ತಮ್ಮನ್ನು ರಾಜ್ಯಸಭೆಗೆ ಆಯ್ಕೆ ಮಾಡಿದ್ದನ್ನು ಟೀಕಿಸಿದವರಿಗೆ ಹೀಗೆ ತಿರುಗೇಟು ಕೊಟ್ಟರೇ ಸಚಿನ್?

Update: 2018-04-01 15:51 GMT

ಹೊಸದಿಲ್ಲಿ,ಎ.1: ಇತ್ತೀಚಿಗಷ್ಟೇ ತನ್ನ ರಾಜ್ಯಸಭಾ ಸದಸ್ಯತ್ವ ದಿಂದ ನಿವೃತ್ತರಾಗಿರುವ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರು ತನ್ನ ಆರು ವರ್ಷಗಳ ಅಧಿಕಾರಾವಧಿಯಲ್ಲಿ ವೇತನ ಮತ್ತು ಭತ್ಯೆಗಳ ರೂಪದಲ್ಲಿ ಸ್ವೀಕರಿಸಿದ್ದ ಸುಮಾರು 90 ಲಕ್ಷ ರೂ.ಗಳನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆಯನ್ನಾಗಿ ನೀಡಿದ್ದಾರೆ.

 ತೆಂಡೂಲ್ಕರ್ ಅವರನ್ನು ಪ್ರಶಂಸಿಸಿ ಅವರಿಗೆ ತನ್ನ ಕೃತಜ್ಞತೆಗಳನ್ನು ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ ಯವರು, ಈ ಹಣವು ಸಂಕಷ್ಟದಲ್ಲಿರುವ ಜನರಿಗೆ ನೆರವು ಒದಗಿಸಲು ಉಪಯುಕ್ತವಾಗಲಿದೆ ಎಂದು ಹೇಳಿದ್ದಾರೆ.

ಬಾಲಿವುಡ್ ನಟಿ ರೇಖಾ ಅವರೂ ತೆಂಡೂಲ್ಕರ್ ಜೊತೆ ರಾಜ್ಯಸಭಾ ಸದಸ್ಯೆಯಾಗಿ ನಾಮಕರಣಗೊಂಡಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ಸದನದಲ್ಲಿ ಕಳಪೆ ಹಾಜರಾತಿಗಾಗಿ ಇಬ್ಬರ ವಿರುದ್ಧವೂ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು.

ಆದರೆ ತೆಂಡೂಲ್ಕರ್ ತನ್ನ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ.

 ತೆಂಡೂಲ್ಕರ್ ಕಚೇರಿಯು ನೀಡಿರುವ ಮಾಹಿತಿಯಂತೆ ತನಗೆ ಮಂಜೂರಾಗಿದ್ದ 30 ಕೋ.ರೂ.ಗಳಲ್ಲಿ 7.40 ಕೋ.ರೂ.ಗಳ್ನು ಅವರು ದೇಶದ ವಿವಿಧೆಡೆಗಳಲ್ಲಿ ತರಗತಿ ಕೋಣೆಗಳ ನಿರ್ಮಾಣ ಮತ್ತು ನವೀಕರಣ ಸೇರಿದಂತೆ ಶಿಕ್ಷಣ ಮತ್ತು ಸಂಬಂಧಿತ ಕಾರ್ಯಗಳಿಗಾಗಿ ಬಳಕೆಯಾಗುವ ಯೋಜನೆಗಳಿಗೆ ಮಂಜೂರಿ ಮಾಡಿದ್ದಾರೆ.

ತೆಂಡೂಲ್ಕರ್ ಅವರು ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಆಂಧ್ರಪ್ರದೇಶದ ಪುಟ್ಟಂ ರಾಜು ಕಂಡ್ರಿಗಾ ಮತ್ತು ಮಹಾರಾಷ್ಟ್ರದ ದೋಂಜಾ ಗ್ರಾಮಗಳನ್ನು ದತ್ತು ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News