ಒಪ್ಟೊಮೆಟ್ರಿ ಕೋರ್ಸ್‌ನ 2ನೇ ಸೆಮಿಸ್ಟರ್ ಫಲಿತಾಂಶ ಘೋಷಿಸಿ: ಯುಜಿಸಿಗೆ ಹೈಕೋರ್ಟ್ ಆದೇಶ
ಮುಂಬೈ,ಮಾ.30: ಕಳೆದ ವರ್ಷದಿಂದಲೂ ಬಾಕಿಯಿರುವ ಒಪ್ಟೊಮೆಟ್ರಿ(ನೇತ್ರ ರಕ್ಷಣೆಯಲ್ಲಿ ತಜ್ಞತೆ) ಕೋರ್ಸ್‌ನ ದ್ವಿತೀಯ ಸೆಮಿಸ್ಟರ್‌ನ ಫಲಿತಾಂಶಗಳ್ನು ಘೋಷಿಸುವಂತೆ ಬಾಂಬೆ ಉಚ್ಚ ನ್ಯಾಯಾಲಯವು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ)ಕ್ಕೆ ಆದೇಶಿಸುವ ಮೂಲಕ ಈ ಕೋರ್ಸ್‌ನ್ನು ವ್ಯಾಸಂಗ ಮಾಡುತ್ತಿರುವ 40 ವಿದ್ಯಾರ್ಥಿಗಳಿಗೆ ಮಧ್ಯಂತರ ಪರಿಹಾರವನ್ನು ನೀಡಿದೆ.
ಜುಹುವಿನ ಲೋಟಸ್ ಕಾಲೇಜ್ ಆಫ್ ಒಪ್ಟೊಮೆಟ್ರಿ ಸಲ್ಲಿಸಿರುವ ಅರ್ಜಿಯನ್ನು ಕೈಗೆತ್ತಿಕೊಂಡಿದ್ದ ಪೀಠವು ಈ ಆದೇಶವನ್ನು ನೀಡಿದೆ. ಈ ಕಾಲೇಜು 2016ರಲ್ಲಿ ತನ್ನ ನಾಲ್ಕು ವರ್ಷಗಳ ಬಿ.ಎಸ್‌ಸಿ(ಒಪ್ಟೊಮೆಟ್ರಿ) ಕೋರ್ಸ್‌ನ ಮೊದಲ ವರ್ಷಕ್ಕೆ 40 ವಿದ್ಯಾರ್ಥಿಗಳಿಗೆ ಪ್ರವೇಶವನ್ನು ನೀಡಿತ್ತು. ಈ ಕೋರ್ಸ್ ಮುಕ್ತ ವಿಶ್ವವಿದ್ಯಾನಿಲಯವೊಂದಕ್ಕೆ ಸಂಲಗ್ನ ಗೊಂಡಿದೆ.
ಆದರೆ 2016ರಲ್ಲಿ ಮೊದಲ ಸೆಮಿಸ್ಟರ್ ಪರೀಕ್ಷೆಗಳು ನಡೆದ ಬೆನ್ನಿಗೇ ಮಹಾರಾಷ್ಟ್ರ ಸರಕಾರವು ಒಪ್ಟೊಮೆಟ್ರಿಯು ವೈದ್ಯಕೀಯ ಕೋರ್ಸ್ ಆಗಿದೆ ಮತ್ತು ಮುಕ್ತ ವಿವಿಯು ಈ ಕೋರ್ಸ್‌ನ್ನು ನಡೆಸುವಂತಿಲ್ಲ ಎಂದು ಯುಜಿಸಿಗೆ ತಿಳಿಸಿತ್ತು. ಹೀಗಾಗಿ ಈ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ.
ರಾಜ್ಯ ಸರಕಾರದ ಹಾಲಿ ನಿಯಮಾವಳಿಗಳಂತೆ ಎಲ್ಲ ವೈದ್ಯಕೀಯ ಕೋರ್ಸ್‌ಗಳು ಮಹಾರಾಷ್ಟ್ರ ವೈದ್ಯಕೀಯ ವಿಜ್ಞಾನಗಳ ಪ್ರಾಧಿಕಾರದ ಮಾರ್ಗಸೂಚಿಗಳಿಗೆ ಒಳಪಟ್ಟಿವೆ.
ಆದರೆ ಲೋಟಸ್ ಕಾಲೇಜು ಅದಾಗಲೇ ಈ ವಿದ್ಯಾರ್ಥಿ ಗಳಿಗೆ ಪ್ರವೇಶವನ್ನು ನೀಡಿದ್ದರಿಂದ ಯುಜಿಸಿಗೆ ಸರಕಾರದ ಸೂಚನೆಯನ್ನು ಪ್ರಶ್ನಿಸಿ ಅದು ಉಚ್ಚ ನ್ಯಾಯಾಲಯದ ಮೆಟ್ಟಿಲ ನ್ನೇರಿತ್ತು.
