ಬಾಕ್ಸ್ಆಫೀಸ್‌ನಲ್ಲಿ ಭರ್ಜರಿ ರೇಡ್

Update: 2018-03-30 11:46 GMT

ಅಜಯ್‌ದೇವಗನ್ ಅಭಿನಯದ ರೇಡ್, ಬಾಕ್ಸ್‌ಆಫೀಸ್‌ನಲ್ಲಿ ಭರ್ಜರಿಯಾಗಿ ಓಡುತ್ತಿದೆ. ಮಾಮೂಲಿ ಕಮರ್ಶಿಯಲ್ ಚಿತ್ರಗಳಿಗಿಂತ ಭಿನ್ನವಾಗಿದ್ದರೂ, ಎಲ್ಲಾ ವರ್ಗದ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುವಲ್ಲಿ ರೇಡ್ ಯಶಸ್ವಿಯಾಗಿದೆ. ಬಿಡುಗಡೆಯಾದ ಆರೇ ದಿನಗಳಲ್ಲಿ ರೇಡ್ ಒಟ್ಟಾರೆ 83.06 ಕೋಟಿ ರೂ. ಬಾಚುವಲ್ಲಿ ಯಶಸ್ವಿಯಾಗಿದೆ. ರೇಡ್‌ನ ಬಾಕ್ಸ್ ಆಫೀಸ್ ನಾಗಾಲೋಟ ನೋಡಿದಾಗ, ಚಿತ್ರವು ಇನ್ನೊಂದೇ ವಾರದಲ್ಲಿ 100 ಕೋಟಿ ರೂ. ಕ್ಲಬ್‌ಗೆ ಸೇರುವುದು ಖಚಿತವಾಗಿದೆ.

ಭಾರತದಲ್ಲಿ 71.06 ಕೋಟಿ ರೂ. ಬಾಚಿರುವ ರೇಡ್, ವಿದೇಶಗಳಲ್ಲಿಯೂ ಒಳ್ಳೆಯ ಆರಂಭ ಪಡೆದಿದ್ದು, 12 ಕೋಟಿ ರೂ. ಗಳಿಸಿದೆ.

 ಅಜಯ್ ಜೊತೆ ಇಲಿಯಾನ, ಸೌರಭ್ ಶುಕ್ಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ರೇಡ್‌ನ್ನು ರಾಜ್‌ಕುಮಾರ್ ಗುಪ್ತಾ ನಿರ್ದೇಶಿಸಿದ್ದಾರೆ. ಈ ಹಿಂದೆ ಅವರು ನೋ ಓನ್ ಕಿಲ್ಡ್ ಜೆಸ್ಸಿಕಾ ಹಾಗೂ ಘಾನಾ ಚಕ್ಕರ್‌ನಂತಹ ವಿಭಿನ್ನ ಕಥಾವಸ್ತುವಿನ ಚಿತ್ರ ನಿರ್ದೇಶಿಸಿ ಗಮನಸೆಳೆದಿದ್ದರು.

  ಅಜಯ್‌ದೇವಗನ್‌ರ ಈ ಹಿಂದಿನ ಚಿತ್ರವಾದ ಬಾದ್‌ಶಾವೊ ಬಾಕ್ಸ್‌ಆಫೀಸ್‌ನಲ್ಲಿ ಹಿನ್ನಡೆ ಕಂಡಿತ್ತು. ಇದೀಗ ರೇಡ್‌ನ ಗೆಲುವು ಅಜಯ್ ದೇವಗನ್‌ಗೆ ಇಮೇಜ್‌ನ್ನು ಹೆಚ್ಚಿಸಿದೆ. ಈ ನಡುವೆ ಶುಕ್ರವಾರ ತೆರೆಕಂಡ ರಾಣಿ ಮುಖರ್ಜಿ ಅಭಿನಯದ ಹಿಚ್ಕಿ ಕೂಡಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ರೇಡ್‌ಗೆ ಪ್ರಬಲ ಸ್ಪರ್ಧೆ ನೀಡುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News