ ನಗರದ ಕೋಚಿಂಗ್ ಸೆಂಟರ್‌ವೊಂದರ ಮಾಲಿಕನನ್ನು ವಿಚಾರಣೆಗೊಳಪಡಿಸಿದ್ದಾರೆ. ಸೋರಿಕೆಯ ಹಿಂದೆ ಈತನ ಕೈವಾಡವಿರುವ ಶಂಕೆಯಿದೆ ಎಂದು ಸಿಬಿಎಸ್‌ಇ ತನ್ನ ದೂರಿನಲ್ಲಿ ತಿಳಿಸಿದೆ.
ಮರುಪರೀಕ್ಷೆಗಳನ್ನು ಪ್ರತಿಭಟಿಸಲು ಬೆಳಿಗ್ಗೆ ಜಂತರ್ ಮಂತರ್‌ನಲ್ಲಿ ಸಮಾವೇಶಗೊಂಡಿದ್ದ ಸಹಸ್ರಾರು ವಿದ್ಯಾರ್ಥಿಗಳು ನ್ಯಾಯಕ್ಕಾಗಿ ಘೋಷಣೆಗಳನ್ನು ಮೊಳಗಿಸಿ ದರು.
ಪರೀಕ್ಷೆಗಳಿಗೆ ಒಂದು ದಿನ ಮೊದಲೇ ಹೆಚ್ಚುಕಡಿಮೆ ಎಲ್ಲ ವಿಷಯಗಳ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿದ್ದವು ಎಂದು ಪ್ರತಿಪಾದಿಸಿದ ವಿದ್ಯಾರ್ಥಿಗಳು, ಮರುಪರೀಕ್ಷೆಗಳನ್ನು ನಡೆಸುವುದಾದರೆ ಎಲ್ಲ ವಿಷಯಗಳಿಗೂ ನಡೆಸಬೇಕು ಎಂದು ಆಗ್ರಹಿಸಿದರು.