20 ವರ್ಷಗಳ ಬಳಿಕ ತೆಲುಗಿಗೆ ಮಮ್ಮುಟ್ಟಿ

Update: 2018-03-30 12:09 GMT

ಆಂಧ್ರಪ್ರದೇಶದ ಜನಪ್ರಿಯ ಮುಖ್ಯಮಂತ್ರಿಯಾಗಿದ್ದ ದಿವಂಗತ ವೈ.ವಿ. ರಾಜಶೇಖರ ರೆಡ್ಡಿಯವರ ಜೀವನಕಥೆಯನ್ನು ಆಧರಿಸಿದ ಚಿತ್ರವೊಂದು ತೆಲುಗಿನಲ್ಲಿ ನಿರ್ಮಾಣವಾಗುತ್ತಿದೆ. ‘ಯಾತ್ರಾ’ ಎಂದು ಹೆಸರಿಡಲಾದ ಈ ಚಿತ್ರದ ಮಲಯಾಂನ ಮೆಗಾಸ್ಟಾರ್ ಮಮ್ಮುಟ್ಟ್ಟಿ ಅವರು ರಾಜಶೇಖರ್ ರೆಡ್ಡಿಯವರ ಪಾತ್ರದಲ್ಲಿ ನಟಿಸಲಿದ್ದಾರೆ. ಇದರೊಂದಿಗೆ 20 ವರ್ಷಗಳ ಬಳಿಕ ಮಮ್ಮುಟ್ಟಿ , ತೆಲುಗುಚಿತ್ರರಂಗಕ್ಕೆ ಮರಳಿದಂತಾಗಿದೆ.

 1998ರಲ್ಲಿ ಬಿಡುಗಡೆಯಾದ ಕೋಡಿ ರಾಮಕೃಷ್ಣ ನಿರ್ದೇಶನದ ‘ರೈಲ್ವೆ ಕೂಲಿ ’ ಮುಮ್ಮಟ್ಟಿ ಅಭಿನಯದ ಕೊನೆಯ ತೆಲುಗು ಚಿತ್ರವಾಗಿತ್ತು.

  ಕಳೆದ ವರ್ಷ ತೆಲುಗಿನಲ್ಲಿ ಭರ್ಜರಿ ಯಶಸ್ಸು ಕಂಡ ಆನಂದೋಬ್ರಹ್ಮ ಎಂಬ ಕಾಮಿಡಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವ ಮಹಿ. ವಿ. ರಾಘವನ್ ‘ಯಾತ್ರಾ’ವನ್ನು ನಿರ್ದೇಶಿಸುತ್ತಿದ್ದಾರೆ. ಮಮ್ಮುಟ್ಟಿಯವರಂತಹ ಮಹಾನ್ ನಟ, ತನ್ನ ಚಿತ್ರದಲ್ಲಿ ನಟಿಸುತ್ತಿರುವುದು ತನಗೆ ಹೆಮ್ಮೆ ಎನಿಸುತ್ತಿದೆಯೆಂದು ಮಹಿ ಈಗಾಗಲೇ ಟ್ವೀಟ್ ಮಾಡಿದ್ದಾರೆ. ಹೀಗಾಗಿ ಮಮ್ಮುಟ್ಟಿ ಯಾತ್ರೆಯಲ್ಲಿ ನಟಿಸಲಿರುವುದು ಕನ್‌ಫರ್ಮ್ ಆದಂತಾಗಿದೆ. ತಮಿಳು ಸಿನೆಮಾ ‘ಮಕ್ಕಳ್ ಅಡ್ಚಿ’ಯ ಬಳಿಕ ಮಮ್ಮುಟ್ಟಿ ಮುಖ್ಯಮಂತ್ರಿಯ ಪಾತ್ರದಲ್ಲಿ ನಟಿಸುತ್ತಿರುವುದು ಇದೇ ಮೊದಲು. ತೆಲುಗು ಭಾಷೆಯ ಚಿತ್ರವಾದರೂ, ಮಮ್ಮುಟ್ಟಿ ತನ್ನದೇ ಧ್ವನಿಯಲ್ಲಿ ಡಬ್ಬಿಂಗ್ ಮಾಡಲಿದ್ದಾರೆ.

ವೈಎಸ್‌ಆರ್ ಎಂದೇ ಜನಪ್ರಿಯರಾಗಿದ್ದ ರಾಜಶೇಖರ ರೆಡ್ಡಿ, 2003ರಲ್ಲಿ ಬಿರುಬಿಸಿಲಿನ ನಡೆಯೂ ಮೂರು ತಿಂಗಳುಗಳ ಕಾಲ ಆಂಧ್ರದಾದ್ಯಂತ ನಡೆಸಿದ ಪಾದಯಾತ್ರೆಯ ಘಟನಾವಳಿಗಳನ್ನು ಆಧರಿಸಿಯೇ ಈ ಚಿತ್ರ ತಯಾರಾಗಲಿದೆಯಂತೆ. ಆಂಧ್ರದ ಜನಪ್ರಿಯ ಮುಖ್ಯಮಂತ್ರಿಯಾಗಿದ್ದ ರಾಜಶೇಖರ ರೆಡ್ಡಿ 2009ರಲ್ಲಿ ಹೆಲಿಕಾಪ್ಟರ್ ಅವಘಡದಲ್ಲಿ ಮೃತಪಟ್ಟಿದ್ದರು.

 ಯಾತ್ರಾ ಚಿತ್ರವು ತೆಲುಗಿನ ಜೊತೆ ತಮಿಳಿನಲ್ಲೂ ಏಕಕಾಲದಲ್ಲಿ ನಿರ್ಮಾಣಗೊಳ್ಳಲಿದೆ . ಚಿತ್ರದ ನಾಯಕಿ ಯಾಗಿ ನಯನ್‌ತಾರಾ ಆಯ್ಕೆಯಾಗಿದ್ದಾರೆಂಬ ವದಂತಿ ಗಳು ಈ ಮೊದಲು ಹರಡಿದ್ದವು. ಆದರೆ ಮಮ್ಮುಟ್ಟ್ಟಿ ಹೊರತುಪಡಿಸಿ, ಚಿತ್ರದ ಉಳಿದ ಪಾತ್ರಗಳಿಗೆ ಈ ತನಕ ಯಾವುದೇ ತಾರೆಯರನ್ನು ಆಯ್ಕೆ ಮಾಡಿಲ್ಲವೆಂದು ಮಾಹಿ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News