ಯೋಧ ತೇಜ್ ಬಹದ್ದೂರ್ ವೀಡಿಯೊ ಫಲಪ್ರದ
ಹೊಸದಿಲ್ಲಿ, ಎ. 1: ಆಹಾರದ ಗುಣಮಟ್ಟದ ಬಗ್ಗೆ ಪ್ರಶ್ನೆ ಎದುರಿಸಿದ ಬಳಿಕ ಗಡಿ ಭದ್ರತಾ ಪಡೆ, ಅರೆ ಸೈನಿಕ ಪಡೆಗಳ ಅಧಿಕಾರಿಗಳು ಹಾಗೂ ಯೋಧರಿಗೆ ನೀಡುತ್ತಿರುವ ಆಹಾರದ ಗುಣಮಟ್ಟ ಹಾಗೂ ಪ್ರಮಾಣ ಪರಿಶೀಲಿಸಲು ಡಿಆರ್‌ಡಿಒ (ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ)ವನ್ನು ನಿಯೋಜಿಸಿದೆ. ಯೋಧರಿಗೆ ಕರಟಿದ ಚಪಾತಿ, ನೀರು ಬೇಳೆ ಸಾರು ನೀಡಲಾಗುತ್ತಿದೆ ಎಂದು ಪ್ರತಿಪಾದಿಸಿ ಗಡಿ ಭದ್ರತಾಪಡೆಯ ಯೋಧ ತೇಜ್ ಬಹದ್ದೂರ್ ಸಾಮಾಜಿಕ ಜಾಲ ತಾಣದಲ್ಲಿ ವೀಡಿಯೋ ಅಪ್‌ಲೋಡ್ ಮಾಡಿದ ಒಂದು ವರ್ಷದ ಬಳಿಕ ಗಡಿ ಭದ್ರತಾ ಪಡೆ ಈ ಕ್ರಮ ಕೈಗೊಂಡಿದೆ.
ಸಂಸದೀಯ ಸಮಿತಿಯ ಶಿಫಾರಸಿನ ಹಿನ್ನೆಲೆಯಲ್ಲಿ ಮೊದಲ ಹೆಜ್ಜೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗಡಿ ಭದ್ರತಾ ಪಡೆಯ ಪ್ರಧಾನ ನಿರ್ದೇಶಕ ಕೆ.ಕೆ. ಶರ್ಮಾ ಹೇಳಿದ್ದಾರೆ.
ಗಡಿ ಭದ್ರತಾ ಪಡೆಯ ಭೋಜನ ಶಾಲೆಗಳಲ್ಲಿ ನೀಡುವ ಆಹಾರದ ಗುಣಮಟ್ಟ ಪರಿಶೀಲಿಸಲು ಡಿಆರ್‌ಡಿಒ ಪ್ರಯೋಗಶಾಲೆಯಲ್ಲಿ ನಡೆಸುವ ಅಧ್ಯಯನದ ವರದಿಯನ್ನು ನಾವು ಪಡೆಯಲಿದ್ದೇವೆ. ಈ ತಜ್ಞರು ಆಹಾರ ಸಿದ್ದಪಡಿಸುವ ಸಿಬ್ಬಂದಿ, ಬೋಜನ ಶಾಲೆ ನಡೆಸುತ್ತಿರುವವರು ಹಾಗೂ ಆಹಾರ ಸೇವಿಸುವವರ ಜೊತೆಗೆ ಸಂವಹನ ನಡೆಸಲಿದ್ದಾರೆ ಎಂದು ಅವರು ಹೇಳಿದ್ದಾರೆ.