"ನಾನು ಪ್ರೀತಿಸುತ್ತಿರುವ ಕಾರಣ ಪರೀಕ್ಷೆಗೆ ಸಿದ್ಧತೆ ನಡೆಸಿಲ್ಲ..."
ಮುಝಫ್ಫರ್ ನಗರ, ಎ.1: "ನಾನು ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿರುವ ಕಾರಣದಿಂದ ಪರೀಕ್ಷೆಗೆ ಸಿದ್ಧತೆ ನಡೆಸಲು ಸಾಧ್ಯವಾಗಲಿಲ್ಲ", "ಜೀವನದಲ್ಲಿ ತಂದೆಯ ಅಗಲುವಿಕೆಯಿಂದ ದುಃಖವಾಗಿದೆ"... ಹೀಗೆ ಹಲವು ಸ್ವಾರಸ್ಯಕರ ಕಾರಣಗಳನ್ನು ಉತ್ತರ ಪ್ರದೇಶ ಬೋರ್ಡ್ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿಗಳು ದಾಖಲಿಸಿರುವ ಸ್ವಾರಸ್ಯಕರ ಪ್ರಕರಣ ಬೆಳಕಿಗೆ ಬಂದಿದೆ.
ಉತ್ತರ ಪತ್ರಿಕೆ ಜತೆಗೆ ನೋಟು ಇಟ್ಟದ್ದೂ ಸೇರಿದಂತೆ ಊಹೆಗೂ ನಿಲುಕದ ಹಲವು ನಾಟಕೀಯ ಪ್ರಸಂಗಗಳು ಉತ್ತರ ಪತ್ರಿಕೆಗಳಲ್ಲಿ ದಾಖಲಾಗಿರುವುದು ಮೌಲ್ಯಮಾಪಕರಲ್ಲಿ ಅಚ್ಚರಿ ಮೂಡಿಸಿದೆ.
"ನನ್ನ ಪೂಜಾಳನ್ನು ನಾನು ಪ್ರೀತಿಸುತ್ತೇನೆ" ಎಂದು ಇಂಟರ್‍ಮೀಡಿಯೇಟ್ ಪರೀಕ್ಷೆಯ ರಸಾಯನಶಾಸ್ತ್ರ ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿಯೊಬ್ಬ ದಾಖಲಿಸಿದ್ದಾನೆ. (ಈ ಪ್ರೀತಿ ವಿಚಿತ್ರ. ನಾನು ಜೀವಿಸಲಾರೆ ಅಥವಾ ನನ್ನನ್ನು ಸಾಯಲೂ ಅದು ಬಿಡುವುದಿಲ್ಲ. ಈ ಪ್ರೇಮ ಪ್ರಕರಣ ನನಗೆ ಪರೀಕ್ಷೆಗೆ ಓದಲು ಅಥವಾ ಇನ್ನೇನೂ ಮಾಡಲೂ ಅವಕಾಶ ನೀಡಿಲ್ಲ" ಎಂದು ಆತ ಗೋಗರೆದಿದ್ದಾನೆ. ಹೃದಯಕ್ಕೆ ಬಾಣ ನಾಟಿರುವ ಚಿತ್ರವನ್ನು ಹೊರತುಪಡಿಸಿ ಉತ್ತರಪತ್ರಿಕೆ ಖಾಲಿ!
"ಇಂಥ ವಿಚಿತ್ರ ಬರಹಗಳಿರುವ ಹಾಗೂ ಉತ್ತರ ಪತ್ರಿಕೆ ಜತೆ ನೋಟು ಪಿನ್ ಮಾಡಿರುವ ಪ್ರಕರಣಗಳೂ ಕಂಡುಬಂದಿವೆ" ಎಂದು ಮುಝಫ್ಫರ್ ನಗರ ಜಿಲ್ಲಾ ಶಾಲಾ ಅಧೀಕ್ಷಕ ಮುನೇಶ್ ಕುಮಾರ್ ಹೇಳಿದ್ದಾರೆ. "ನನ್ನ ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಮುನ್ನ ನನ್ನ ಶುಭಾಶಯ ಸ್ವೀಕರಿಸಿ. ನನ್ನನ್ನು ದಯವಿಟ್ಟು ಉತ್ತೀರ್ಣಗೊಳಿಸಿ. ಓ ಪತ್ರವೇ ಶಿಕ್ಷಕನತ್ತ ಹಾರು; ಉತ್ತೀರ್ಣನಾಗಿಸುವುದು, ಅನುತ್ತೀರ್ಣನಾಗಿಸುವುದು ಅವರಿಗೆ ಬಿಟ್ಟದ್ದು" ಎಂದು ಇನ್ನೊಂದು ಉತ್ತರ ಪತ್ರಿಕೆಯಲ್ಲಿ ಬರೆಯಲಾಗಿದೆ.
ಮತ್ತೊಬ್ಬ ವಿದ್ಯಾರ್ಥಿ ಭಾವನಾತ್ಮಕವಾಗಿ, "ನಾನು ತಾಯಿಯನ್ನು ಕಳೆದುಕೊಂಡಿದ್ದೇನೆ. ನಾನು ಅನುತ್ತೀರ್ಣನಾದರೆ ತಂದೆ ನನ್ನನ್ನು ಕೊಲ್ಲುತ್ತಾರೆ" ಎಂದು ಅಂಗಲಾಚಿದ್ದಾನೆ. ಮತ್ತೊಬ್ಬ ವಿದ್ಯಾರ್ಥಿ ಅನುತ್ತೀರ್ಣನಾದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ.