ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯದಲ್ಲಾದರೂ ಮೋದಿ ಮೌನ ಮುರಿಯಲಿ: ಕಾಂಗ್ರೆಸ್

Update: 2018-04-01 16:16 GMT

ಹೊಸದಿಲ್ಲಿ, ಎ.1: ಸಿಬಿಎಸ್‌ಇ ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯದಲ್ಲಿ ಪ್ರಧಾನಿ ಮೋದಿ ಮಾತನಾಡಬೇಕು ಮತ್ತು ಈ ಪ್ರಕರಣದಿಂದ ಭಾದಿತರಾಗಿರುವ ವಿದ್ಯಾರ್ಥಿಗಳಿಗೆ ಪರಿಹಾರವನ್ನು ಸೂಚಿಸಬೇಕು ಎಂದು ಕಾಂಗ್ರೆಸ್ ರವಿವಾರ ಆಗ್ರಹಿಸಿದೆ.

ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಇನ್ನೂ ಕೂಡಾ ಸ್ಪಷ್ಟತೆ ಲಭಿಸಿಲ್ಲ. ಹಾಗಾಗಿ ಇಷ್ಟೆಲ್ಲ ಗೊಂದಲ ನಡೆಯುತ್ತಿದೆ ಎಂದು ಕಾಂಗ್ರೆಸ್ ನಾಯಕ ಪವನ್ ಖೆರ ತಿಳಿಸಿದ್ದಾರೆ. ಈ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಮೋದಿಯವರು ಉತ್ತರಿಸಬೇಕು ಎಂದು ಖೆರ ಆಗ್ರಹಿಸಿದ್ದಾರೆ. ಈ ದೇಶದ ಯುವಜನತೆ ಸಿನಿಕರಾಗುತ್ತಿರುವುದು ದುರದೃಷ್ಟಕರ. ಇದು ಒಂದು ಗಂಭೀರ ವಿಷಯವಾಗಿದೆ. ಅರುಣ್ ಜೆಟ್ಲಿ ಮಾತನಾಡುತ್ತಿಲ್ಲ, ರವಿಶಂಕರ್ ಪ್ರಸಾದರದ್ದೂ ಅದೇ ಸ್ಥಿತಿ. ಇನ್ನು ಸ್ಮೃತಿ ಇರಾನಿ ಕೂಡಾ ಮೌನಕ್ಕೆ ಜಾರಿದ್ದಾರೆ. ಹಾಗಾಗಿ ಈ ಬಾರಿ ಮೋದೀಜಿ ಉತ್ತರ ನೀಡಬೇಕು ಮತ್ತು ಯುವಜನತೆಗೆ ಪರಿಹಾರವನ್ನು ಸೂಚಿಸಬೇಕು ಎಂದು ಖೆರ ಆಗ್ರಹಿಸಿದ್ದಾರೆ. ಸರಕಾರವು ಪೂರ್ಣಕಾಲಿಕ ರಾಜಕೀಯ ಮತ್ತು ಅರೆಕಾಲಿಕ ಆಡಳಿತದಲ್ಲಿ ತೊಡಗಿದೆ ಎಂದು ಆರೋಪಿಸಿದ ಖೆರ, ಕೇಂದ್ರವು ವಿದ್ಯಾರ್ಥಿಗಳು ಮತ್ತು ಹೆತ್ತವರನ್ನು ಕತ್ತಲಲ್ಲಿಟ್ಟಿದೆ ಎಂದು ದೂರಿದ್ದಾರೆ. ಕೇವಲ ದಿಲ್ಲಿ ಮತ್ತು ಎನ್ಸಿಆರ್‌ನ ವಿದ್ಯಾರ್ಥಿಗಳು ಮರುಪರೀಕ್ಷೆ ಬರೆದರೆ ಸಾಕು ಎಂದು ಪ್ರಕಾಶ್ ಜಾವಡೇಕರ್ ಹೇಳುತ್ತಾರೆ. ಆದರೆ ಜಾರ್ಖಂಡ್ ಪೊಲೀಸರು ಇಡೀ ದೇಶದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ತಿಳಿಸಿದ್ದಾರೆ. ಇದರಿಂದ ಯಾವುದರಲ್ಲೂ ಸ್ಪಷ್ಟತೆಯಿಲ್ಲದಂತಾಗಿದೆ. ಅವರು ನಮ್ಮ ಯುವಜನತೆಯ ಭವಿಷ್ಯದ ಜೊತೆ ಆಟವಾಡುತ್ತಿದ್ದಾರೆ ಎಂಬುದು ಅವರಿಗೆ ತಿಳಿಯುತ್ತಿಲ್ಲವೆ? ಎಂದು ಖೆರ ಪ್ರಶ್ನಿಸಿದ್ದಾರೆ.

ಈ ಪ್ರಕರಣದಲ್ಲಿ ಎಬಿವಿಪಿ ಮುಖಂಡನ ಬಂಧನವನ್ನು ಪ್ರಸ್ತಾಪಿಸಿ ಮಾತನಾಡಿದ ಖೆರ, ಸತೀಶ್ ಪಾಂಡೆ ಎಂಬಾತ ಸಂಘದ ಜೊತೆ ಸಂಪರ್ಕ ಹೊಂದಿದ್ದಾನೆ. ಅವನ ಬಳಿ ಹೇಗೆ ಪ್ರಶ್ನೆ ಪತ್ರಿಕೆ ತಲುಪಿತು? ಇದರಲ್ಲಿ ಪ್ರತಿ ಪದರದಲ್ಲೂ ರಹಸ್ಯ ಅಡಗಿದೆ ಎಂದು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಬಿಜೆಪಿ ಸರಕಾರ ಅಥವಾ ಯಾವುದೋ ನಾಯಕರ ಭಾಗಿದಾರಿಕೆಯಿದೆ. ಹಾಗಾಗಿ ಪ್ರಕರಣದ ತನಿಖೆ ನಡೆಯಬೇಕು ಎಂದು ಖೆರ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News