'ಪೋಸ್ಟ್ ಕಾರ್ಡ್ ನ್ಯೂಸ್'ನ ಟಾಪ್ 9 ಸುಳ್ಳು ಸುದ್ದಿಗಳು

Update: 2018-03-30 14:53 GMT

ಸದಾ ಸುಳ್ಳು ಸುದ್ದಿಗಳನ್ನೇ ಹರಡುವ ಕುಖ್ಯಾತಿವೆತ್ತ 'ಪೋಸ್ಟ್ ಕಾರ್ಡ್ ನ್ಯೂಸ್'ನ ಸ್ಥಾಪಕ ಮಹೇಶ್ ವಿಕ್ರಮ್ ಹೆಗ್ಡೆ ಈಗಾಗಲೇ ಸುಳ್ಳು ಸುದ್ದಿ ಹರಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದಾನೆ. ಈತನ ವೆಬ್ ಸೈಟ್ ಆದ ಪೋಸ್ಟ್ ಕಾರ್ಡ್ ನ್ಯೂಸ್ ಹಲವು ಬಾರಿ ಸುಳ್ಳು ಸುದ್ದಿಗಳನ್ನು ಪ್ರಕಟಿಸಿ ಸಿಕ್ಕಿಬಿದ್ದಿದೆ. ಪೋಸ್ಟ್ ಕಾರ್ಡ್ ನ್ಯೂಸ್ ನ ಇಂತಹ ಕೆಲವು 'ಫೇಕ್ ನ್ಯೂಸ್'ಗಳ ಪಟ್ಟಿ ಈ ಕೆಳಗಿದೆ.

1. 2017ರ ಏಪ್ರಿಲ್ 8: "ವಾಚ್!! ಬಿರ್‍ಭೂಮ್ ಪಾಕಿಸ್ತಾನದ ಭಾಗವೇ ಅಥವಾ ಬಾಂಗ್ಲಾದೇಶದ್ದೇ" ಎಂಬ ಶೀರ್ಷಿಕೆಯ ಲೇಖನ ಪೋಸ್ಟ್ ಕಾರ್ಡ್ ನಲ್ಲಿ ಬರೆಯಿತು. ಈ ಲೇಖನದ ಮೊದಲ ವಾಕ್ಯವೆಂದರೆ, "ಜಿಹಾದಿ ದೀದಿಯ ಪಶ್ಚಿಮ ಬಂಗಾಳ ಎಲ್ಲ ಇಸ್ಲಾಮಿಕ್ ಧರ್ಮಾಂಧರಿಗೆ ಸ್ವರ್ಗ" ಎಂದಾಗಿತ್ತು. ಇಬ್ಬರು ಮುಸ್ಲಿಂ ಐಪಿಎಸ್ ಅಧಿಕಾರಿಗಳು 2017ರ ಏಪ್ರಿಲ್ 11ರ ಹನುಮಾನ್ ಜಯಂತಿಯಂದು ಹನುಮ ಭಕ್ತರಿಗೆ ಹೊಡೆದಿದ್ದಾರೆ ಎಂದು ಈ ವರದಿಯಲ್ಲಿ ಆರೋಪಿಸಲಾಗಿತ್ತು. ಈ ಪ್ರತಿಪಾದನೆಗೆ ಪೂರಕವಾಗಿ, ಪೊಲೀಸ್ ಅಧಿಕಾರಿ ಒಬ್ಬ ವ್ಯಕ್ತಿಗೆ ಹೊಡೆಯುವ ವಿಡಿಯೋ ಕೂಡ ಹಾಕಲಾಗಿತ್ತು. ಆದರೆ altnews.in ಈ ಬಗ್ಗೆ ತನಿಖೆ ನಡೆಸಿ, ಇದು ಸಂಪೂರ್ಣ ಸುಳ್ಳು ಎಂದು ಸಾಬೀತುಪಡಿಸಿತು. ಪೋಸ್ಟ್ ಕಾರ್ಡ್ ನ್ಯೂಸ್ ಹಾಕಿದ್ದ ವಿಡಿಯೋ 2014ರಿಂದಲೇ ಯೂಟ್ಯೂಬ್‍ನಲ್ಲಿ ಲಭ್ಯವಿದ್ದು, ಇವರು ಈ ಸುದ್ದಿಯನ್ನು ಪ್ರಕಟಿಸಿದ್ದು 2017ರಲ್ಲಿ!.
