ನಿರೀಕ್ಷೆಗಳನ್ನು ಉಲ್ಟಾ ಮಾಡುವ ಚಿತ್ರ ಗುಳ್ಟು!

Update: 2018-04-01 08:38 GMT

ಗುಳ್ಟು ಎಂಬ ಹೆಸರೇ ಹಲವರಿಗೆ ಇಷ್ಟವಾಗದೇ ಹೋಗಿರಬಹುದು. ಆದರೆ ಲಾಗೌಟ್? ಎನ್ನುವ ಆಂಗ್ಲ ಪದದ ಅಕ್ಷರಗಳನ್ನು ಹಿಂದೆ ಮುಂದೆ ಮಾಡುವ ಮೂಲಕ ಈ ಹೆಸರಿನ ಸೃಷ್ಟಿಯಾಗಿದೆ ಎನ್ನುವಾಗ ಒಂದಷ್ಟು ಕುತೂಹಲ ಸೃಷ್ಟಿಯಾಗುವುದು ಸಹಜ. ಅದೇ ಕುತೂಹಲದೊಂದಿಗೆ ಚಿತ್ರ ಮಂದಿರಕ್ಕೆ ಹೋದರೆ ಸಂತೃಪ್ತ ಮನೋಭಾವದೊಂದಿಗೆ ಎದ್ದು ಬರುವಂಥ ಚಿತ್ರವಾಗಿ ಗಮನ ಸೆಳೆಯುತ್ತದೆ.

ಅನಾಥಾಲಯದಲ್ಲಿ ಬೆಳೆದು ಕಾಲೇಜು ಸೇರಿದ ಬುದ್ಧಿವಂತ ವಿದ್ಯಾರ್ಥಿ ಅಲೋಕ್. ಅಂತರ್ಜಾಲದ ಬಗ್ಗೆ ಆತನಿಗಿರುವ ಅರಿವು ಆತನನ್ನು ಇತರರಿಂದ ವಿಭಿನ್ನವಾಗಿಸುತ್ತದೆ. ಹಾಗಾಗಿಯೇ ಕಲಿತು ಒಂದೆಡೆ ಕೆಲಸ ಮಾಡುವ ಬದಲು ತಾನೇ ಏನಾದರೂ ಸಾಧನೆ ಮಾಡಬೇಕು ಎನ್ನುವ ನಿರ್ಧಾರ ತಳೆಯುತ್ತಾನೆ. ಅದಕ್ಕೆ ಆತನಿಗೆ ಸಾಥ್ ನಿಲ್ಲುವ ಸ್ನೇಹಿತನ ಹೆಸರು ಆಸ್ತಿ. ಆತನಿಗೂ ಸ್ನೇಹಿತನೊಡನೆ ಸೇರಿ ಅಂಬಾನಿಯಂತೆ ಆಗುವ ಕನಸು. ಆದರೆ ಮೂರು ವರ್ಷಗಳ ಬಳಿಕದ ಅವರ ಕತೆಯನ್ನು ತೋರಿಸುವಾಗ ಅಲ್ಲಿ ಅವರು ಕಂಪ್ಯೂಟರ್‌ಗೆ ಸಂಬಂಧಿಸಿದ ಸಣ್ಣ ಪ್ರಮಾಣದ ಉದ್ಯೋಗವನ್ನಷ್ಟೇ ನಡೆಸುತ್ತಿರುತ್ತಾರೆ. ಅದರಲ್ಲಿಯೂ ಆತ ತುಂಬ ನ್ಯಾಯವಂತ ದುಡಿಮೆ ಮಾಡುವವನಂತೆ ಕಾಣಿಸುತ್ತಾನೆ. ಸ್ನೇಹಿತ ಆಸ್ತಿ ಮಾತ್ರ ಸಿಕ್ಕ ಸಿಕ್ಕ ಹುಡುಗಿಯರ ಜೊತೆಗೆ ಫ್ಲರ್ಟ್ ಮಾಡುತ್ತಿರುತ್ತಾನೆ. ಆದರೆ ಅದೊಂದು ದಿನ ಅವರಿಬ್ಬರನ್ನು ಪೊಲೀಸರು ದಿಢೀರ್ ಆಗಿ ಅರೆಸ್ಟ್ ಮಾಡುತ್ತಾರೆ. ಅಲ್ಲಿ ಅವರಿಗೆ ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ನೀಡಿ ವಿಚಾರಣೆ ನಡೆಸಲಾಗುತ್ತದೆ. ಆದರೆ ಅದು ಯಾಕೆ? ಅಂಥ ಅಪರಾಧ ಅವರೇನು ಮಾಡಿದ್ದರು ಎನ್ನುವುದು ಕ್ಲೈಮ್ಯಾಕ್ಸ್‌ನಲ್ಲಿ ರಿವೀಲ್ ಆಗುತ್ತದೆ. ವಿಚಿತ್ರ ಎಂದರೆ ಆ ಅಪರಾಧವೇನು ಎಂಬುದನ್ನು ನಾಯಕನೇ ಹೇಳಿಕೊಂಡರೂ ಕೂಡ ನ್ಯಾಯಾಲಯ ಆತನಿಗೆ ಶಿಕ್ಷೆ ನೀಡುವುದಿಲ್ಲ. ನಿಜಕ್ಕೂ ಕತೆಯೊಳಗೆ ಇಷ್ಟೆಲ್ಲ ತಿರುವುಗಳು ಅದು ಕೂಡ ನಂಬುವ ರೀತಿಯಲ್ಲಿ ಹೇಗೆ ನಡೆಯುತ್ತದೆ ಎನ್ನುವುದನ್ನು ತೋರಿಸುವುದೇ ಗುಳ್ಟುವಿನ ವಿಶೇಷತೆ.

