ಉ.ಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿಯಿಂದ ಬಿಜೆಪಿಗೆ 30 ಸ್ಥಾನ ನಷ್ಟ ಸಾಧ್ಯತೆ: ಕೇಂದ್ರ ಸಚಿವ ಅಠಾವಳೆ

Update: 2018-03-30 16:35 GMT

ಲಕ್ನೊ, ಮಾ.30: ಮುಂದಿನ ವರ್ಷ ನಡೆಯಲಿರುವ ಮಹಾ ಚುನಾವಣೆಯಲ್ಲಿ ಉ.ಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿ ಮಾಡಿಕೊಂಡರೆ ಬಿಜೆಪಿಗೆ 25ರಿಂದ 30 ಸ್ಥಾನಗಳಷ್ಟು ನಷ್ಟವಾಗಬಹುದು ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಹೇಳಿದ್ದಾರೆ. ಆದರೂ ಪ್ರಧಾನಿ ಮೋದಿಗೆ ಯಾರೂ ಸವಾಲು ಹಾಕಲು ಸಾಧ್ಯವಾಗದು ಎಂದು ಎನ್‌ಡಿಎ ಮಿತ್ರಪಕ್ಷ ಆರ್‌ಪಿಐ(ಎ) ಅಧ್ಯಕ್ಷರೂ ಆಗಿರುವ ಅಠವಳೆ ಅಭಿಪ್ರಾಯಪಟ್ಟಿದ್ದಾರೆ.

ಉ.ಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿ ಮಾಡಿಕೊಂಡರೆ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳಿಗೆ ಸುಮಾರು 25-30 ಸ್ಥಾನ ನಷ್ಟವಾಗಬಹುದು. ಆದರೂ ಬಿಜೆಪಿ 50ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ. ಅಲ್ಲದೆ 2019ರ ಚುನಾವಣೆಯಲ್ಲೂ ಎನ್‌ಡಿಎ ಗೆದ್ದು ಅಧಿಕಾರ ಉಳಿಸಿಕೊಳ್ಳಲಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಬಿಎಸ್ಪಿ ನಾಯಕಿ ಮಾಯಾವತಿ ಇವರ್ಯಾರೂ ಪ್ರಧಾನಿ ಮೋದಿಗೆ ಸವಾಲು ಹಾಕಲು ಸಾಧ್ಯವಾಗದು ಎಂದು ಅಠಾವಳೆ ಹೇಳಿದರು.

ಉತ್ತರಪ್ರದೇಶದಲ್ಲಿ 80 ಲೋಕಸಭೆ ಸ್ಥಾನಗಳಿದ್ದು, 2014ರ ಚುನಾವಣೆಯಲ್ಲಿ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳು 73 ಸ್ಥಾನ ಪಡೆದಿದ್ದರೆ ಕಾಂಗ್ರೆಸ್ 2, ಸಮಾಜವಾದಿ ಪಕ್ಷ (ಎಸ್ಪಿ) 5 ಸ್ಥಾನ ಗಳಿಸಿದ್ದವು. ಇದೀಗ ಉಪಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಕಾರಣ ಎಸ್ಪಿ ಸಂಸದ್ ಸದಸ್ಯರ ಸಂಖ್ಯೆ 7ಕ್ಕೇರಿದೆ. ಎಸ್ಪಿ-ಬಿಎಸ್ಪಿ ಮಧ್ಯೆ ಈಗಷ್ಟೇ ಚಿಗುರಿದ ಗೆಳೆತನದಲ್ಲಿ ಬಿರುಕಿನ ಲಕ್ಷಣ ಗೋಚರವಾಗಿರುವುದನ್ನು ಉಲ್ಲೇಖಿಸಿದ ಅವರು, ಲೋಕಸಭಾ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷಕ್ಕೆ ಮಾಯಾವತಿ ಬೆಂಬಲ ಸೂಚಿಸಿದ್ದರು. ಇದಕ್ಕೆ ಪ್ರತಿಯಾಗಿ ರಾಜ್ಯಸಭೆಯ ಚುನಾವಣೆಯಲ್ಲಿ ಮಾಯಾವತಿಗೆ ಎಸ್ಪಿ ಬೆಂಬಲ ನೀಡಬೇಕಿತ್ತು. ಆದರೆ ಹೀಗೆ ಮಾಡದೆ ಸಮಾಜವಾದಿ ಪಕ್ಷ ವಂಚಿಸಿದ ಕಾರಣ ಬಿಎಸ್ಪಿ ಅಭ್ಯರ್ಥಿ ಸೋತಿದ್ದಾರೆ ಎಂದು ವಿಶ್ಲೇಷಿಸಿದರು. ಮಾಯಾವತಿಗೆ ದಲಿತರ ಬಗ್ಗೆ ನಿಜವಾಗಿಯೂ ಕಾಳಜಿಯಿದ್ದರೆ ಅವರು ಎನ್‌ಡಿಎ ಸೇರಬೇಕು ಎಂದು ಅಠಾವಳೆ ಅವರಿಗೆ ಆಹ್ವಾನ ನೀಡಿದರು. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೇತರ ಪಕ್ಷಗಳ ರಂಗವೊಂದನ್ನು ರಚಿಸಲು ಮಾಯಾವತಿ ಪ್ರಯತ್ನ ಮುಂದುವರಿಸುತ್ತಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.

ದಲಿತರ ವಿರುದ್ಧ ದೌರ್ಜನ್ಯ ಈಗಲೂ ನಡೆಯುತ್ತಿದೆ. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಇದಕ್ಕೆ ಕಾರಣವಲ್ಲ ಎಂದ ಅವರು, ದಲಿತರನ್ನು ರಕ್ಷಿಸಲು ಕಾನೂನಿನ ಹಲ್ಲನ್ನು ಇನ್ನಷ್ಟು ಬಿಗಿಗೊಳಿಸಬೇಕಿದೆ ಎಂದು ಹೇಳಿದರು. ಅಠಾವಳೆ ಕೇಂದ್ರ ಸರಕಾರದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಸಚಿವರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News