2. 2017ರ ಮೇ 17: "ಮಮತಾ ಬ್ಯಾನರ್ಜಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಆಯೋಜಿಸುತ್ತಿದ್ದಾರೆ" ಎಂಬ ಶೀರ್ಷಿಕೆಯ ಒಂದು ಲೇಖನವನ್ನು ಪೋಸ್ಟ್ ಕಾರ್ಡ್ ಪ್ರಕಟಿಸಿತು. ಮುಖ್ಯವಾಹಿನಿಯ ವೆಬ್‍ಸೈಟ್‍ಗಳಲ್ಲಿ ಈ ಸುದ್ದಿ ಎಷ್ಟೋ ಹುಡುಕಿದರೂ ಸಿಕ್ಕಿರಲಿಲ್ಲ. ಇದಕ್ಕೆ ದೂರದ ಸಂಬಂಧ ಹೊಂದಿರುವ ಯಾವ ವಿಷಯವೂ 2017ರಲ್ಲಿ ಪ್ರಕಟವಾಗಿರಲಿಲ್ಲ. ಅಂತಿಮವಾಗಿ 2014ರ ಏಪ್ರಿಲ್ 15ರಂದು ಇಕನಾಮಿಕ್ ಟೈಮ್ಸ್ ನಲ್ಲಿ ಸುದ್ದಿಯೊಂದು ಪ್ರಕಟವಾಗಿತ್ತು. ಮೂರು ವರ್ಷಗಳ ಹಿಂದಿನ ಸುದ್ದಿಯನ್ನು ಮತ್ತೆ ಹೊಸ ಸುದ್ದಿ ಎಂದು ಈ ವೆಬ್ ಸೈಟ್ ಪ್ರಕಟಿಸಿತ್ತು. ಸುಪ್ರೀಂಕೋರ್ಟ್ ನಿರ್ದೇಶನದ ಅನ್ವಯ ಮಮತಾ ಹಾಗೆ ಮಾಡುತ್ತಿದ್ದಾರೆ ಎಂದು ಲೇಖನದಲ್ಲಿ ಸ್ಪಷ್ಟವಾಗಿತ್ತು. ಆದರೆ ಈ ಅಂಶವನ್ನು ಪೋಸ್ಟ್ ಕಾರ್ಡ್ ಪ್ರಕಟಿಸಿರಲಿಲ್ಲ. ಇಕನಾಮಿಕ್ ಟೈಮ್ಸ್ ಲೇಖನದಲ್ಲಿ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕ ಕೂಡಾ ಇಂಥ ವ್ಯವಸ್ಥೆ ಹೊಂದಿವೆ ಎಂದು ನಮೂದಿಸಲಾಗಿತ್ತು. ವಿಚಿತ್ರವೆಂದರೆ, ಕೊನೆಯ ವಾಕ್ಯದಲ್ಲಿ ಪೋಸ್ಟ್ ಕಾರ್ಡ್"ಮಮತಾ ಅವರ ಓಲೈಕೆ ರಾಜಕಾರಣಕ್ಕೆ ತಡೆ ಹಾಕಲು ನ್ಯಾಯಾಲಯ ಮಧ್ಯಪ್ರವೇಶಿಸಬೇಕು" ಎಂದು ಸೇರಿಸಿತ್ತು. ಆದರೆ ವಾಸ್ತವವಾಗಿ ಇದು ಸುಪ್ರೀಂಕೋರ್ಟ್ ನಿರ್ದೇಶನವಾಗಿತ್ತು.