 ಸೈಬರ್ ಕ್ರೈಮ್ ಬಗ್ಗೆ ಇಷ್ಟು ಆಕರ್ಷಕವಾಗಿ ಸಿನೆಮಾ ಮಾಡಬಹುದು ಎನ್ನುವುದನ್ನು ತಮ್ಮ ಪ್ರಥಮ ಚಿತ್ರದಲ್ಲೇ ನಿರ್ದೇಶಕ ಜನಾರ್ದನ್ ಚಿಕ್ಕಣ್ಣ ತೋರಿಸಿ ಕೊಟ್ಟಿದ್ದಾರೆ. ಇದೇನೋ ಸೈಬರ್ ವಿಚಾರದ ಸಿನೆಮಾ ಎಂಬ ಮನಸ್ಥಿತಿಯಲ್ಲಿ ಚಿತ್ರ ಮಂದಿರದೊಳಗೆ ನಿರ್ವಿಕಾರ ಭಾವದಿಂದ ಹೋಗಿ ಕುಳಿತರೆ ಸೈಬರ್‌ನಾಚೆಗಿನ ಕಾಲೇಜು, ವೃತ್ತಿಯಾಚೆಗಿನ ಪ್ರೇಮ ಹೀಗೆ ಹತ್ತು ಹಲವು ಆಕರ್ಷಕ ವಿಚಾರಗಳನ್ನು ಸುಂದರವಾಗಿ ಹೇಳುತ್ತಾ ಹೋಗುತ್ತದೆ ಗುಳ್ಟು. ನಾಯಕ ಅಲೋಕ್ ಪಾತ್ರದಲ್ಲಿ ನವೀನ್ ಶಂಕರ್ ಒಂದೇ ಚಿತ್ರದಲ್ಲಿ ಆಪ್ತವಾಗಿ ಬಿಡುತ್ತಾರೆ. ಆಸ್ತಿ ಪಾತ್ರಧಾರಿ ಸೇರಿದಂತೆ ಪ್ರತಿಯೊಬ್ಬ ಕಲಾವಿದರಿಂದ ನೈಜವಾದ ನಟನೆಯನ್ನು ತೆಗೆದಿರುವುದು ಮತ್ತು ವಾಸ್ತವವೆನಿಸುವ ಮಾದರಿಯನ್ನು, ಸನ್ನಿವೇಶಗಳನ್ನು ಕಟ್ಟಿಕೊಟ್ಟಿರುವ ಕೀರ್ತಿ ನಿರ್ದೇಶಕರಿಗೆ ಸಲ್ಲುತ್ತದೆ. ನಾಯಕಿಯಾಗಿ ಸೋನು ಗೌಡ ಪಾತ್ರಕ್ಕೆ ಸಿಗುವ ತಿರುವು ಮತ್ತು ಸಂಭಾಷಣೆಗಳು ಚಿತ್ರದ ಹೈಲೈಟ್. ಸಂದರ್ಭಕ್ಕೆ ತಕ್ಕಂತೆ ಸಾಗುವ ಮಾತುಕತೆಗಳಲ್ಲಿ ಬೇಕಾದಷ್ಟು ಉಪ್ಪು ಖಾರ ಎಂಬಂತೆ ಪೋಲಿತನವನ್ನು ಕೂಡ ತುಂಬಿಸಲಾಗಿದೆ. ಆದರೆ ಎಲ್ಲವನ್ನೂ ನಿಜವಾದ ಬದುಕಿನಲ್ಲಿ ಕ್ಷಮಿಸುವಂತೆ ನಾವು ಘಟನೆಗಳೊಂದಿಗೆ ಮುಂದೆ ಹೋಗುತ್ತೇವೆ. ಚಿತ್ರದ ಹಿನ್ನೆಲೆ ಸಂಗೀತ ಎಷ್ಟೊಂದು ಸಹಜವಾಗಿದೆ ಎಂದರೆ ಹಿನ್ನೆಲೆ ಸಂಗೀತ ದೃಶ್ಯಗಳ ಜೊತೆಯಲ್ಲೇ ಲೀನವಾಗಿ ಬಿಡುತ್ತದೆ. ಮುಖ್ಯಮಂತ್ರಿಯ ಪಾತ್ರದಲ್ಲಿ ರಂಗಾಯಣ ರಘು ಅಪರೂಪವೆಂಬ ಹಾಗೆ ನೈಜವಾದ ನಟನೆ ನೀಡಿದ್ದಾರೆ. ದೃಶ್ಯಗಳಿಗೆ ಸಂಬಂಧಿಸುವ ಹಾಗೆ ನಿರೂಪಣೆಯನ್ನು ಉದಾಹರಣೆಯೊಂದಿಗೆ ತೋರಿಸುವ ಜಾಣ್ಮೆ ಬಹುಶಃ ರವಿಚಂದ್ರನ್ ಬಳಿಕ ಇಷ್ಟೊಂದು ಚೆನ್ನಾಗಿ ತೋರಿಸಿರುವ ಕೀರ್ತಿಯೂ ನಿರ್ದೇಶಕರಿಗೆ ಸಲ್ಲುತ್ತದೆ. ಮಧ್ಯಂತರದ ಬಳಿಕ ಬರುವ ನಿರ್ದೇಶಕ ಪವನ್ ಕುಮಾರ್ ಕೂಡ ಚಿತ್ರಕ್ಕೆ ಇನ್ನಷ್ಟು ತೂಕ ನೀಡಿದ್ದಾರೆ. ಒಟ್ಟಿನಲ್ಲಿ ಕಾಲಕ್ಕೆ ತಕ್ಕುದಾದ ವಿಚಾರದೊಂದಿಗೆ ಬಂದಿರುವ ಗುಳ್ಟು ಚಿತ್ರವನ್ನು ಖಂಡಿತವಾಗಿ ಕನ್ನಡ ಪ್ರೇಕ್ಷಕರು ತಪ್ಪದೇ ನೋಡಬಹುದು.

ಚಿತ್ರ: ಗುಳ್ಟು
ತಾರಾಗಣ: ನವೀನ್ ಶಂಕರ್, ಸೋನುಗೌಡ
ನಿರ್ದೇಶಕ: ಜನಾರ್ದನ ಚಿಕ್ಕಣ್ಣ
ನಿರ್ಮಾಪಕ: ಪ್ರಶಾಂತ್ ರೆಡ್ಡಿ

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News