ಕಾವೇರಿ ಜಲ ವಿವಾದ: ಅರ್ಜಿಯ ವಿಚಾರಣೆ ಎ.9ಕ್ಕೆ

Update: 2018-04-02 14:17 GMT

ಹೊಸದಿಲ್ಲಿ, ಎ.2: ಕಾವೇರಿ ಜಲ ವ್ಯವಸ್ಥಾಪನಾ ಮಂಡಳಿ ರಚಿಸದೆ ಇರುವುದನ್ನು ಪ್ರಶ್ನಿಸಿ ಕೇಂದ್ರದ ವಿರುದ್ಧ ತಮಿಳುನಾಡು ಸರಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಎಪ್ರಿಲ್ 9ರಂದು ನಡೆಸುವುದಾಗಿ ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ.

ತಮಿಳುನಾಡು ಪರ ವಕೀಲ ಜಿ. ಉಮಾಪತಿ ಈ ಪ್ರಕರಣವನ್ನು ತ್ವರಿತವಾಗಿ ಆಲಿಸುವಂತೆ ಶ್ರೇಷ್ಠ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಕಾವೇರಿ ಜಲಮಂಡಳಿ ರಚನೆಗೆ ನ್ಯಾಯಾಲಯವು ನೀಡಿರುವ ಗಡುವು ಕೊನೆಯಾಗಿದ್ದರೂ ಕೇಂದ್ರವು ಈ ಬಗ್ಗೆ ನಿರ್ಲಕ್ಷ ವಹಿಸಿರುವ ಕಾರಣ ಅರ್ಜಿಯ ವಿಚಾರಣೆಯನ್ನು ಮಂಗಳವಾರವೇ ಕೈಗೆತ್ತಿಕೊಳ್ಳುವಂತೆ ತಮಿಳುನಾಡು ಸರಕಾರ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ತಮಿಳುನಾಡಿನ ಸಮಸ್ಯೆ ನಮಗೆ ಅರ್ಥವಾಗುತ್ತದೆ. ತಮಿಳುನಾಡಿಗೆ ನೀರು ಸಿಗುವಂತೆ ನಾವು ನೋಡಿಕೊಳ್ಳುತ್ತೇವೆ ಮತ್ತು ಸಮಸ್ಯೆಯನ್ನು ಪರಿಹರಿಸುತ್ತೇವೆ ಎಂದು ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ನೇತೃತ್ವದ ಪೀಠವು ತಿಳಿಸಿದೆ.

ಕೇಂದ್ರದ ಮೇಲೆ ಒತ್ತಡ ತರುವ ಕ್ರಮವಾಗಿ ಎ.2ರಂದು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ತಮಿಳುನಾಡು ಸರಕಾರ ಘೋಷಿಸಿತ್ತು. ವಿರೋಧ ಪಕ್ಷಗಳು ರಾಜ್ಯದಲ್ಲಿ ಈಗಾಗಲೇ ಕೇಂದ್ರದ ನಡೆಯ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News