3. 2017ರ ಜನವರಿ 20: "ಓದಲೇಬೇಕು! ವಿಶ್ವ ಆರ್ಥಿಕ ವೇದಿಕೆ ಭಾರತೀಯ ಮಾಧ್ಯಮದ ಬಗೆಗಿನ ಸಮೀಕ್ಷೆ ಬಿಡುಗಡೆ ಮಾಡಿದೆ. ಇದರ ಫಲಿತಾಂಶ ನಾಚಿಕೆಗೇಡು!" ಎಂಬ ಹೆಸರಿನ ಲೇಖನವನ್ನು ಪೋಸ್ಟ್ ಕಾರ್ಡ್ ಪ್ರಕಟಿಸಿತು. ಪೋಸ್ಟ್ ಕಾರ್ಡ್ ಲೇಖನದಲ್ಲಿ ಹೇಳಿದಂತೆ, "ಈ ವರದಿಯನ್ನು ಬಿಡುಗಡೆ ಮಾಡಿದ ವಿಶ್ವ ಆರ್ಥಿಕ ವೇದಿಕೆ, ಭಾರತೀಯ ಮಾಧ್ಯಮಗಳನ್ನು ವಿಶ್ವದಲ್ಲೇ ಎರಡನೇ ಅತ್ಯಂತ ವಿಶ್ವಾಸಾರ್ಹವಲ್ಲದ ಸಂಸ್ಥೆ". ಈ ವರದಿಯನ್ನು ಎನ್‍ಡಿಟಿವಿ, ಕನ್ಹಯ್ಯಾಕುಮಾರ್ ಮತ್ತು ಬುರ್ಹಾನ್ ವಾನಿಗೆ ಸಂಬಂಧ ಕಲ್ಪಿಸಿತ್ತು. ಬೂಮ್‍ಲೈವ್.ಇನ್ ಈ ವಿಷಯದ ಬಗ್ಗೆ ತನಿಖೆ ನಡೆಸಿದಾಗ ಕಂಡುಬಂದ ಅಂಶವೆಂದರೆ, "ಮಾಧ್ಯಮದ ವಿಶ್ವಾಸ ಉಳಿಸಿಕೊಂಡಿರುವ ಮೂರು ದೇಶಗಳಲ್ಲಿ ಭಾರತ ಮೊದಲನೆ ಸ್ಥಾನದಲ್ಲಿದೆ ಎನ್ನುವುದು. ಇತರ ಎರಡು ದೇಶಗಳೆಂದರೆ ಚೀನಾ ಹಾಗೂ ಇಂಡೋನೇಷ್ಯಾ. ಎಲ್ಲಕ್ಕಿಂತ ಹೆಚ್ಚಾಗಿ 2016ರಲ್ಲಿ ಇದ್ದ ಭಾರತೀಯ ಮಾಧ್ಯಮಗಳ ವಿಶ್ವಾಸ 2017ರಲ್ಲಿ ಶೇಕಡ 3ರಷ್ಟು ಏರಿಕೆ ಕಂಡು ಶೇಕಡ 66ರಷ್ಟಾಗಿತ್ತು.
4. ಮಾರ್ಚ್ 20, 2017: "ಬಿಬಿಸಿ ನ್ಯೂಸ್ ಪಾಯಿಂಟ್ 2017ರಲ್ಲಿ ವಿಶ್ವದ 10 ಕಡುಭ್ರಷ್ಟ ರಾಜಕೀಯ ಪಕ್ಷಗಳ
ಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತದ ಯಾವ ಪಕ್ಷಗಳು ಕಡುಭ್ರಷ್ಟ ಎನಿಸಿವೆ ಎನ್ನುವುದನ್ನು ಪರಿಶೀಲಿಸಿ" ಎಂಬ ಶೀರ್ಷಿಕೆಯ ಲೇಖನ ಪೋಸ್ಟ್ ಕಾರ್ಡ್‍ನಲ್ಲಿ ಪ್ರಕಟವಾಗಿತ್ತು. ಈ ಲೇಖನ ಪ್ರತಿಪಾದಿಸಿದಂತೆ, ಭಾರತದ ರಾಷ್ಟ್ರೀಯ ಕಾಂಗ್ರೆಸ್ ಇಡೀ ವಿಶ್ವದಲ್ಲೇ ನಾಲ್ಕನೇ ಕಡುಭ್ರಷ್ಟ ಪಕ್ಷ. ಆದರೆ ಬಿಬಿಸಿಯಲ್ಲಿ ಕಾರ್ಯ ನಿರ್ವಹಿಸುವ ಗೀತಾ ಪಾಂಡೆ ಈ ಬಗ್ಗೆ ಟ್ವೀಟ್ ಮಾಡಿದ್ದು, ಪೋಸ್ಟ್ ಕಾರ್ಡ್ ಹೇಳಿದಂತೆ ಬಿಬಿಸಿ ಇಂಥ ಯಾವ ಸಮೀಕ್ಷೆಯನ್ನೂ ನಡೆಸಿಲ್ಲ ಎಂದರು. ಡಿಎನ್‍ಎ ಕೂಡಾ ಬಿಬಿಸಿ ನ್ಯೂಸ್‍ಪಾಯಿಂಟ್ ನಕಲಿ ಎಂದು ಬರೆಯಿತು.

5. ಆಗಸ್ಟ್ 19, 2016: "ಬರ್ಖಾದತ್‍ಗೆ ಲಿಫ್ಟ್ ನೀಡಿದ ದಯಾಳು ಯುವಕ ಹಿಝ್ಬುಲ್ ಮುಜಾಹಿದೀನ್ ಉಗ್ರ ಝಾಕಿರ್ ರಶೀದ್ ಆಗಿದ್ದನೇ?" ಎಂಬ ಶೀರ್ಷಿಕೆಯ ಲೇಖನ ಪೋಸ್ಟ್ ಕಾರ್ಡ್ ಪ್ರಕಟಿಸಿತು. ಆದರೆ ವಾಸ್ತವವಾಗಿ ಬರ್ಖಾದತ್ ಯುವಕನೊಬ್ಬನ ಜತೆಗೆ ಸ್ಕೂಟರ್ ಸವಾರಿ ಮಾಡುತ್ತಿರುವ ಒಂದು ಚಿತ್ರ ಹಾಗೂ ಹೊಸದಾಗಿ ನೇಮಕಗೊಂಡ ಹಿಝ್‍ಬುಲ್ ಮುಖ್ಯಸ್ಥ ಝಾಕೀರ್ ಮೂಸಾ ಇದ್ದ ಇನ್ನೊಂದು ಚಿತ್ರವನ್ನು ಜೋಡಿಸಲಾಗಿತ್ತು. altnews.in ಇದನ್ನು ತನಿಖೆ ನಡೆಸಿ, ಪೋಸ್ಟ್ ಕಾರ್ಡ್ ಸುದ್ದಿ ಶುದ್ಧ ಸುಳ್ಳು ಎಂದು ಸಾಬೀತುಪಡಿಸಿತು.

6. ಎಪ್ರಿಲ್ 13, 2017: "ಶುಭ ಸುದ್ದಿ! ಯೋಗಿ ಈ ವಲಯದಲ್ಲಿ ಮೀಸಲಾತಿ ನಿಲ್ಲಿಸಲು ನಿರ್ಧರಿಸಿದ್ದಾರೆ" ಎಂಬ ಶೀರ್ಷಿಕೆಯ ಲೇಖನವನ್ನು ಪೋಸ್ಟ್ ಕಾರ್ಡ್ ಪ್ರಕಟಿಸಿತು. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಮೀಸಲಾತಿ ಸ್ಥಗಿತಗೊಳಿಸಲು ಯೋಗಿ ನಿರ್ಧರಿಸಿದ್ದಾರೆ ಎಂದು ಲೇಖನ ಪ್ರಕಟಿಸಿತ್ತು. ಇದು ಶಿಥಿಲವಾಗುತ್ತಿರುವ ಉತ್ತರಪ್ರದೇಶದಲ್ಲಿ ಕೈಗೊಂಡ ಐತಿಹಾಸಿಕ ಹೆಜ್ಜೆ ಎಂದು ಬಣ್ಣಿಸಲಾಗಿತ್ತು. ಅಂಥ ಯಾವ ಮೀಸಲಾತಿ ಕೂಡಾ ಇರಲೇ ಇಲ್ಲ ಎನ್ನುವುದನ್ನು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಲೇಖನ ಸ್ಪಷ್ಟಪಡಿಸಿತ್ತು. ಅಲ್ಲಿಗೆ ಪೋಸ್ಟ್ ಕಾರ್ಡ್ ನ್ಯೂಸ್ ನ ಅಸಲಿ ಬಣ್ಣ ಬಯಲಾಗಿತ್ತು.
