'ಮುಸ್ಲಿಂ ವಿರೋಧಿ' ಎಂಬ ಮನೋಭಾವನೆ ಬದಲಾಯಿಸಲು ಮೋದಿ ಸರಕಾರ ಹೆಣಗಾಡುತ್ತಿದೆ: ಕೇಂದ್ರ ಸಚಿವ ಪಾಸ್ವಾನ್

Update: 2018-03-30 17:01 GMT

ಹೊಸದಿಲ್ಲಿ, ಮಾ.30: 'ಕೇಂದ್ರದ ಮೋದಿ ಸರಕಾರ ಅಲ್ಪಸಂಖ್ಯಾತ ಮುಸ್ಲಿಮರ ಹಾಗೂ ಕೆಳ ಜಾತಿ ವರ್ಗಗಳ ವಿರೋಧಿ' ಎಂಬ ಸಾಮಾನ್ಯ ಮನೋಭಾವನೆ ಇದೆ. ಇದು ಸರಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಭಾರೀ ಬೆಲೆ ತೆರಬೇಕಾದ ಪ್ರಮೇಯ ಸೃಷ್ಟಿಸಬಹುದಾದುದರಿಂದ ಸರಕಾರ ಈ ಮನೋಭಾವನೆ ಬದಲಾಯಿಸಲು ಹೆಣಗಾಡುತ್ತಿದೆ ಎಂದು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ.

ಬಿಜೆಪಿಯ ಮಿತ್ರ ಪಕ್ಷವಾದ ಲೋಕ್ ಜನ ಶಕ್ತಿಯ ಮುಖ್ಯಸ್ಥರಾಗಿರುವ ಪಾಸ್ವಾನ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಮೋದಿ ಸರಕಾರ ಇನ್ನೊಂದು ಅವಧಿಗೆ ಅಧಿಕಾರಕ್ಕೆ ಬರುವುದಾದರೂ ಅದು ತಾನು ಕೇವಲ ಮೇಲ್ಜಾತಿಯ ಹಿಂದೂಗಳಿಗಾಗಿ ಮಾತ್ರ ಶ್ರಮಿಸುವ ಪಕ್ಷವೆಂದು ಜನರಿಗಿರುವ ಮನೋಭಾವನೆಯನ್ನು ಮೊದಲು ಬದಲಿಸಬೇಕಿದೆ ಎಂದಿದ್ದಾರೆ.

"ಆದರೆ ಸರಕಾರ ಎಲ್ಲರ ಕಲ್ಯಾಣಕ್ಕಾಗಿ ಶ್ರಮಿಸಿದೆ, ಅಲ್ಪಸಂಖ್ಯಾತರಿಗಾಗಿಯೂ ಅದು ಸಾಕಷ್ಟು ಮಾಡಿದೆ. ಆದರೂ ಸರಕಾರದ ಬಗೆಗಿನ ಮನೋಭಾವನೆ ಬದಲಾಗಿಲ್ಲ'' ಎಂದವರು ಹೇಳಿದರು.

ಪಾಸ್ವಾನ್ ತವರು ರಾಜ್ಯವಾದ  ಬಿಹಾರದಲ್ಲಿ ಅವರ ಪಕ್ಷಕ್ಕೆ ಮುಸ್ಲಿಮರ ಸಾಕಷ್ಟು ಬೆಂಬಲವಿದೆ. "ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟದಿಂದ ಹೊರಬರುವ ಬಗ್ಗೆ ಯೋಚಿಸಲು ಸಾಧ್ಯವೇ ಇಲ್ಲ'' ಎಂದು ಅವರು ಹೇಳಿದ್ದಾರೆ. "ಇದು ವಾಸ್ತವವಾಗಿ ಬಿಜೆಪಿ ಸರಕಾರ. ಅವರಿಗೆ ನಿಚ್ಚಳ ಬಹುಮತವಿದೆ. ಆದರೂ ಮೋದಿ ನಮ್ಮಂತಹ ಮಿತ್ರ ಪಕ್ಷಗಳಿಗೆ ಜಾಗವೊದಗಿಸಿದ್ದಾರೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News