×
Ad

ಹಿಂದೂಗಳ ದೇವಸ್ಥಾನಗಳಿಗೆ ಮುಸ್ಲಿಮರು ಬೆಳೆದ ಹೂಗಳು

Update: 2018-04-01 19:49 IST
ಸಾಂದರ್ಭಿಕ ಚಿತ್ರ

ಧನ್‌ಬಾದ್, ಎ.1: ದೇಶದ ಕೆಲವೆಡೆ ಕೋಮುಗಲಭೆ ಪ್ರಕರಣ ಆಗಿಂದಾಗ್ಗೆ ನಡೆಯುತ್ತಿರುವ ಮಧ್ಯೆಯೇ, ಜಾರ್ಖಂಡ್‌ನ ಧನ್‌ಬಾದ್ ಜಿಲ್ಲೆಯ ಚಿಕ್ಕ ಗ್ರಾಮವೊಂದರ ಜನತೆ ಸಮಾಜದಲ್ಲಿ ಪ್ರೀತಿ ಮತ್ತು ಶಾಂತಿಯ ಜೊತೆಗೆ ಕೋಮು ಸೌಹಾರ್ದದ ಭಾವನೆಯನ್ನು ಹರಡುತ್ತಿದ್ದಾರೆ.

  ಧನಬಾದ್ ಜಿಲ್ಲೆಯ ಬಲಿಯಾಪುರ ವಿಭಾಗದಲ್ಲಿರುವ ವಿಖ್‌ರಾಜ್‌ಪುರ ಎಂಬ ಹಳ್ಳಿಯಲ್ಲಿ ಸುಮಾರು 40 ಮುಸ್ಲಿಮ್ ಕುಟುಂಬಗಳಿವೆ. ಕಳೆದ ನಾಲ್ಕು ದಶಕಗಳಿಂದ ಈ ಕುಟುಂಬಗಳು ಜಿಲ್ಲೆಯ ಸುತ್ತಮುತ್ತಲಿನ ದೇವಸ್ಥಾನಗಳಲ್ಲಿ ದೇವರಿಗೆ ಅರ್ಪಿಸಲು ಬಳಕೆಯಾಗುವ ಹೂಗಳನ್ನು ತಮ್ಮ ಜಮೀನಿನಲ್ಲಿ ಬೆಳೆಯುವ ಕಾರ್ಯವನ್ನು ನಡೆಸಿಕೊಂಡು ಬರುತ್ತಿವೆ. ಅಲ್ಲದೆ ರಾಮನವಮಿ, ದುರ್ಗಾ ಪೂಜೆಯಂತಹ ಶುಭ ದಿನಗಳಲ್ಲಿ ಕೆಲವೊಮ್ಮೆ ಈ ಕೃಷಿಕರು ದೇವಸ್ಥಾನಗಳನ್ನು ಹೂವಿನಿಂದ ಅಲಂಕರಿಸುವ ಕೆಲಸವನ್ನೂ ಉಚಿತವಾಗಿ ನಿರ್ವಹಿಸುತ್ತಾರೆ.

ನಮ್ಮ ಜಮೀನಿನಲ್ಲಿ ಬೆಳೆಯುವ ಹೂಗಳನ್ನು ಝರಿಯಾ ಉಪನಗರದಲ್ಲಿರುವ ವ್ಯಾಪಾರಿಗೆ ಸರಬರಾಜು ಮಾಡುತ್ತೇವೆ. ಆತ ಅದನ್ನು ಸುತ್ತಮುತ್ತಲಿನ ವಿವಿಧ ದೇವಸ್ಥಾನಗಳಿಗೆ ತಲುಪಿಸುತ್ತಾನೆ. ನಮ್ಮ ಹಳ್ಳಿಯಲ್ಲಿರುವ ಹೆಚ್ಚಿನ ಕುಟುಂಬಗಳು ಪುಷ್ಪಕೃಷಿಯನ್ನೇ ಜೀವನೋಪಾಯವಾಗಿ ಮಾಡಿಕೊಂಡಿದೆ ಎನ್ನುತ್ತಾರೆ ಕೃಷಿಕ ಶೇಖ್ ಶಂಸುದ್ದೀನ್ ಎಂಬವರು.

