×
Ad

ಟಿಬೆಟ್ ಪ್ರಾಂತ್ಯದ ಬಳಿ ಚೀನಾ ಗಡಿಯಲ್ಲಿ ಯೋಧರ ನಿಯೋಜನೆ ಹೆಚ್ಚಿಸಿದ ಭಾರತ

Update: 2018-03-31 19:09 IST

 ಕಿಬಿತು(ಅರುಣಾಚಲ ಪ್ರದೇಶ),ಮಾ.31: ಡೋಕಾ ಲಾ ಬಿಕ್ಕಟ್ಟಿನ ಬಳಿಕ ಭಾರತವು ಅರುಣಾಚಲ ವಿಭಾಗದಲ್ಲಿ ಟಿಬೆಟ್ ಪ್ರಾಂತ್ಯಕ್ಕೆ ಹೊಂದಿಕೊಂಡಿರುವ ಚೀನಾದ ಗಡಿಯಲ್ಲಿನ ಪರ್ವತ ಪ್ರದೇಶಗಳಲ್ಲಿ ಹೆಚ್ಚಿನ ಯೋಧರನ್ನು ನಿಯೋಜಿಸಿದ್ದು, ಗಸ್ತುಕಾರ್ಯವನ್ನು ಗಮನಾರ್ಹವಾಗಿ ಹೆಚ್ಚಿಸಿದೆ.

ವ್ಯೂಹಾತ್ಮಕವಾಗಿ ಮಹತ್ವದ್ದಾಗಿರುವ ಟಿಬೆಟ್ ಪ್ರಾಂತ್ಯದಲ್ಲಿನ ಗಡಿಗಳಲ್ಲಿ ಚೀನಾದ ಚಟುವಟಿಕೆಗಳ ಮೇಲೆ ಕಣ್ಗಾವಲು ವ್ಯವಸ್ಥೆಯನ್ನೂ ಭಾರತವು ಬಲಗೊಳಿಸುತ್ತಿದ್ದು, ಸರ್ವೇಕ್ಷಣೆಗಾಗಿ ಹೆಲಿಕಾಪ್ಟರ್‌ಗಳನ್ನು ನಿಯಮಿತವಾಗಿ ನಿಯೋಜಿಸುತ್ತಿದೆ.

ದಿಬಾಂಗ್,ದಾವು-ದಿಲಾಯಿ ಮತ್ತು ಲೋಹಿತ್ ಕಣಿವೆ ಪ್ರದೇಶಗಳಲ್ಲಿ ಗಡಿಯುದ್ದಕ್ಕೂ ಚೀನಾದ ಹೆಚ್ಚುತ್ತಿರುವ ಚಟುವಟಿಕೆಗಳನ್ನು ಎದುರಿಸಲು ತನ್ನ ಕಾರ್ಯತಂತ್ರದ ಭಾಗವಾಗಿ 17,000 ಅಡಿ ಎತ್ತರದಲ್ಲಿರುವ ಹಿಮಾಚ್ಛಾದಿತ ಪರ್ವತಗಳು ಮತ್ತು ನದಿ ಕಣಿವೆಗಳು ಸೇರಿದಂತೆ ದುರ್ಗಮ ಪ್ರದೇಶಗಳ ಮೇಲೆ ತನ್ನ ಪ್ರಾಬಲ್ಯವನ್ನು ಹೆಚ್ಚಿಸಲು ಭಾರತವು ಗಮನವನ್ನು ಕೇಂದ್ರೀಕರಿಸುತ್ತಿದೆ ಎಂದು ಸೇನೆಯ ಅಧಿಕಾರಿ ಗಳು ತಿಳಿಸಿದರು.

ಡೋಕಾ ಲಾ ಬಿಕ್ಕಟ್ಟಿನ ಬಳಿಕ ನಾವು ನಮ್ಮ ಚಟುವಟಿಕೆಗಳನ್ನು ಹಲವಾರು ಪಟ್ಟು ಹೆಚ್ಚಿಸಿದ್ದೇವೆ. ಯಾವುದೇ ಸವಾಲನ್ನು ಎದುರಿಸಲು ನಾವು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ ಎಂದು ಟೆಬೆಟ್ ಪ್ರಾಂತ್ಯದೊಂದಿಗೆ ಹೊಂದಿಕೊಂಡಿರುವ ಭಾರತದ ಗಡಿಯಲ್ಲಿನ ಅತ್ಯಂತ ಪೂರ್ವದ ಗ್ರಾಮವಾಗಿರುವ ಕಿಬಿತುನಲ್ಲಿ ನಿಯೋಜಿತ ಸೇನಾಧಿಕಾರಿಯೋರ್ವರು ತಿಳಿಸಿದರು.

ಭಾರತ,ಚೀನಾ ಮತ್ತು ಮ್ಯಾನ್ಮಾರ್‌ನ ಗಡಿಗಳು ಸಂಗಮ ಗೊಳ್ಳುವ ಸ್ಥಳಗಳು ಸೇರಿದಂತೆ ವ್ಯೂಹಾತ್ಮಕವಾಗಿ ಮಹತ್ವ ದ್ದಾಗಿರುವ ಎಲ್ಲ ಪ್ರದೇಶಗಳ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸಿದ್ದು, ನಮ್ಮ ಯೋಧರ ನಿಯೋಜನೆಯನ್ನು ಹೆಚ್ಚಿಸಿದ್ದೇವೆ ಎಂದ ಅವರು, ಭಾರತದ ಗಡಿಯುದ್ದಕ್ಕೂ, ವಿಶೇಷವಾಗಿ ಟಿಬೆಟ್ ಪ್ರದೇಶದಲ್ಲಿ ಚೀನಾ ಮೂಲಸೌಕರ್ಯ ಗಳನ್ನು ಅಭಿವೃದ್ಧಿಗೊಳಿಸುತ್ತಿದೆ ಮತ್ತು ಯೋಧರ ತ್ವರಿತ ಚಲನವಲನಗಳಿಗಾಗಿ ಭಾರತವು ತನ್ನ ರಸ್ತೆಜಾಲವನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಹೇಳಿದರು.

ಆದರೆ,ದಿಬಾಂಗ್ ಮತ್ತು ಲೋಹಿತ್ ಕಣಿವೆಗಳನ್ನು ಸಂಪರ್ಕಿಸುವ ರಸ್ತೆ ಸೇರಿದಂತೆ ಹಲವಾರು ರಸ್ತೆಗಳನ್ನು ಅಂತಿಮಗೊಳಿಸಲಾಗಿದ್ದು, ಇದರಿಂದ ಅರುಣಾಚಲದಲ್ಲಿ ಅಂತರ್ ಕಣಿವೆ ಸಂಪರ್ಕವು ಉತ್ತಮಗೊಳ್ಳಲಿದೆ ಎಂದು ಗಡಿ ರಸ್ತೆಗಳ ಸಂಸ್ಥೆಯ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

ಚೀನಾ ಉತ್ತರ ಡೋಕಾ ಲಾದಲ್ಲಿ ತನ್ನ ಯೋಧರನ್ನು ನಿಯೋಜಿಸುತ್ತಿದೆ ಮತ್ತು ವಿವಾದಿತ ಪ್ರದೇಶದಲ್ಲಿ ತನ್ನ ಮೂಲಸೌಕರ್ಯಗಳನ್ನು ಹೆಚ್ಚಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News