ಗುಜರಾತ್: ಸರಕಾರಿ ಕಂಪೆನಿಯ ಭೂಸ್ವಾಧೀನ ವಿರುದ್ಧ ಪ್ರತಿಭಟನೆ

Update: 2018-04-01 15:42 GMT

ಅಹ್ಮದಾಬಾದ್,ಎ.1: ಗುಜರಾತ್ ಸರಕಾರಿ ಸ್ವಾಮ್ಯದ ಗುಜರಾತ್ ಪವರ್ ಕಾರ್ಪೊರೇಷನ್ ಲಿ.(ಜಿಪಿಸಿಎಲ್) ತನ್ನ ಉದ್ದೇಶಿತ ಲಿಗ್ನೈಟ್ ಸ್ಥಾವರದ ಸ್ಥಾಪನೆಗಾಗಿ ರವಿವಾರ ಭಾವನಗರ ಜಿಲ್ಲೆಯಲ್ಲಿ ಭೂಮಿಯನ್ನು ವಶಪಡಿಕೊಳ್ಳಲು ಪ್ರಯತ್ನಿಸಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸಾವಿರಾರು ರೈತರು ಈ ಕ್ರಮವನ್ನು ಪ್ರತಿರೋಧಿಸಿದರು. 10 ಮಹಿಳೆಯರು ಸೇರಿದಂತೆ ಸುಮಾರು 50 ರೈತರನ್ನು ಪೊಲೀಸರು ಬಂಧಿಸಿದ್ದಾರೆ.

ಶಾಂತಿಯುತವಾಗಿ ಪ್ರತಿಭಟನೆಯನ್ನು ನಡೆಸುತ್ತಿದ್ದ ರೈತರ ಮೆಲೆ ಹಲ್ಲೆ ನಡೆಸುವ ಮೂಲಕ ಪೊಲೀಸರು ದೌರ್ಜನ್ಯ ವೆಸಗಿದ್ದಾರೆ. ಪೊಲೀಸರ ಹಲ್ಲೆಯಿಂದ ಕನಿಷ್ಠ ಐವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ರೈತನಾಯಕ ನರೇಂದ್ರಸಿಂಹ ಗೋಹಿಲ್‌ಅವರು ಆರೋಪಿಸಿರು.

ಜಿಪಿಸಿಎಲ್ ಎರಡು ದಶಕಗಳ ಹಿಂದೆ ಲಿಗ್ನೈಟ್ ಸ್ಥಾವರದ ಸ್ಥಾಪನೆಗಾಗಿ ಭಾವನಗರ ಜಿಲ್ಲೆ ಘೋಘಾ ತಾಲೂಕಿನ 12 ಗ್ರಾಮಗಳಲ್ಲಿಯ ಸುಮಾರು 1,250 ರೈತರಿಗೆ ಸೇರಿದ 3,377 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಆದರೆ ಈವರೆಗೂ ಭೂಮಿ ರೈತರ ವಶದಲ್ಲಿಯೇ ಇದ್ದು, ಅವರು ಕೃಷಿಕಾರ್ಯ ನಡೆಸುತ್ತಿದ್ದರು.

ಕಂಪನಿಯು ಭೂಮಿಯನ್ನು ವಶಪಡಿಸಿಕೊಳ್ಳುವ ತನ್ನ ಕಾರ್ಯಕ್ಕೆ ಪೊಲೀಸ್ ರಕ್ಷಣೆಯನ್ನು ಕೋರಿತ್ತು. ಈ ಸಂದರ್ಭ ಬಾಡಿ ಗ್ರಾಮದಲ್ಲಿ ಘರ್ಷಣೆಗಳು ನಡೆದಿದ್ದು, ಪ್ರತಿಭಟನಾ ಕಾರರನ್ನು ಚದುರಿಸಲು ಅಶ್ರುವಾಯು ಪ್ರಯೋಗ ಮತ್ತು ಲಾಠಿ ಪ್ರಹಾರವನ್ನು ನಡೆಸಬೇಕಾಯಿತು. ಸುಮಾರು 50 ಜನರನ್ನು ಬಂಧಿಸಲಾಗಿದೆ ಎಂದು ಭಾವನಗರ ಎಸ್ಪಿ ದೀಪಂಕರ್ ತ್ರಿವೇದಿ ಅವರು ಸುದ್ದಿಗಾರರಿಗೆ ತಿಳಿಸಿದರು.

  ಭೂ ಸ್ವಾಧೀನ ಕಾಯ್ದೆ-2013ರಡಿ ವಿವಾದಿತ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಕಂಪನಿಯು ಹೊಸದಾಗಿ ಪ್ರಕ್ರಿಯೆಯನ್ನು ನಡೆಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಈ ಬಗ್ಗೆ ಅವರು ಗುಜರಾತ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನೂ ಸಲ್ಲಿಸಿದ್ದರು. ಈ ಹಿಂದೆಯೂ ಎರಡು ಬಾರಿ ಭೂಮಿಯನ್ನು ವಶಪಡಿಸಿಕೊಳ್ಳುವ ಕಂಪನಿಯ ಪ್ರಯತ್ನವನ್ನು ರೈತರು ಪ್ರತಿರೋಧಿಸಿದ್ದರು.

ಭೂ ಸ್ವಾಧೀನ ಕಾಯ್ದೆ-2013ರಂತೆ ಯಾವುದೇ ಕಂಪನಿಯು ಸ್ವಾಧಿನ ಪಡಿಸಿಕೊಂಡ ಭೂಮಿಯನ್ನು ಐದು ವರ್ಷಗಳಿಗೂ ಹೆಚ್ಚಿನ ಅವಧಿಗೆ ತನ್ನ ವಶಕ್ಕೆ ತೆಗೆದುಕೊಳ್ಳದಿದ್ದರೆ ಹೊಸದಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಗೊಳ್ಳಬೇಕಾಗುತ್ತದೆ.

 ಉಚ್ಚ ನ್ಯಾಯಾಲಯವು ರೈತರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿದೆ. ಆದರೆ ಭೂಸ್ವಾಧೀನ ವಿಷಯದಲ್ಲಿ ನೀಡಲಾಗಿರುವ ವಿಭಿನ್ನ ತೀರ್ಪುಗಳನ್ನು ತನ್ನ ಸಂವಿಧಾನ ಪೀಠವು ಇತ್ಯರ್ಥಗೊಳಿಸುವವರೆಗೆ ಯಾವುದೇ ಆದೇಶವನ್ನು ಹೊರಡಿಸದಂತೆ ಸರ್ವೋಚ್ಚ ನ್ಯಾಯಾಲಯವು ಇತ್ತೀಚಿಗೆ ನ್ಯಾಯಾಲಯಗಳಿಗೆ ಸೂಚಿಸಿದೆ ಎಂದು ರೈತರ ಪರ ವಕೀಲ ಆನಂದ ಯಾಜ್ನಿಕ್ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News