×
Ad

ಸಿಬಿಎಸ್‌ಇ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಎನ್‌ಎಸ್‌ಯುಐ ಪ್ರತಿಭಟನೆ

Update: 2018-03-30 22:52 IST

ಹೊಸದಿಲ್ಲಿ, ಮಾ.30: ಸಿಬಿಎಸ್‌ಇ ಪ್ರಶ್ನೆಪತ್ರಿಕೆ ಸೋರಿಕೆಯಾಗಲು ಸಿಬಿಎಸ್‌ಇ ಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಹಾಗೂ ತಪ್ಪಿತಸ್ತರ ವಿರುದ್ಧ ಶೀಘ್ರ ಕ್ರಮಕ್ಕೆ ಆಗ್ರಹಿಸಿ ದಿಲ್ಲಿಯ ವಿವಿಧೆಡೆ ವಿದ್ಯಾರ್ಥಿಗಳು ಹಾಗೂ ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕ ‘ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯ(ಎನ್‌ಎಸ್‌ಯುಐ)ದ ಸದಸ್ಯರು ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಎನ್‌ಎಸ್‌ಯುಐ ಮುಖಂಡ ನೀರಜ್ ಮಿಶ್ರ, ಮೋದಿ ಸರಕಾರದಡಿ ದೇಶದ ಅತ್ಯುನ್ನತ ಶಿಕ್ಷಣ ಸಂಸ್ಥೆಯು ಪರೀಕ್ಷಾ ಮಾಫಿಯಾದ ನಿಯಂತ್ರಣದಲ್ಲಿರುವುದನ್ನು ಹಾಗೂ ಎಚ್‌ಆರ್‌ಡಿ ಇಲಾಖೆ ಮತ್ತು ಸಿಬಿಎಸ್‌ಇ ಅಧ್ಯಕ್ಷರು ಜವಾಬ್ದಾರಿ ನಿರ್ವಹಣೆಯಲ್ಲಿ ವಿಫಲವಾಗಿರುವುದನ್ನು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಜಾಹೀರುಗೊಳಿಸಿದೆ ಎಂದು ಆರೋಪಿಸಿದರು. ಸೋರಿಕೆಯಾದ ಗಣಿತ ಹಾಗೂ ಅರ್ಥಶಾಸ್ತ್ರ ವಿಷಯಗಳಲ್ಲಿ ಶೀಘ್ರ ಮರುಪರೀಕ್ಷೆ ನಡೆಸಬೇಕು ಮತ್ತು ಮರುಪರೀಕ್ಷೆ ಬರೆಯಲು ವಿದ್ಯಾರ್ಥಿಗಳನ್ನು ಬಲವಂತಗೊಳಿಸಬಾರದು ಎಂದು ಎನ್‌ಎಸ್‌ಯುಐ ಆಗ್ರಹಿಸಿದೆ. ಕೆಲವು ವಿದ್ಯಾರ್ಥಿಗಳು ಪಾರ್ಲಿಮೆಂಟ್ ರಸ್ತೆಯಲ್ಲಿ ಗುಂಪುಸೇರಿ ಪ್ರತಿಭಟನೆ ನಡೆಸಿದರೆ, ಎನ್‌ಎಸ್‌ಯುಐ ಸದಸ್ಯರು ಕೇಂದ್ರ ಮಾನವಸಂಪನ್ಮೂಲ ಇಲಾಖೆ(ಎಚ್‌ಆರ್‌ಡಿ)ಯ ಸಚಿವ ಪ್ರಕಾಶ್ ಜಾವಡೇಕರ್ ನಿವಾಸದತ್ತ ರ್ಯಾಲಿ ನಡೆಸಲು ಮುಂದಾದಾಗ ಅವರನ್ನು ಉದ್ಯೋಗ್‌ಭವನ ಮೆಟ್ರೋ ನಿಲ್ದಾಣದ ಬಳಿ ಪೊಲೀಸರು ತಡೆದರು. ಬಳಿಕ ಎನ್‌ಎಸ್‌ಯುಐ ಅಧ್ಯಕ್ಷ ಫಿರೋಝ್ ಖಾನ್ ಹಾಗೂ ವಿದ್ಯಾರ್ಥಿ ಮುಖಂಡ ಕುನಾಲ್ ಸೆಹ್ರಾವತ್‌ರನ್ನು ಪೊಲೀಸರು ಸಚಿವರ ನಿವಾಸಕ್ಕೆ ಕರೆದೊಯ್ದರು . ಎನ್‌ಎಸ್‌ಯುಐ ಪ್ರಸ್ತಾವಿಸಿದ ವಿಷಯಗಳ ಬಗ್ಗೆ ಸರಕಾರ ಶೀಘ್ರ ಗಮನ ಹರಿಸಿ ನಿರ್ಧಾರಕ್ಕೆ ಬರಲಿದೆ ಎಂದು ಸಚಿವ ಜಾವಡೇಕರ್ ಭರವಸೆ ನೀಡಿದರು ಎಂದು ಸೆಹ್ರಾವತ್ ಸುದ್ದಿಗಾರರಿಗೆ ತಿಳಿಸಿದರು. ದಿಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯರು ದಿಲ್ಲಿಯ ಪ್ರೀತ್‌ವಿಹಾರದಲ್ಲಿರುವ ಸಿಬಿಎಸ್‌ಇ ಕೇಂದ್ರಕಚೇರಿಯ ಎದುರು ಪ್ರತಿಭಟನೆ ನಡೆಸಿ, ಪ್ರಕರಣದ ಬಗ್ಗೆ ಸ್ವತಂತ್ರ ಸಂಸ್ಥೆಯ ಮೂಲಕ ತನಿಖೆಗೆ ಆಗ್ರಹಿಸಿದರು.

     ಆರೆಸ್ಸೆಸ್ ಬೆಂಬಲಿತ ಎಬಿವಿಪಿ ಸದಸ್ಯರ ನಿಯೋಗವು ಸಚಿವ ಪ್ರಕಾಶ್ ಜಾವಡೇಕರ್‌ರನ್ನು ಭೇಟಿ ಮಾಡಿ, ಸೋರಿಕೆ ರಹಿತ ಪರೀಕ್ಷೆ ನಡೆಯಲು ಕಾರ್ಯವಿಧಾನದಲ್ಲಿ ಬದಲಾವಣೆ ಮಾಡಬೇಕೆಂದು ಹಾಗೂ ಮರುಪರೀಕ್ಷೆಯ ದಿನಾಂಕವನ್ನು ಶೀಘ್ರ ಘೋಷಿಸಬೇಕೆಂದು ಮನವಿ ಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News