ಇಂಗ್ಲಿಷ್‌ನಲ್ಲಿ ಮಾತನಾಡಿದ ವಿದ್ಯಾರ್ಥಿಯನ್ನು ಜೈಲಿಗೆ ತಳ್ಳಿದ ಪೊಲೀಸರು !

Update: 2018-03-31 15:04 GMT

ಹೊಸದಿಲ್ಲಿ, ಮಾ. 31: ಇಂಗ್ಲಿಷ್ ನಲ್ಲಿ ಮಾತನಾಡಿದ ಕಾರಣಕ್ಕಾಗಿ 12ನೇ ತರಗತಿ ವಿದ್ಯಾರ್ಥಿಯನ್ನು ಪೊಲೀಸರು ಜೈಲಿಗೆ ತಳ್ಳಿದ ಘಟನೆ ಬಿಹಾರದ ಖಗರಿಯಾ ಜಿಲ್ಲೆಯಲ್ಲಿ ನಡೆದಿದೆ.

ತಪ್ಪೆಸಗಿದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಶ್ರುಕ್ರವಾರ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಪೊಲೀಸರ ಥಳಿತದಿಂದ ಕಾಲು ಹಾಗೂ ಬೆನ್ನಿಗೆ ಗಾಯವಾಗಿರುವ ಬಾಲಕ ಅಭಿಶೇಕ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೈಕ್ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ವಶದಲ್ಲಿದ್ದ ಮಾವನನ್ನು ಬಿಡುಗಡೆಗೊಳಿಸಲು ಅಭಿಷೇಕ್ ಕುಮಾರ್ ಚೌಥಮ್ ಪೊಲೀಸ್ ಠಾಣೆಗೆ ಹೋಗಿದ್ದರು. ಬೈಕ್‌ನ ದಾಖಲೆಗಳನ್ನು ಒಪ್ಪಿಸಿದ ಬಳಿಕವೂ ಪೊಲೀಸರು ಆತನನ್ನು ಬಿಡುಗಡೆಗೊಳಿಸಲಿಲ್ಲ. ಈ ಹಿನ್ನೆಲೆಯಲ್ಲೆ ಅಭಿಷೇಕ್, ದಾಖಲೆಗಳನ್ನು ನೀಡಿದ ಬಳಿಕವೂ ತನ್ನ ಮಾವನನ್ನು ಯಾಕೆ ಕಸ್ಟಡಿಯಲ್ಲಿ ಇರಿಸಿದ್ದೀರಿ, ಅವರನ್ನು ವಶದಲ್ಲಿರಿಸಲು ಕಾರಣವೇನು ? ಎಂದು ಇಂಗ್ಲೀಷ್ ನಲ್ಲಿ ಪ್ರಶ್ನಿಸಿದ್ದರು. ಇದರಿಂದ ಆಕ್ರೋಶಿತರಾದ ಪೊಲೀಸ್ ಅಧಿಕಾರಿಗಳು ಆತನಿಗೆ ಥಳಿಸಿ ಕಸ್ಟಡಿಯಲ್ಲಿ ಕೂಡಿ ಹಾಕಿದರು ಎಂದು ಆರೋಪಿಸಲಾಗಿದೆ.

‘‘ಪೊಲೀಸ್ ಅಧಿಕಾರಿಗಳಿಗೆ ನಾನು ಇಂಗ್ಲಿಷ್‌ನಲ್ಲಿ ಕೇಳಿದ ಪ್ರಶ್ನೆ ಅರ್ಥ ಆಗಿಲ್ಲ. ನಾನು ಇಂಗ್ಲೀಷ್‌ನಲ್ಲಿ ಮಾತನಾಡುವುದು ಉದ್ಧಟತನ ಎಂದು ಅವರು ಭಾವಿಸಿದ್ದರು’’ ಎಂದು ಅಭಿಷೇಕ್ ಹೇಳಿದ್ದಾರೆ. ತಪ್ಪೆಸಗಿದ ಇಬ್ಬರು ಪೊಲೀಸ್ ಅಧಿಕಾರಿಗಳ ಬಗ್ಗೆ ತನಿಖೆ ಆರಂಭಿಸಲಾಗಿದೆ. ಬಿಹಾರದಲ್ಲಿರುವ ಕೆಲವು ಪೊಲೀಸರಿಗೆ ಇಂಗ್ಲಿಷ್‌ನಲ್ಲಿ ಬರೆಯುವುದು, ಮಾತನಾಡುವುದು ಕಷ್ಟವಾಗುತ್ತಿದೆ. ಇದರಿಂದಾಗಿ ಜನರು ಇಂಗ್ಲಿಶ್‌ನಲ್ಲಿ ದೂರು ಸಲ್ಲಿಸುವುದನ್ನು ಅನುತ್ತೇಜಿಸಲಾಗುತ್ತಿದೆ ಎಂದು ರಮಾನಂದ ಸಾಗರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News