7. ಫೆಬ್ರವರಿ 2, 2017: "ಎಕ್ಸ್ ಕ್ಲೂಸಿವ್ & ಶಾಕಿಂಗ್! ಹಣ, ವಿದೇಶಿ ಪ್ರವಾಸ, ಕಾಲ್‍ಗರ್ಲ್. ಆಮ್ ಆದ್ಮಿ ಪಕ್ಷ ಸಮಾಜ ಮಾಧ್ಯಮ ಆಂದೋಲನದಲ್ಲಿ ಕ್ರಾಂತಿಯನ್ನೇ ಮಾಡಿದೆ" ಎಂಬ ಹೆಸರಿನ ಶೀರ್ಷಿಕೆಯ ಲೇಖನ ಪ್ರಕಟಿಸಿತ್ತು.  ಈ ಲೇಖನದಲ್ಲಿ, ಎಎಪಿ_ಲಾಲ್ ಎಂಬ 2017ರ ಜನವರಿಯಲ್ಲಿ ಸೃಷ್ಟಿಸಿದ ಟ್ವಿಟ್ಟರ್ ಖಾತೆಯನ್ನು ಉಲ್ಲೇಖಿಸಲಾಗಿತ್ತು. ಇದೊಂದು ಅನಾಮಧೇಯ ಟ್ವಿಟ್ಟರ್ ಖಾತೆಯಾಗಿದ್ದು, ಆಮ್ ಆದ್ಮಿ ಪಕ್ಷ ಪ್ರತಿ ಟ್ವೀಟ್‍ಗೆ 50 ರೂಪಾಯಿ ಮತ್ತು ರಿಟ್ವೀಟ್‍ಗೆ 7 ರೂಪಾಯಿ ನೀಡುತ್ತಿದೆ ಎಂದು ಇದು ಹೇಳಿತ್ತು. SMHoaxslayer ಈ ಬಗ್ಗೆ ತನಿಖೆ ನಡೆಸಿತು. ಇದು ಅಪ್ಪಟ ಸುಳ್ಳು ಎಂದು ಪತ್ತೆಯಾಯಿತು. @ಎಎಪಿ_ಲಾಲ್ ಟ್ವಿಟ್ಟರ್ ಖಾತೆಯನ್ನು ವೇಗವಾಗಿ ವದಂತಿ ಹಬ್ಬಿಸುವ ಸಲುವಾಗಿಯೇ ಸೃಷ್ಟಿಸಲಾಗಿದೆ ಎನ್ನುವುದು ತಿಳಿದುಬಂತು.  ಪೋಸ್ಟ್ ಕಾರ್ಡ್‍ನ ಸುಳ್ಳು ಬಹಿರಂಗವಾಯಿತು. ಟ್ವಿಟ್ಟರ್, ಎಎಪಿ_ಲಾಲ್ ಟ್ವಿಟ್ಟರ್ ಖಾತೆಯನ್ನು ಅಮಾನತುಗೊಳಿಸಿತು.

8. ಜನವರಿ 3, 2017: "ಬಿಗ್ ಬ್ರೇಕಿಂಗ್ ! ಪಿಎಂ ಮೋದಿಯ ದೊಡ್ಡ ರಾಜತಾಂತ್ರಿಕ ಜಯ. 15 ಸಾವಿರ ಕೋಟಿ ರೂಪಾಯಿ ಮೌಲ್ಯದ ದಾವೂದ್ ಇಬ್ರಾಹಿಂ ಆಸ್ತಿ, ದುಬೈನಲ್ಲಿ ವಶ!" ಎಂಬ ಶೀರ್ಷಿಕೆಯ ಲೇಖನ ಪ್ರಕಟಿಸಿತು. ಇದು ಸತ್ಯಕ್ಕೆ ದೂರ ಎಂದು ಹಫ್ಫಿಂಗ್ಟನ್ ಪೋಸ್ಟ್ ಪತ್ತೆ ಮಾಡಿತು. 