ಮುಖ್ಯಅರ್ಜಿಯ ವಿಚಾರಣೆ ಬಾಕಿಯಿದ್ದರೂ, ಉಚ್ಚ ನ್ಯಾಯಲಯದ ವಿವಿಧ ಪೀಠಗಳು ವಿದ್ಯಾರ್ಥಿಗಳು ತಮ್ಮ ಸೆಮಿಸ್ಟರ್ ಪರೀಕ್ಷೆಗಳಿಗೆ ಹಾಜರಾಗಲು ನೆರವಾಗುವ ನಿಟ್ಟಿನಲ್ಲಿ ಆದೇಶಗಳನ್ನು ಹೊರಡಿಸುತ್ತಲೇ ಇವೆ.
ನ್ಯಾಯಾಲಯದ ನಿರ್ದೇಶಗಳ ಮೇರೆಗೆ ಈ ವಿದ್ಯಾರ್ಥಿಗಳು ತಮ್ಮ 1,2 ಮತ್ತು 3ನೇ ಸೆಮಿಸ್ಟರ್ ಪರೀಕ್ಷೆಗಳಿಗೆ ಹಾಜರಾಗಲು ರಾಜ್ಯ ಸರಕಾರ ಮತ್ತು ಯುಜಿಸಿ ಅನುಮತಿ ನೀಡಿದ್ದವು.
ಈ ವಿದ್ಯಾರ್ಥಿಗಳು ನಾಲ್ಕನೇ ಸೆಮಿಸ್ಟರ್‌ಗೆ ತಮ್ಮ ಪ್ರವೇಶಕ್ಕಾಗಿ ಕಾಯುತ್ತಿದ್ದಾರೆ. ಆದರೆ ಕೋರ್ಸ್‌ನ ಮಾನ್ಯತೆಯ ಬಗ್ಗೆ ನಿರ್ಧಾರ ಇನ್ನೂ ಬಾಕಿಯಿರುವ ಕಾರಣದಿಂದ ಅವರ 2ನೇ ಸೆಮಿಸ್ಟರ್‌ನ ಫಲಿತಾಂಶಗಳನ್ನು ಅಧಿಕಾರಿಗಳು ತಡೆಹಿಡಿದಿ ದ್ದಾರೆ. ಚೋದ್ಯವೆಂದರೆ ಕೆಲವು ವಿದ್ಯಾರ್ಥಿಗಳು ದುಂಬಾಲು ಬಿದ್ದಿದ್ದರಿಂದ ಅಧಿಕಾರಿಗಳು 3ನೇ ಸೆಮಿಸ್ಟರ್‌ನ ಫಲಿತಾಂಶ ಗಳನ್ನು ಪ್ರಕಟಿಸಿದ್ದಾರೆ.
ಆದರೆ ರಾಜ್ಯ ಸರಕಾರವು ಆಕ್ಷೇಪಿಸುವ ಮುನ್ನವೇ ವಿದ್ಯಾರ್ಥಿಗಳು ಈ ಕೋರ್ಸ್‌ಗೆ ಪ್ರವೇಶ ಪಡೆದಿರುವುದರಿಂದ ಅವರ ಹಿತಾಸಕ್ತಿಗಳಿಗೆ ಧಕ್ಕೆಯಾಗಕೂಡದು ಎಂಬ ಅಭಿಪ್ರಾಯವನ್ನು ಹೊಂದಿರುವ ಪೀಠವು, 2ನೇ ಸೆಮಿಸ್ಟರ್ ಫಲಿತಾಂಶಗಳ ಕುರಿತ ವಿವಾದವನ್ನು ಬಗೆಹರಿಸಿಕೊಳ್ಳುವಂತೆ ಮತ್ತು ಫಲಿತಾಂಶಗಳನ್ನು ಪ್ರಕಟಿಸುವಂತೆ ರಾಜ್ಯ ಮತ್ತು ಯುಜಿಸಿಗೆ ನಿರ್ದೇಶ ನೀಡಿದೆ.
ಕೋರ್ಸ್‌ಗೆ ಮಾನ್ಯತೆ ನೀಡುವ ಮುಖ್ಯ ವಿಷಯದ ಬಗ್ಗೆ ಜೂನ್‌ನಲ್ಲಿ ವಿಚಾರಣೆಯನ್ನು ಆರಂಭಿಸುವುದಾಗಿ ಪೀಠವು ತಿಳಿಸಿದೆ.