ಕಾವೇರಿ ವಿವಾದ: ಎ. 5ರಂದು ತಮಿಳುನಾಡು ಬಂದ್‌ಗೆ ಡಿಎಂಕೆ, ಇತರ ಪಕ್ಷಗಳಿಂದ ಕರೆ
ಚೆನ್ನೈ, ಎ.1: ಕಾವೇರಿ ಜಲ ವಿವಾದ ಮಂಡಳಿಯ ಅಂತಿಮ ಆದೇಶವನ್ನು ಅನುಷ್ಠಾನಕ್ಕೆ ತರಲು ಕಾವೇರಿ ವ್ಯವಸ್ಥಾಪನಾ ಮಂಡಳಿ ಮತ್ತು ಕಾವೇರಿ ಜಲ ನಿಯಂತ್ರಣ ಸಮಿತಿಯನ್ನು ರಚಿಸಬೇಕೆಂದು ಪಟ್ಟು ಹಿಡಿದಿರುವ ತಮಿಳುನಾಡಿನಲ್ಲಿ ಕೇಂದ್ರ ಸರಕಾರದ ಧೋರಣೆಯ ವಿರುದ್ಧ ಎಪ್ರಿಲ್ 5ರಂದು ರಾಜ್ಯವ್ಯಾಪಿ ಬಂದ್‌ಗೆ ಡಿಎಂಕೆ ಹಾಗೂ ಇತರ ಪಕ್ಷಗಳು ಕರೆ ನೀಡಿವೆ.
ವಿರೋಧ ಪಕ್ಷಗಳ ಸಭೆಯಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನಾಸೂಚಕವಾಗಿ ಒಂದು ದಿನದ ರಾಜ್ಯವ್ಯಾಪಿ ಬಂದ್ ಆಚರಿಸಲು ನಿರ್ಧರಿಸಲಾಗಿದೆ. ಈ ಸಭೆಯ ಅಧ್ಯಕ್ಷತೆಯನ್ನು ಡಿಎಂಕೆ ಅಧ್ಯಕ್ಷ ಮತ್ತು ವಿಪಕ್ಷ ನಾಯಕ ಎಂ.ಕೆ ಸ್ಟಾಲಿನ್ ವಹಿಸಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ತಮಿಳುನಾಡಿನ ಪ್ರಮುಖ ರಾಜಕೀಯ ನಾಯಕರಾದ ಎಸ್. ತಿರುನವುಕ್ಕರಸರ್ (ಕಾಂಗ್ರೆಸ್), ತಿರುಮಾವಲವನ್ (ವಿಸಿಕೆ), ಕೆ.ಬಾಲಕೃಷ್ಣನ್ (ಸಿಪಿಎಂ), ಆರ್.ಮುತರಸನ್ (ಸಿಪಿಐ) ಮತ್ತು ಕೆ.ವೀರಮಣಿ (ಡಿಕೆ) ಸೇರಿದಂತೆ ಹಲವರು ಈ ಸಭೆಯಲ್ಲಿ ಭಾಗಿಯಾಗಿದ್ದರು. ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ ಕಾವೇರಿ ವ್ಯವಸ್ಥಾಪನಾ ಮಂಡಳಿ ರಚಿಸಲು ವಿಫಲವಾದ ಕೇಂದ್ರ ಸರಕಾರವನ್ನು ಈ ವೇಳೆ ಎಲ್ಲರೂ ತೀವ್ರವಾಗಿ ಟೀಕಿಸಿದರು.
ಎಪ್ರಿಲ್ 2ರಂದು ಬಂದ್ ಆಚರಣೆ ವೇಳೆ ರೈಲ್ ರೋಕೊ, ರೋಡ್ ರೋಕೊ ಎಲ್ಲವೂ ನಡೆಯಲಿದೆ ಎಂದು ಸ್ಟಾಲಿನ್ ತಿಳಿಸಿದ್ದಾರೆ. ಇದೇ ವೇಳೆ ವಿಪಕ್ಷಗಳು ಕಾವೇರಿ ಹಕ್ಕುಗಳ ಮರುಪಡೆಯುವಿಕೆ ಜಾಥಾವನ್ನು ನಡೆಸಲು ಉದ್ದೇಶಿಸಿದ್ದು ಕಾವೇರಿ ಮುಖಜಭೂಮಿಯಿಂದ ಚೆನ್ನೈಯ ರಾಜ ಭವನದ ವರೆಗೆ ಮೆರವಣಿಗೆ ನಡೆಸುವುದಾಗಿ ತಿಳಿಸಿದ್ದಾರೆ.