9. ಜೈನ ಮುನಿಯ ಮೇಲೆ ಮುಸ್ಲಿಮರ ದಾಳಿ!: “ತುಂಬಾ ಬೇಸರದ ಸುದ್ದಿ, ನಿನ್ನೆ ಕರ್ನಾಟಕದಲ್ಲಿ ಜೈನ ಮುನಿಯೊಬ್ಬರ ಮೇಲೆ ಮುಸ್ಲಿಮ್ ಯುವಕರು ದಾಳಿ ನಡೆಸಿದ್ದಾರೆ…. ಸಿದ್ದರಾಮಯ್ಯ ಸರಕಾರದ ಕರ್ನಾಟಕದಲ್ಲಿ ಯಾರೊಬ್ಬರೂ ಸುರಕ್ಷಿತರಲ್ಲ” ಎನ್ನುವ ವರದಿಯನ್ನು ಪೋಸ್ಟ್ ಕಾರ್ಡ್ ನ್ಯೂಸ್ ಇತ್ತೀಚೆಗೆ ಪ್ರಕಟಿಸಿತ್ತು. ಇದನ್ನು ಹಲವರು ಶೇರ್ ಮಾಡಿದ್ದರು. ಆದರೆ altnews.in ಈ ಸುದ್ದಿಯ ಹಿಂದೆ ಬಿದ್ದಾಗ ಮುಸ್ಲಿಮ್ ಯುವಕರಿಂದ ಜೈನ ಮುನಿಯ ಮೇಲೆ ದಾಳಿ ನಡೆದಿಲ್ಲ ಎನ್ನುವುದು ಸ್ಪಷ್ಟಗೊಂಡಿದೆ. ಬೈಕ್ ಒಂದು ಢಿಕ್ಕಿ ಹೊಡೆದ ಪರಿಣಾಮ ಜೈನ ಮುನಿ ಮಾಯಂಕ್ ಸಾಗರ್ ಎಂಬವರ ಭುಜಕ್ಕೆ ಸಣ್ಣ ಮಟ್ಟಿನ ಗಾಯವಾಗಿತ್ತು. ಕರ್ನಾಟಕದ ಕನಕಪುರದಲ್ಲಿ ಈ ಘಟನೆ ನಡೆದಿತ್ತು. ಇದೀಗ ಅವರು ಚೇತರಿಸಿಕೊಂಡಿದ್ದಾರೆ ಎನ್ನುವುದು ತಿಳಿದುಬಂದಿತ್ತು. ಇದೇ ಸುದ್ದಿಯ ಕಾರಣದಿಂದ ಪೋಸ್ಟ್ ಕಾರ್ಡ್ ನ ನ್ಯೂಸ್ ನ ಸ್ಥಾಪಕ ಮಹೇಶ್ ವಿಕ್ರಮ್ ಹೆಗ್ಡೆ ಬಂಧನಕ್ಕೊಳಗಾಗಿದ್ದಾನೆ.

ಇಷ್ಟೇ ಅಲ್ಲದೆ ಈ ವೆಬ್ ಸೈಟ್ ಕನ್ನಡದ ವೀರವನಿತೆಯರ ಬಗ್ಗೆಯೂ ಅತ್ಯಂತ ಕೀಳುಮಟ್ಟದ ಭಾಷೆ ಬಳಸಿ ವಿವಾದಕ್ಕೀಡಾಗಿತ್ತು. ಪದ್ಮಾವತಿ ಚಿತ್ರವನ್ನು ಟೀಕಿಸುವ ವರದಿಯೊಂದಕ್ಕೆ ಈ ವೆಬ್ ಸೈಟ್ “ರಾಣಿ ಚೆನ್ನಮ್ಮ ಬ್ರಿಟಿಷರ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಒನಕೆ ಓಬವ್ವ ಹೈದರಾಲಿಯ ಜೊತೆ ಮಂಚ ಹಂಚಿಕೊಂಡಿದ್ದಳು” ಎನ್ನುವ ತಲೆಬರಹ ನೀಡಿತ್ತು. ಪೋಸ್ಟ್ ಕಾರ್ಡ್ ನ ಈ ವಿಕೃತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಲೇ ಪೋಸ್ಟ್ ಕಾರ್ಡ್ ಈ ಸುದ್ದಿಯನ್ನು ಡಿಲಿಟ್ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News