×
Ad

ಕುದುರೆ ಸವಾರಿ ಮಾಡಿದ್ದೇ ತಪ್ಪಾಯ್ತು: ದಲಿತ ಯುವಕನನ್ನು ಇರಿದು ಕೊಂದ ದುಷ್ಕರ್ಮಿಗಳು

Update: 2018-03-30 21:46 IST

ಗಾಂಧಿನಗರ, ಮಾ. 30: ಕುದುರೆ ಹೊಂದಿರುವುದು ಹಾಗೂ ಸವಾರಿ ಮಾಡಿರುವುದಕ್ಕೆ 21 ವರ್ಷದ ದಲಿತ ಯುವಕನೋರ್ವನನ್ನು ಮೇಲ್ಜಾತಿಗೆ ಸೇರಿದ ವ್ಯಕ್ತಿಗಳು ಇರಿದು ಕೊಂದ ಘಟನೆ ಗುಜರಾತ್‌ನ ಭಾವನಗರ ಜಿಲ್ಲೆಯ ಟಿಂಬಿ ಗ್ರಾಮದಲ್ಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿ ಸಮೀಪದ ಗ್ರಾಮದಿಂದ ಮೂವರು ಶಂಕಿತರನ್ನು ಬಂಧಿಸಲಾಗಿದೆ ಹಾಗೂ ಮುಂದಿನ ತನಿಖೆಗೆ ಭಾವನಗರ ಕ್ರೈಮ್ ಬ್ರಾಂಚ್‌ನ ನೆರವು ಕೋರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಲಿತ ಯುವಕ ಪ್ರತೀಪ್ ರಾಥೋಡ್ ಎರಡು ತಿಂಗಳ ಹಿಂದೆ ಕುದುರೆಯೊಂದನ್ನು ಖರೀದಿಸಿದ್ದರು. ಅವರು ಕುದುರೆ ತಂದ ಬಳಿಕ ಗ್ರಾಮದ ಮೇಲ್ಜಾತಿಯ ಕೆಲವು ವ್ಯಕ್ತಿಗಳು ಬೆದರಿಕೆ ಒಡ್ಡಿದ್ದರು. ಗುರುವಾರ ರಾತ್ರಿ ಪ್ರದೀಪ್ ರಾಥೋಡ್ ಅವರನ್ನು ಹತ್ಯೆಗೈಯಲಾಗಿದೆ.

 ಬೆದರಿಕೆ ಹಿನ್ನೆಲೆಯಲ್ಲಿ ಕುದುರೆಯನ್ನು ಮಾರಲು ಪ್ರದೀಪ್ ಉದ್ದೇಶಿಸಿದ್ದ ಎಂದು ಅವರ ತಂದೆ ಕುಲುಬಾ ರಾಥೋಡ್ ಹೇಳಿದ್ದಾರೆ.

ಪ್ರದೀಪ್ ಗುರುವಾರ ಕುದುರೆ ಸವಾರಿ ಮಾಡಿಕೊಂಡು ತೋಟಕ್ಕೆ ಹೋಗಿದ್ದ. ಹಿಂದಿರುಗಿ ಬಂದ ಬಳಿಕ ಜೊತೆಯಲ್ಲಿ ಊಟ ಮಾಡಲು ನಾವು ನಿರ್ಧರಿಸಿದ್ದೆವು. ಆದರೆ, ಆತ ಹಿಂದಿರುಗಿ ಬರಲಿಲ್ಲ. ನಮಗೆ ಆತಂಕವಾಯಿತು. ನಾವು ಹುಡುಕಲು ತೊಡಗಿದವು. ಹುಡುಕಾಟದ ಬಳಿಕ ತೋಟದಲ್ಲಿ ಆತನ ಹಾಗೂ ಕುದುರೆಯ ಮೃತದೇಹ ಪತ್ತೆಯಾಯಿತು ಎಂದು ಕುಲುಬಾ ರಾಥೋಡ್ ತಿಳಿಸಿದಾರೆ.

ಪರಿಸ್ಥಿತಿಯ ಮೊದಲ ವರದಿ ಪಡೆಯಲು ಹಿರಿಯ ಪೊಲೀಸ್ ಅಧಿಕಾರಿಗಳನ್ನು ರಾಜ್ಯ ಸರಕಾರ ನಿಯೋಜಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News