 ವಿಖ್‌ರಾಜಪುರ ಗ್ರಾಮದ ಕೃಷಿಕರು ಹಬ್ಬ, ಉತ್ಸವದ ಸಂದರ್ಭದಲ್ಲಿ ಹೂಮಾಲೆಗಳನ್ನು ನಿರಂತರವಾಗಿ ಪೂರೈಸುತ್ತಾ ಬಂದಿದ್ದಾರೆ. ಕೋಮು ಉದ್ವಿಗ್ನತೆಯ ಪರಿಸ್ಥಿತಿಯಲ್ಲೂ ಇವರು ಜವಾಬ್ದಾರಿ ನಿರ್ವಹಿಸಿದ್ದಾರೆ. ಅವರ ಕೊಡುಗೆಗೆ ವಿವಿಧ ರೀತಿಯಲ್ಲಿ ಪ್ರತಿಫಲ ನೀಡಲು ದೇವಸ್ಥಾನದ ಸಮಿತಿ ಪ್ರಯತ್ನಿಸಿದೆ ಎಂದು ಝರಿಯಾದ ಕಾಳಿ ದೇವಸ್ಥಾನದ ಅರ್ಚಕ ದಯಾಶಂಕರ್ ದುಬೆ ಹೇಳಿದ್ದಾರೆ. ಈ ಕೆಲಸ ಬಿಟ್ಟು ತರಕಾರಿ , ಹಣ್ಣುಹಂಪಲು ಮಾರಾಟದಂತಹ ಲಾಭದಾಯಕ ಉದ್ಯೋಗ ನಿರ್ವಹಿಸಬೇಕೆಂದು ಕೆಲವರಿಂದ ಒತ್ತಡ ಬರುತ್ತಿದೆ. ಆದರೆ ಗ್ರಾಮಸ್ಥರಿಗೆ ಪುಷ್ಪಕೃಷಿಯತ್ತ ಭಾವನಾತ್ಮಕ ನಂಟು ಬೆಳೆದಿದೆ ಎಂದು ಸ್ಥಳೀಯರಾದ ಅನ್ವರ್ ಅಲಿ ಎಂಬವರು ಹೇಳಿದ್ದಾರೆ. ಆದರೆ ಈ ಕೆಲಸದಿಂದ ಬರುವ ಆದಾಯ ಸಂಸಾರ ನಿರ್ವಹಣೆಗೆ ಸಾಕಾಗದು. ಅಲ್ಲದೆ ಹೂಗಳು ವರ್ಷವಿಡೀ ಅರಳುವುದಿಲ್ಲ. ಆದ್ದರಿಂದ ಉಪಕಸುಬು ಹುಡುಕುತ್ತಿದ್ದೇವೆ ಎಂದು ಅಲಿ ಹೇಳುತ್ತಾರೆ. ಸರಿಯಾದ ನೀರಾವರಿ ವ್ಯವಸ್ಥೆ ಇದ್ದರೆ ರಾಜ್ಯದ ಎಲ್ಲಾ ದೇವಸ್ಥಾನಗಳಿಗೆ ಇಲ್ಲಿನ ಕೃಷಿಕರು ಹೂಗಳನ್ನು ಪೂರೈಸಲು ಸಾಧ್ಯವಿದೆ. ಕಳೆದ 10 ವರ್ಷಗಳಲ್ಲಿ ಐದು ಬಾರಿ ನಮ್ಮ ಗ್ರಾಮಕ್ಕೆ ಭೇಟಿ ನೀಡಿರುವ ಸರಕಾರಿ ಅಧಿಕಾರಿಗಳು ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡಿ ತೆರಳಿದ್ದಾರೆ. ಆದರೆ ಬಳಿಕ ಅದನ್ನು ಮರೆತುಬಿಟ್ಟಿದ್ದಾರೆ ಎಂದು ಎರಡು ದಶಕಕ್ಕೂ ಹೆಚ್ಚು ವರ್ಷಗಳಿಂದ ಪುಷ್ಪಕೃಷಿಯಲ್ಲಿ ತೊಡಗಿಸಿಕೊಂಡಿರುವ ಶೌಕತ್ ಅಲಿ ಎಂಬವರು ಹೇಳಿದ್ದಾರೆ.

 ಕೃಷಿಕರ ಮಾತಿಗೆ ಧ್ವನಿಗೂಡಿಸಿರುವ ಸಾಮಾಜಿಕ ಕಾರ್ಯಕರ್ತ ಅನ್ವರ್ ಅಲಿ ಖಾನ್ , ಕೃಷಿಕರು ಕ್ಷೇತ್ರ ಅಭಿವೃದ್ಧಿ ಅಧಿಕಾರಿ(ಬಿಡಿಒ) ಕುಂದನ್ ಭಗತ್ ಹಾಗೂ ಮಾಜಿ ಉಪ ಆಯುಕ್ತ ಅಜಯ್ ಕುಮಾರ್ ಸಿಂಗ್‌ರನ್ನು ಈ ಹಿಂದೆ ಹಲವಾರು ಬಾರಿ ಭೇಟಿಯಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದ್ದಾರೆ. ಆದರೆ ಯಾವ ರೈತರು ತಮ್ಮನ್ನು ಇದುವರೆಗೂ ಸಂಪರ್ಕಿಸಿಲ್ಲ . ಪುಷ್ಪಕೃಷಿಕರ ಬಗ್ಗೆ ಇತ್ತೀಚೆಗೆ ಕೆಲವರು ಮಾಹಿತಿ ನೀಡಿದ್ದಾರೆ. ಅವರ ಸಮಸ್ಯೆ ಬಗ್ಗೆ ಗಮನ ಹರಿಸುತ್ತೇನೆ ಎಂದು ಕಳೆದ ವಾರವಷ್ಟೇ ಅಧಿಕಾರ ಸ್ವೀಕರಿಸಿರುವ ಬಲಿಯಾಪುರ್ ಕ್ಷೇತ್ರಾಭಿವೃದ್ಧಿ ಅಧಿಕಾರಿ ಧೀರಜ್ ಪ್ರಕಾಶ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News