ಕೋಮು ಹಿಂಸಾಚಾರಕ್ಕೆ ಪ್ರಚೋದನೆ: ಪೊಲೀಸರಿಗೆ ಶರಣಾದ ಬಿಜೆಪಿ ಕಾರ್ಯಕರ್ತ

Update: 2018-04-02 14:22 GMT

ಪಟ್ನಾ, ಎ.2: ಮಾರ್ಚ್ 25-26ರಂದು ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ಕೋಮು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಬಿಜೆಪಿ ಕಾರ್ಯಕರ್ತ ಪೊಲೀಸರಿಗೆ ಶರಣಾಗಿದ್ದಾನೆ. ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಬಿಜೆಪಿ ಕಾರ್ಯಕರ್ತ ಅನಿಲ್ ಸಿಂಗ್ ಎರಡು ದಿನಗಳ ಹಿಂದೆ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದ. ಇದೀಗ ಮತ್ತೆ ಪೊಲೀಸರಿಗೆ ಶರಣಾಗಿದ್ದಾನೆ. ಆತನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸತ್ಯಪ್ರಕಾಶ್ ಸಿಂಗ್ ತಿಳಿಸಿದ್ದಾರೆ.

ಮಾರ್ಚ್ 25ರಂದು ಔರಂಗಬಾದ್ ಮೂಲಕ ರಾಮ ನವಮಿ ಮೆರವಣಿಗೆಯು ಸಾಗುತ್ತಿದ್ದ ವೇಳೆ ಹಿಂಸಾಚಾರ ಭುಗಿಲೆದ್ದಿತ್ತು. ಕಲ್ಲು ತೂರಾಟ ನಡೆಯಲು ಆರಂಭಿಸಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗಲಾಯಿತು. ಗಲಭೆಯನ್ನು ಹತೋಟಿಗೆ ತರುವ ಕ್ರಮವಾಗಿ ಪೊಲೀಸರು 150 ಜನರನ್ನು ವಶಕ್ಕೆ ಪಡೆದುಕೊಂಡಿದ್ದರು ಮತ್ತು ಪ್ರದೇಶದಲ್ಲಿ ಕರ್ಫ್ಯೂ ಹೇರಿದ್ದರು. ಹಿಂದೂ ಸೇವಾ ಸಮಿತಿಯ ಸದಸ್ಯನಾಗಿರುವ ಅನಿಲ್ ಸಿಂಗ್ ಹಿಂಸಾಚಾರಕ್ಕೆ ಪ್ರಚೋದನೆ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಪೊಲೀಸರು ಬಂಧಿಸಿದ 150 ಜನರ ಪೈಕಿ ಈತನೂ ಒಬ್ಬನಾಗಿದ್ದ. ಆದರೆ ಮಾರ್ಚ್ 29ರಂದು ಸಿಂಗ್ ಪೊಲೀಸ್ ಬಂಧನದಿಂದ ತಪ್ಪಿಸಿಕೊಂಡಿದ್ದ. ಶನಿವಾರದಂದು ಬಿಹಾರದ ಬಾಗಲ್ಪುರದಲ್ಲಿ ನಡೆದ ಹಿಂಸಾಚಾರದ ಪ್ರಮುಖ ರೂವಾರಿ ಕೇಂದ್ರ ಸಚಿವ ಅಶ್ವಿನಿ ಚೌಬೆಯವರ ಪುತ್ರ ಅರಿಜಿತ್ ಶಾಶ್ವತ್ ಒಂದು ವಾರ ಪೊಲೀಸರಿಂದ ತಲೆಮರೆಸಿಕೊಂಡ ನಂತರ ಶರಣಾಗಿದ್ದರು. ಸದ್ಯ ಶಾಶ್ವತ್‌ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ರಾಜ್ಯದ ನಿತೀಶ್ ಕುಮಾರ್ ಸರಕಾರ ಬಿಜೆಪಿ ಮತ್ತು ಸಂಘಪರಿವಾರದ ಅಪಾಯಕಾರಿ ವ್ಯಕ್ತಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಬಿಹಾರವು ಕೋಮುದಳ್ಳುರಿಗೆ ತುತ್ತಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ರಾಮ ನವಮಿ ಸಂದರ್ಭದಲ್ಲಿ ರಾಜ್ಯದ ವಿವಿಧೆಡೆಗಳಲ್ಲಿ ನಡೆದ ಕೋಮು ಹಿಂಸಾಚಾರಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೇ ಹೊಣೆಯೆಂದು ವಿರೋಧ ಪಕ್ಷಗಳು ಆರೋಪಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News