ಗಲಭೆಗೆ ಪ್ರಚೋದನೆ ಆರೋಪ: ಕೇಂದ್ರ ಸಚಿವ ಅಶ್ವಿನಿ ಚೌಬೆ ಪುತ್ರನ ಬಂಧನ

Update: 2018-04-01 14:48 GMT

ಪಾಟ್ನಾ, ಎ.1: ಬಿಹಾರದ ಭಾಗಲ್ಪುರ ಪಟ್ಟಣದಲ್ಲಿ ಎರಡು ವಾರ ಹಿಂದೆ ನಡೆದ ಕೋಮುಸಂಘರ್ಷದ ಸಂಬಂಧ ಕೇಂದ್ರ ಸಚಿವ ಅಶ್ವಿನಿ ಚೌಬೆ ಪುತ್ರ ಆರ್ಜಿತ್ ಶಾಶ್ವತ್‍ನನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ.

ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಈತನನ್ನು ಬಂಧಿಸಲಾಗಿದೆ. ಭಾಗಲ್ಪುರದಲ್ಲಿ ಮಾರ್ಚ್ 17ರಂದು ಅನುಮತಿ ಇಲ್ಲದೇ ರಾಮನವಮಿ ಮೆರವಣಿಗೆ ನಡೆಸಿದ ಆರೋಪವೂ ಈತನ ಮೇಲಿದೆ. ಜತೆಗೆ ಮೆರವಣಿಗೆ ವೇಳೆ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿದ್ದು, ಕೋಮುಸಂಘರ್ಷಕ್ಕೆ ಕಾರಣವಾಗಿತ್ತು ಎಂದು ಆಪಾದಿಸಲಾಗಿದೆ. ರಾಜ್ಯದ ಇತರ ಕಡೆಗಳಿಗೂ ಹಿಂಸಾಚಾರ ಹಬ್ಬಿದ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ನಿತೀಶ್ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದರು.

ನಿರೀಕ್ಷಣಾ ಜಾಮೀನು ಕೋರಿ ಆರ್ಜಿತ್ ಸಲ್ಲಿಸಿದ್ದ ಅರ್ಜಿಯನ್ನು ಶನಿವಾರ ಭಾಗಲ್ಪುರ ನ್ಯಾಯಾಲಯ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯರಾತ್ರಿ ಬಳಿಕ ಕಾರ್ಯಾಚರಣೆ ಕೈಗೊಂಡು, ಮುಖ್ಯಮಂತ್ರಿ ನಿವಾಸಕ್ಕಿಂತ 300 ಮೀಟರ್ ದೂರದಲ್ಲಿ ವಶಕ್ಕೆ ಪಡೆದರು. ಘಟನೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತವನ್ನು ಟೀಕಿಸಿ ಹೇಳಿಕೆಗಳನ್ನು ನೀಡುತ್ತಿದ್ದ ಊರ್ಜಿತ್ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದರು.

"ನ್ಯಾಯಾಲಯ ಆದೇಶದ ಹಿನ್ನೆಲೆಯಲ್ಲಿ ನಾನು ಪೊಲೀಸರಿಗೆ ಶರಣಾಗಿದ್ದೇನೆ. ಬಂಧನವನ್ನು ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವುದಾಗಿ ವದಂತಿ ಹಬ್ಬಿಸಲಾಗಿತ್ತು. ನಾನು ಯಾವ ಅಪರಾಧವನ್ನೂ ಎಸಗಿಲ್ಲ ಹಾಗೂ ತಲೆ ಮರೆಸಿಕೊಂಡಿಲ್ಲ. ಭಾರತಮಾತೆ ಮತ್ತು ಶ್ರೀರಾಮನ ಪರ ಘೋಷಣೆ ಕೂಗುವುದು ಅಪರಾಧವಾದರೆ, ನನ್ನನ್ನು ಅಪರಾಧಿ ಎಂದು ಕರೆಯಲಿ" ಎಂದು ಶಾಶ್ವತ್ ಹೇಳಿದರು. ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಗುರಿಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News