ಉ.ಪ್ರದೇಶ: ಮೇಲ್ಜಾತಿಯವರ ಪ್ರದೇಶದಲ್ಲಿ ದಲಿತ ಯುವಕನ ವಿವಾಹ ಮೆರವಣಿಗೆಗೆ ಅವಕಾಶವಿಲ್ಲ
ಲಕ್ನೋ, ಎ.1: ಪಶ್ಚಿಮ ಉತ್ತರಪ್ರದೇಶದ ಹತ್ರಾಸ್ ಜಿಲ್ಲೆಯ ಬಸಾಯ್ ಬಬಾಸ್ ಗ್ರಾಮದ ದಲಿತ ಯುವಕನೊಬ್ಬನ ವಿವಾಹ ಮೆರವಣಿಗೆಯನ್ನು ಠಾಕೂರ್ ಪ್ರಾಬಲ್ಯದ ಪ್ರದೇಶದಲ್ಲಿ ಒಯ್ಯಲು ಅವಕಾಶ ನಿರಾಕರಿಸಿದ ಘಟನೆ ನಡೆದಿದೆ.
ಮುಖ್ಯಮಂತ್ರಿ ಆದಿತ್ಯನಾಥ್ ಸೇರಿದಂತೆ ಸರ್ಕಾರದ ಎಲ್ಲ ಅಧಿಕಾರಿಗಳಿಗೆ ಪತ್ರ ಬರೆದಿರುವ ದಲಿತ ಯುವಕ, ಇದೀಗ ನೆರವಿಗಾಗಿ ಮಾಧ್ಯಮದ ಮೊರೆ ಹೋಗಿದ್ದಾರೆ. ಠಾಕೂರ್ ಪ್ರಾಬಲ್ಯದ ಪ್ರದೇಶದಲ್ಲಿ ತನ್ನ ವಿವಾಹ ಮೆರವಣಿಗೆಯನ್ನು ನಡೆಸಲು ಅನುಮತಿ ನೀಡುವಂತೆ ಕೋರಿದ್ದರೂ, ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ.
ವಿವಾಹಕ್ಕೆ 20 ದಿನ ಬಾಕಿ ಇದ್ದು ಸರ್ಕಾರದ ಕಡೆಯಿಂದ ಯಾವ ಸ್ಪಂದನೆಯೂ ದೊರಕಿಲ್ಲ. ಕುಮಾರ್ ಇದೀಗ ಸರ್ಕಾರವನ್ನು ತನ್ನ ಸಂವಿಧಾನಾತ್ಮಕ ಹಕ್ಕುಗಳ ಬಗ್ಗೆ ಪ್ರಶ್ನಿಸಿದ್ದಾರೆ. "ನಾನು ಹಿಂದೂ ಅಲ್ಲವೇ? ಹೌದಾದರೆ ಹಿಂದುತ್ವ ಸರ್ಕಾರದ ಆಡಳಿತದಲ್ಲಿ ಇತರ ಹಿಂದೂಗಳಿಗೆ ನೀಡುವ ಹಕ್ಕನ್ನು ನನಗೇಕೆ ನೀಡುವುದಿಲ್ಲ?" ಎಂದು ಪ್ರಶ್ನಿಸಿದ್ದಾರೆ.
ತಾಲೂಕು ಅಭಿವೃದ್ಧಿ ಮಂಡಳಿ ಸದಸ್ಯರೂ ಆಗಿರುವ ಕುಮಾರ್, "ನಾನು ಹಾಗಾದರೆ ಹಿಂದೂ ಅಲ್ಲವೇ.. ಒಂದೇ ಸಂವಿಧಾನದಡಿ ಜೀವಿಸುವ ಜನರಿಗೆ ಪ್ರತ್ಯೇಕ ನಿಯಮಾವಳಿ ಸಾಧ್ಯವಿಲ್ಲ" ಎಂದು ಪ್ರತಿಪಾದಿಸಿದ್ದಾರೆ.
ಮಾರ್ಚ್ 15ರಂದು ಕುಮಾರ್, ನ್ಯಾಯ ಕೋರಿ ಅಲಹಾಬಾದ್ ಹೈಕೋರ್ಟ್‍ನಲ್ಲಿ ಮನವಿ ಸಲ್ಲಿಸಿದ್ದರು. ಇದಾದ ಬಳಿಕ ಕಾಸ್‍ಗಂಜ್ ಜಿಲ್ಲಾಧಿಕಾರಿ ಆರ್.ಪಿ.ಸಿಂಗ್ ಹಾಗೂ ಪೊಲೀಸ್ ಅಧೀಕ್ಷಕ ಪಿಯೂಶ್ ಶ್ರೀವಾಸ್ತವ, ನಿಜಾಮಾಬಾದ್‍ಗೆ ಭೇಟಿ ನೀಡಿದ್ದರು. ಕುಮಾರ್ ವಿವಾಹ ಮೆರವಣಿಗೆಗೆ ಅನುಮತಿ ಕೋರಿರುವ ಮಾರ್ಗವನ್ನು ಪರಿಶೀಲಿಸಿದ್ದರು.
ಅನುಮತಿ ಕೋರಿರುವ ರಸ್ತೆ ಅಗಲ ಕಿರಿದಾಗಿದ್ದು, ಚರಂಡಿ ಹಾಗೂ ಕಸದ ರಾಶಿಯಿಂದ ತುಂಬಿದೆ ಆದ್ದರಿಂದ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಸಿಂಗ್ ಹೇಳಿದ್ದರು. ಜತೆಗೆ ಈ ಹಿಂದೆ ಈ ಮಾರ್ಗವಾಗಿ ಯಾವ ದಲಿತರ ವಿವಾಹ ಮೆರವಣಿಗೆಯೂ ನಡೆದಿಲ್ಲ ಎಂದು ಪ್ರತಿಪಾದಿಸಿದ್ದರು. ಬಳಿಕ ಇತರ ದಲಿತರು ಮೆರವಣಿಗೆ ಕೈಗೊಳ್ಳುವ ಮಾರ್ಗದಲ್ಲೇ ಮೆರವಣಿಗೆ ನಡೆಸುವಂತೆ ಸಲಹೆ ಮಾಡಿದ್ದರು.