ಒಂದು ಫೋಟೊ ಕಮಲ್ ಹಾಸನ್, ಮೋಹನ್ ಲಾಲ್ ಹಾಗು ಮಮ್ಮುಟ್ಟಿ ಅಭಿಮಾನಿಗಳ ಜಗಳಕ್ಕೆ ಕಾರಣವಾಗಿದ್ದು ಹೇಗೆ?

Update: 2018-03-31 17:30 GMT

ಚೆನ್ನೈ, ಮಾ.31: ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಕಮಲ್ ಹಾಸನ್ ಹಾಕಿದ ಫೋಟೊವೊಂದು ಇದೀಗ ಕಮಲ್ ಹಾಸನ್-ಮಮ್ಮುಟ್ಟಿ ಹಾಗು ಮೋಹನ್ ಲಾಲ್ ಅಭಿಮಾನಿಗಳ ನಡುವಿನ ಜಗಳಕ್ಕೆ ಕಾರಣವಾಗಿದೆ. ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಚಿತ್ರ ನಿರ್ಮಾಪಕ ಕ್ರಿಸ್ಟೋಫರ್ ನೋಲಾನ್ ಅವರನ್ನು ಉಳಗನಾಯಗನ್ ಕಮಲ್ ಹಾಸನ್ ಭೇಟಿಯಾಗಿದ್ದರು. ಡಿಜಿಟಲ್ ಯುಗದಲ್ಲಿ ಸೆಲ್ಯುಲಾಯ್ಡ್ ಚಿತ್ರಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನೋಲಾನ್ ಭಾರತಕ್ಕೆ ಬಂದಿದ್ದರು. 

ಈ ಬಗ್ಗೆ ಕಮಲ್ ಟ್ವೀಟ್ ಒಂದನ್ನು ಮಾಡಿದ್ದು,  "ನನ್ನ ಪಾಪನಾಸಂ ಚಿತ್ರವನ್ನು ನೋಡಿದ್ದಾಗಿ ನೋಲಾನ್ ಹೇಳಿದ್ದು ಅಚ್ಚರಿ ಮೂಡಿಸಿತ್ತು" ಎಂದು ಬರೆದಿದ್ದರು.

ಕಮಲ್ ಬೆಂಬಲಿಗರು ಇದರಿಂದ ಪುಳಕಿತರಾದರೆ, ಮಲಯಾಳಂ ಸೂಪರ್ ಸ್ಟಾರ್ ಮೋಹನ್‍ಲಾಲ್ ಅಭಿಮಾನಿಗಳು, ಅಭಿಪ್ರಾಯ ವ್ಯಕ್ತಪಡಿಸಿ ಮಲಯಾಳಂನ 'ದೃಶ್ಯಂ' ವೀಕ್ಷಿಸುವಂತೆ ನೋಲಾನ್ ಅವರನ್ನು ಆಗ್ರಹಿಸಿದರು. ವಾಸ್ತವವಾಗಿ ಪಾಪನಾಸಂ ಚಿತ್ರ ದೃಶ್ಯಂ ಚಿತ್ರದ ರಿಮೇಕ್ ಚಿತ್ರವಾಗಿದೆ.
ಎರಡೂ ಚಿತ್ರಗಳನ್ನು ಜೀತು ಜೋಸೆಫ್ ನಿರ್ದೇಶಿಸಿದ್ದರು. 

ಎರಡೂ ಚಿತ್ರಗಳನ್ನು ತುಲನೆ ಮಾಡಿದಾಗ, ಮೋಹನ್‍ಲಾಲ್ ಅಭಿನಯ ಕಮಲ್ ಹಾಸನ್‍ಗಿಂತ ಶ್ರೇಷ್ಠ ಎಂದು ಮೋಹನ್‍ಲಾಲ್ ಅಭಿಮಾನಿಗಳು ವಾದಕ್ಕಿಳಿದರು. ಉಭಯ ನಟರ ಅಭಿಮಾನಿಗಳ ನಡುವೆ ವಾಗ್ಯುದ್ಧಕ್ಕೂ ಇದು ಕಾರಣವಾಯಿತು. 

ಕಮಲ್ ಹಾಸನ್ ಅಭಿನಯಕ್ಕಿಂತಲೂ ಮೋಹನ್ ಲಾಲ್ ಅಭಿನಯ ಅದ್ಭುತ ಎಂದು ಮೋಹನ್ ಲಾಲ್ ಅಭಿಮಾನಿಗಳು ವಾದಿಸಿದರೆ, ಕಮಲ್ ಅಭಿಮಾನಿಗಳು ಇದನ್ನು ಒಪ್ಪಲಿಲ್ಲ. ಎರಡೂ ಕಡೆಯವರೂ ತಮ್ಮ ತಮ್ಮ ನೆಚ್ಚಿನ ನಟರ ಅಭಿನಯವೇ ಶ್ರೇಷ್ಟ ಎಂದು ವಾದಿಸತೊಡಗಿದರು. ಈ ಚರ್ಚೆಗಳ ನಡುವೆ ನುಸುಳಿದ ಮಮ್ಮುಟ್ಟಿ ಅಭಿಮಾನಿಗಳು ಕಮಲ್-ಮೋಹನ್ ಲಾಲ್ ಇಬ್ಬರಿಗಿಂತಲೂ ಮಮ್ಮುಟ್ಟಿಯೇ ಶ್ರೇಷ್ಟ ಎಂದು ವಾದಿಸತೊಡಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News